Seetha Rama Serial: ಭಾರ್ಗವಿ ತಾಳಕ್ಕೆ ಕುಣಿದು ಅಶೋಕ, ಅಂಜಲಿ ಕುಡಿಯುವ ಟೀಗೆ ಉಪ್ಪು ಹಾಕಿದ ಸಾಧನಾ! ಎಂಥ ಕೆಟ್ಟ ಮನಸ್ಸುಗಳಿವು ಎಂದ ವೀಕ್ಷಕ
Feb 10, 2024 06:30 AM IST
Seetha Rama Serial: ಭಾರ್ಗವಿ ತಾಳಕ್ಕೆ ಕುಣಿದು ಅಶೋಕ, ಅಂಜಲಿ ಕುಡಿಯುವ ಟೀಗೆ ಉಪ್ಪು ಹಾಕಿದ ಸಾಧನಾ! ಎಂಥ ಕೆಟ್ಟ ಮನಸ್ಸುಗಳಿವು ಎಂದ ವೀಕ್ಷಕ
- Seetha Rama Serial Friday Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲದತ್ತ ಸಾಗುತ್ತಿದೆ. ಶುಕ್ರವಾರದ ಏಪಿಸೋಡ್ನಲ್ಲಿ ಅಚ್ಚರಿಯ ಘಟನೆಗಳು ನಡೆದಿವೆ. ಅಶೋಕ ಮತ್ತು ಅಂಜಲಿ ಕುಡಿಯುವ ಟೀಗೆ ಉಪ್ಪು ಬೆರೆಸಿ ನೀಡಿದ್ದಾಳೆ ಸಾಧನಾ ಚಿಕ್ಕಿ. ಇದು ರಾಮನ ಗಮನಕ್ಕೂ ಬಂದಿದೆ.
Seetha Rama Serial: ಸೀತಾ ರಾಮ ಸೀರಿಯಲ್ನಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಒಂದು ಕಡೆ ಭಾರ್ಗವಿ ಒಂದಾದ ಮೇಲೊಂದು ಸಂಚು ರೂಪಿಸುತ್ತಿದ್ದಾರೆ, ಮತ್ತೊಂದು ಕಡೆ ಜೈಲಿನಲ್ಲಿದ್ದುಕೊಂಡೇ ಆ ಸೀತಾ ಮತ್ತು ರಾಮನ ಮುಗಿಸುವ ಪ್ಲಾನ್ ಹಾಕುತ್ತಿದ್ದಾನೆ ಲಾಯರ್ ರುದ್ರಪ್ರತಾಪ್. ಇದೀಗ ಸೀತಾ ರಾಮನ ಜತೆಗೆ ಅಶೋಕ ಮತ್ತವನ ತಂಗಿ ಅಂಜಲಿ ಮೇಲೂ ಕೆಟ್ಟ ದೃಷ್ಟಿ ನೆಟ್ಟಿದ್ದಾಳೆ ಭಾರ್ಗವಿ.
ದೇಸಾಯಿ ಒಡೆತನದ ಕಂಪನಿಗೆ ಅಶೋಕ ಸಿಒಒ ಆಗಿ ನೇಮಕಗೊಂಡಿದ್ದಾನೆ. ಸ್ವತಃ ರಾಮನೇ ಅಶೋಕನಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಾನೆ. ರಾಮನ ಈ ನಿಲುವು ಭಾರ್ಗವಿಯ ಕೋಪಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಆತನಿಗಾಗಿ ಒಂದೊಳ್ಳೆಯ ಮನೆಯನ್ನೂ ಕೊಟ್ಟಿದ್ದಾನೆ ರಾಮ. ಆ ಮನೆಯ ಪ್ರವೇಶದ ದಿನವೇ ಅಶೋಕ ಮತ್ತು ಅಂಜಲಿಗೆ ಅವಮಾನವಾಗಿದೆ.
ಮೊದಲೇ ಪಿಜಿ ಬಿಟ್ಟು ಬರಲ್ಲ ಎಂದಿದ್ದ ಅಂಜಲಿಗೆ ಒತ್ತಾಯ ಮಾಡಿ ಅಣ್ಣ ಅಶೋಕ ಕರೆಸಿಕೊಂಡಿದ್ದಾನೆ. ಆದರೆ, ಇದೇ ಮನೆಯಲ್ಲಿ ಅಶೋಕ ಮತ್ತು ಅಂಜಲಿಗೆ ಭಾರ್ಗವಿ ಪರೋಕ್ಷವಾಗಿ ಅವಮಾನ ಮಾಡಿದ್ದಾಳೆ. ತಾನು ಮಾಡಬೇಕಿದ್ದ ಕೆಲಸವನ್ನು ಸಾಧನಾ ಕೈಯಿಂದ ಮಾಡಿಸಿ, ಎಲ್ಲರ ಮುಂದೆ ಸಾಧನಾ ತಪ್ಪಿತಸ್ಥಳು ಎನ್ನವಂತೆಯೂ ಬಿಂಬಿಸಿದ್ದಾಳೆ. ಹಾಗಾದರೆ, ಅಷ್ಟಕ್ಕೂ ಆಗಿದ್ದೇನು?
