Dr Bro: ನೈಜೀರಿಯನ್ ಯುವಕರ ಜತೆಗೆ ಡಾ ಬ್ರೋ ಮುಷ್ಠಿ ಯುದ್ಧ; ಸಾವಿರಾರು ಮಂದಿ ಎದುರು ತೊಡೆ ತಟ್ಟಿ ಗೆದ್ದ ಗಗನ್ ಶ್ರೀನಿವಾಸ್
Nov 29, 2024 12:33 PM IST
ನೈಜೀರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಗೆದ್ದ ಗಗನ್ ಶ್ರೀನಿವಾಸ್
- Dr Bro Kannada: ಮಾತಿನಲ್ಲಿ, ಬುದ್ಧಿವಂತಿಕೆಯಲ್ಲಿ ಚಾಣಾಕ್ಷನಾದರೂ, ಶಕ್ತಿಯಲ್ಲಿ ಡಾ. ಬ್ರೋ ಕೊಂಚ ಕೆಳಗಿದ್ದಾರೆ. ಈಗ ತಮ್ಮ ಆ ಶಕ್ತಿಗೆ ಸವಾಲು ಎಸೆದಿದ್ದಾರೆ. ಅಂದರೆ, ನೈಜೀರಿಯಾದಲ್ಲಿನ ಕಾನೋ ಪಟ್ಟಣಕ್ಕೆ ಡಾ. ಬ್ರೋ ಭೇಟಿ ನೀಡಿದ್ದಾರೆ. ಅಲ್ಲಿ ನಡೆದ ಮುಷ್ಠಿ ಕಾಳಗದಲ್ಲಿ ಭಾಗವಹಿಸಿ, ನೆರೆದಿದ್ದವರ ಕಣ್ಣಿಗೆ ಹಬ್ಬದಂತೆ ಕಂಡಿದ್ದಾರೆ.
Dr Bro Kannada: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿನೂತನ ವ್ಲಾಗ್ ಮೂಲಕವೇ ನಾಡಿನ ಗಮನ ಸೆಳೆದವರು ಯೂಟ್ಯೂಬರ್ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್. ಈಗಾಗಲೇ 25ಕ್ಕೂ ಅಧಿಕ ದೇಶಗಳನ್ನು ಸುತ್ತಿರುವ ಗಗನ್, ಸದ್ಯ ನೈಜೀರಿಯಾದಲ್ಲಿದ್ದಾರೆ. ಈಗಾಗಲೇ ಅಲ್ಲಿ ಹಲವು ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನೈಜಿರಿಯಾದ ನಿಜ ಬದುಕಿನ ಅನಾವರಣ ಮಾಡಿದ್ದಾರೆ. ಜತೆಗೆ ಅಲ್ಲಿನ ಜನಜೀವನ, ಆಹಾರ ಪದ್ಧತಿ ಸೇರಿ ಎಲ್ಲದರ ದರ್ಶನ ಮಾಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಡಾ. ಬ್ರೋಗೆ ಅಪಾರ ಅಭಿಮಾನಿಗಳಿದ್ದಾರೆ. ಝೀರೋ ಹೇಟರ್ಸ್ ಎಂಬ ಪಟ್ಟವನ್ನೂ ಪಡೆದಿರುವ ಗಗನ್ ಶ್ರೀನಿವಾಸ್ ಬಗ್ಗೆ ಹೆಮ್ಮೆ ಪಡುವವರೇ ಅಧಿಕ. ಈ ವಯಸ್ಸಿನಲ್ಲಿ ವಿದೇಶಿ ಪದ್ರವಾಸ ಮಾಡುತ್ತ, ಅಲ್ಲಿನ ವಿಶೇಷತೆಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದು, ನೋಡುಗನ ಮುಂದಿಡುವ ಅವರ ಪ್ರಯತ್ನ ಸಣ್ಣದೇನಲ್ಲ. ಗೊತ್ತಿಲ್ಲದ ದೇಶಕ್ಕೆ, ಗೊತ್ತಿಲ್ಲದ ಭಾಷೆಯ ನಡುವೆ, ಗೊತ್ತಿಲ್ಲದ ಜನರ ನಡುವೆ ಕೆಲ ಕಾಲ ಕಳೆದು ಬರುವುದು ಅಸಾಧ್ಯವಾದ ಮಾತು. ಆದರೆ, ಕೆಲಸವನ್ನು ಕಳೆದ ಕೆಲ ವರ್ಷಗಳಿಂದ ಮಾಡುತ್ತ ಬರುತ್ತಿದ್ದಾರೆ ಗಗನ್ ಶ್ರೀನಿವಾಸ್.