ಅಂಜಲಿ ಕಡೆಯಿಂದ ಹಾಲು ಉಕ್ಕಿಸಿ ಎಲ್ಲರೂ ಸರಳವಾಗಿ ನೂತನ ಗೃಹಪ್ರವೇಶ ಮಾಡಿದ್ದಾರೆ. ಅದಾದ ಬಳಿಕ ಎಲ್ಲರಿಗೂ ಟೀ ಮಾಡಲು ಸಾಧನಾ ಮುಂದಾಗಿದ್ದಾಳೆ. ಅಷ್ಟೊತ್ತಿಗೆ ಅಡುಗೆ ಕೋಣೆಗೆ ಬಂದ ಭಾರ್ಗವಿ ಮತ್ತೆ ತನ್ನ ಕೆಟ್ಟಬುದ್ಧಿಯನ್ನು ಪ್ರಯೋಗಿಸಿದ್ದಾಳೆ. ಇಲ್ಲಸಲ್ಲದನ್ನು ಸಾಧನಾಳ ತಲೆಗೆ ತುಂಬಿ ಅಶೋಕ ಮತ್ತು ಅಂಜಲಿಯ ವಿರುದ್ಧವೇ ಎತ್ತಿಕಟ್ಟಲು ನೋಡಿದ್ದಾಳೆ.
ಅಷ್ಟಕ್ಕೇ ಮುಗಿಯಲ್ಲ. ಟೀ ಮಾಡುವಾಗ ಅಶೋಕ ಮತ್ತು ಅಂಜಲಿ ಕುಡಿಯುವ ಟೀಗೆ ಉಪ್ಪು ಹಾಕುವಂತೆಯೂ ಅವಳೇ ಆದೇಶ ಮಾಡಿದ್ದಾಳೆ. ಅಕ್ಕನ ಮಾತನ್ನೇ ಯಥಾವತ್ತಾಗಿ ಪಾಲಿಸಿದ ಸಾಧನಾ, ತನಗಾಗುತ್ತಿರುವ ನೋವು, ಎಲ್ಲರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇನೆ ಎಂಬ ಹತಾಶೆಯಿಂದಲೂ ಅಶೋಕ ಮತ್ತು ಅಂಜಲಿ ಕುಡಿಯುವ ಟೀ ಕಪ್ಗೆ ಉಪ್ಪು ಬೆರೆಸಿದ್ದಾಳೆ.
ಹಾಲ್ನಲ್ಲಿ ಕೂತಿದ್ದ ಎಲ್ಲರಿಗೂ ಸಾಧನಾ ಟೀ ನೀಡಿದ್ದಾಳೆ. ಅಶೋಕ ಮತ್ತು ಅಂಜಲಿ ಸಹ ಟೀ ಕುಡಿದಿದ್ದಾರೆ. ಅಷ್ಟೊತ್ತಿಗೆ ಚಹಾದಲ್ಲಿ ಉಪ್ಪು ಹಾಕಿದ ವಿಚಾರ ಇಬ್ಬರಿಗೂ ಗೊತ್ತಾಗಿದೆ. ಇಬ್ಬರೂ ಉಳಿದವರಿಗೆ ಒಳ್ಳೆಯ ಟೀ ಸಿಕ್ಕಿದೆ. ಈ ಇಬ್ಬರೂ ಟೀ ಕುಡಿಯುತ್ತಿರುವ ರೀತಿ ಕಂಡ ರಾಮ್, ಅಶೋಕ ಮತ್ತು ಅಂಜಲಿ ಕೈಯಲ್ಲಿನ ಟೀ ಕುಡಿದು ನೋಡಿದ್ದಾನೆ. ಅಷ್ಟರಲ್ಲಿ ಸತ್ಯ ಬಯಲಾಗಿದೆ.
ಜೋರು ಧ್ವನಿಯಲ್ಲಿ ಯಾರು ಟೀಗೆ ಉಪ್ಪು ಬೆರೆಸಿದ್ದು ಎಂದು ಗರಂ ಆಗಿದ್ದಾನೆ. ಟೀಗೆ ಉಪ್ಪು ಹಾಕಿದ್ದು ನಾನೇ ಎಂದು ಸಾಧನಾ ಚಿಕ್ಕಿ ಹೇಳಿದ್ದಾಳೆ. ಕೈಯಲ್ಲಿನ ಕಪ್ ನೆಲಕ್ಕೆ ಎಸೆದ ರಾಮ, ಮೊದಲ ಸಲ ಸಾಧನಾ ಚಿಕ್ಕಿ ಮೇಲೆ ರೇಗಿದ್ದಾನೆ. ಎಲ್ಲರ ಟೀ ಚೆನ್ನಾಗಿದೆ, ಇವರಿಬ್ಬರಿಗೇ ಯಾಕೆ ಹೀಗೆ ಮಾಡಿದ್ರಿ ಎಂದು ಕೂಗಾಡಿದ್ದಾನೆ. ಅಷ್ಟರಲ್ಲಿ, ಅಲ್ಲೇ ಇದ್ದ ಭಾರ್ಗವಿ ಒಳಗೊಳಗೇ ಗೆದ್ದ ಖುಷಿಯಲ್ಲಿದ್ದಾಳೆ. ಮುಂದೇನಾಯ್ತು? ರಾಮನ ಮುಂದಿನ ನಡೆ ಏನು? ಸೋಮವಾರದ ವರೆಗೂ ಕಾದು ನೋಡಬೇಕು.