ಸಾಕಷ್ಟು ಎಡವಟ್ಟು ಎದುರಿಸಿದ್ದಾರೆ ಬ್ರೋ
ಹೀಗೆ ದೇಶ ಸುತ್ತುವಾಗ ಕೆಲವೊಮ್ಮೆ ಎಡವಟ್ಟುಗಳಾದ ಉದಾಹರಣೆಗಳೂ ಇವೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದು ಉಂಟು. ಕೆಲವೊಮ್ಮೆ ಬೇಕು ಅಂತಲೇ ಪ್ರಯೋಗಗಳನ್ನು ಮಾಡಿದ್ದಾರೆ ಡಾ. ಬ್ರೋ. ಈಗ ಅಂಥದ್ದೇ ಇನ್ನೊಂದು ಸಾಹಸಕ್ಕೆ ಇಳಿದಿದ್ದಾರೆ. ಮಾತಿನಲ್ಲಿ, ಬುದ್ಧಿವಂತಿಕೆಯಲ್ಲಿ ಚಾಣಾಕ್ಷನಾದರೂ, ಶಕ್ತಿಯಲ್ಲಿ ಡಾ. ಬ್ರೋ ಕೊಂಚ ಕೆಳಗಿದ್ದಾರೆ. ಈಗ ತಮ್ಮ ಆ ಶಕ್ತಿಗೆ ಸವಾಲು ಎಸೆದಿದ್ದಾರೆ. ಅಂದರೆ, ನೈಜೀರಿಯಾದಲ್ಲಿನ ಕಾನೋ ಪಟ್ಟಣಕ್ಕೆ ಡಾ. ಬ್ರೋ ಭೇಟಿ ನೀಡಿದ್ದಾರೆ. ಅಲ್ಲಿ ನಡೆದ ಮುಷ್ಠಿ ಕಾಳಗದಲ್ಲೂ ಭಾಗವಹಿಸಿ, ನೆರೆದಿದ್ದವರ ಕಣ್ಣಿಗೆ ಹಬ್ಬದಂತೆ ಕಂಡಿದ್ದಾರೆ.
ಮುಷ್ಠಿ ಯುದ್ಧದ ಅಖಾಡದಲ್ಲಿ ಗಗನ್
ನೈಜೀರಿಯಾದ ಕಾನೋ ಸಿಟಿಯಲ್ಲಿ ಫೈಟಿಂಗ್ ಆಯೋಜಿಸಲಾಗಿತ್ತು. ಸಾಕಷ್ಟು ಘಟಾನುಘಟಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದೇ ಫೈಟಿಂಗ್‌ನಲ್ಲಿ ಡಾ. ಬ್ರೋ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಮುಷ್ಠಿಗೆ ಹಗ್ಗ ಸುತ್ತಿಕೊಂಡು, ಅಲ್ಲಿದ್ದ ಹಿರಿಯ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಮುಷ್ಠಿ ಯುದ್ಧದ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿ ಸ್ಪರ್ಧಿಯೂ ಡಾ. ಬ್ರೋ ಅವರಿಗೆ ಸರಿಯಾಗಿಯೇ ಗುನ್ನ ಕೊಟ್ಟಿದ್ದಾರೆ. ಆತನ ಏಟು ತಪ್ಪಿಸಿಕೊಳ್ಳಲು ಮೈದಾನದ ತುಂಬೆಲ್ಲ ಓಡಾಡಿದ್ದಾರೆ.
ಗೆದ್ದವರು ಯಾರು, ಸೋತವರು ಯಾರು?
ಈ ಮುಷ್ಠಿ ಯುದ್ಧದಲ್ಲಿ ಭಾಗವಹಿಸುವುದಕ್ಕೂ ಮೊದಲು, ಈ ಆಟದ ರೂಲ್ಸ್ ಹೇಗೆ ಎಂಬುದನ್ನು ಅರಿತು, ಒಂದಷ್ಟು ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಎದುರಾಳಿಯನ್ನು ಮಣಿಸುವುದು ಹೇಗೆ, ಅದಕ್ಕೆ ತಕ್ಕಂತೆ ನಮ್ಮ ಪಟ್ಟುಗಳು ಹೇಗಿರಬೇಕು ಎಂಬುದನ್ನೂ ತಿಳಿದುಕೊಂಡಿದ್ದಾರೆ. ಕೊನೆಗೆ ಅದೇ ಎದುರಾಳಿಯ ಮುಂದೆ ತೊಡೆ ತಟ್ಟಿ, ಅವನನ್ನು ಸೋಲಿಸಿ ವಿಜಯದ ಮಾಲೆ ಧರಿಸಿದ್ದಾರೆ. ಈ ಕಿರು ವಿಡಿಯೋ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಗಗನ್ ಶೇರ್ ಮಾಡಿಕೊಂಡಿದ್ದಾರೆ. ಡಾ. ಬ್ರೋ ಸಾಹಸಕ್ಕೆ ನೆಟ್ಟಿಗರೂ, ಹೌದು ಹುಲಿಯಾ ಎಂದು ಶಹಬ್ಬಾಷ್ ಎಂದಿದ್ದಾರೆ.