logo
ಕನ್ನಡ ಸುದ್ದಿ  /  ಮನರಂಜನೆ  /  Max Movie: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಬೇಕಿದ್ದ ಕಿಚ್ಚ ಸುದೀಪ್ ಮ್ಯಾಕ್ಸ್‌ ಸಿನಿಮಾದಿಂದ ಬೇಸರದ ಸುದ್ದಿ

Max Movie: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಬೇಕಿದ್ದ ಕಿಚ್ಚ ಸುದೀಪ್ ಮ್ಯಾಕ್ಸ್‌ ಸಿನಿಮಾದಿಂದ ಬೇಸರದ ಸುದ್ದಿ

Dec 14, 2024 10:49 PM IST

google News

ಕಿಚ್ಚ ಸುದೀಪ್ ಮ್ಯಾಕ್ಸ್‌ ಸಿನಿಮಾದಿಂದ ಬೇಸರದ ಸುದ್ದಿ

    • Max Movie: ಕಿಚ್ಚ ಸುದೀಪ್‌ ಅವರ ಮ್ಯಾಕ್ಸ್‌ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್‌ 25ರಂದು ತೆರೆಗೆ ಬರಲಿರುವ ಈ ಸಿನಿಮಾ ಸೆನ್ಸಾರ್‌ ಅಂಗಳದಿಂದಲೂ ಪ್ರಮಾಣ ಪತ್ರ ಪಡೆದುಕೊಂಡಿದೆ. ಈ ನಡುವೆ ಅಚ್ಚರಿಯ ಸಂಗತಿ ಏನೆಂದರೆ,  ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿಲ್ಲ.  
ಕಿಚ್ಚ ಸುದೀಪ್ ಮ್ಯಾಕ್ಸ್‌ ಸಿನಿಮಾದಿಂದ ಬೇಸರದ ಸುದ್ದಿ
ಕಿಚ್ಚ ಸುದೀಪ್ ಮ್ಯಾಕ್ಸ್‌ ಸಿನಿಮಾದಿಂದ ಬೇಸರದ ಸುದ್ದಿ

Max Movie: ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರ ಇದೇ ಡಿಸೆಂಬರ್ 25ರಂದು‌ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಆದರೆ, ಇದೀಗ ಇದೇ ಸಿನಿಮಾದಿಂದ ಅಚ್ಚರಿಯ ಬೆಳವಣಿಗೆಯೊಂದು ಹೊರಬಿದ್ದಿದೆ. ಇಲ್ಲಿಯವರೆಗೂ ಪ್ಯಾನ್‌ ಇಂಡಿಯಾ ಎಂದು ಹೇಳಿಕೊಂಡಿದ್ದ ಈ ಸಿನಿಮಾ ಈಗ ಕೇವಲ ಸೌತ್‌ನ ಮೂರು ಭಾಷೆಗಳಲ್ಲಿ ಮಾತ್ರ ಬಿಡುಗಡೆಗೆ ಸಜ್ಜಾಗಿದೆ.

ಕಲೈಪುಲಿ ಎಸ್ ದಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈಗ ಇದೇ ಸಿನಿಮಾ ಐದು ಭಾಷೆಯ ಬದಲು ಕೇವಲ ಮೂರು ಭಾಷೆ ಅಂದರೆ, ಕನ್ನಡ, ತೆಲುಗು, ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆ. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ಕಲೈಪುಲಿ ದಾನು ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಯು\ಎ ಪ್ರಮಾಣ ಪತ್ರ ಸಿಕ್ಕಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿ ಡಿ. 25ರಂದು ರಿಲೀಸ್‌

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಸದ್ಯಕ್ಕೆ ಆ ಎರಡು ಭಾಷೆಗಳ ಬಗ್ಗೆ ಯಾವುದೇ ಅಪ್‌ಡೇಟ್‌ ಸುದ್ದಿ ಹೊರಬಿದ್ದಿಲ್ಲ. ಹಾಗಾಗಿ ಮೂರು ಭಾಷೆಗಳಷ್ಟೇ ಸದ್ಯಕ್ಕೆ ಅಧಿಕೃತವಾಗಿದೆ. ಇದರಲ್ಲಿಯೇ ಇನ್ನೊಂದು ಬಿಗ್‌ ಟ್ವಿಸ್ಟ್‌ ಸಹ ಇದೆ. ಡಿಸೆಂಬರ್‌ 25ರಂದೇ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಕನ್ನಡ ಸಿನಿಮಾ ತೆರೆಕಂಡ ನಂತರ ತಮಿಳು ಮತ್ತು ತೆಲುಗು ರಿಲೀಸ್ ಆಗಲಿದೆ.

ಕ್ರಿಸ್‌ಮಸ್‌ ರಜೆ; ಹೆಚ್ಚಿದ ಸಿನಿ ಟ್ರಾಫಿಕ್‌

ಡಿಸೆಂಬರ್‌ 25ಕ್ಕೆ ಕನ್ನಡ ಅವತರಣಿಕೆ ಕರ್ನಾಟಕದಲ್ಲಿ ರಿಲೀಸ್‌ ಆದರೆ, ಇನ್ನುಳಿದ ತೆಲುಗು ಮತ್ತು ತಮಿಳು ಅವತರಣಿಕೆ ಸಿನಿಮಾ ಡಿಸೆಂಬರ್‌ 27ರಂದು ತೆರೆಗೆ ಬರಲಿದೆ. ಈ ಬದಲಾವಣೆಗೆ ಕಾರಣ ಏನಿರಬಹುದು? ಡಿಸೆಂಬರ್‌ 25ರಂದು ಕ್ರಿಸ್‌ಮಸ್‌. ಸಾಲು ಸಾಲು ರಜೆ ಇರೋದ್ರಿಂದ ಬೇರೆ ಭಾಷೆಗಳ ದೊಡ್ಡ ದೊಡ್ಡ ಸಿನಿಮಾಗಳೂ ತೆರೆಗೆ ಬರುತ್ತಿವೆ. ಹಿಂದಿಯಲ್ಲಿ ವರುಣ್‌ ಧವನ್‌ ಅವರ ಬೇಬಿ ಜಾನ್‌, ಮಲಯಾಳಂನಲ್ಲಿ ಮೋಹನ್‌ ಲಾಲ್‌ ನಟಿಸಿ, ನಿರ್ದೇಶಿಸಿದ ಪ್ಯಾನ್‌ ಇಂಡಿಯಾ ಬರೋಜ್‌ ಸಿನಿಮಾ ತೆರೆಗೆ ಬರಲಿದೆ. ಇದರಿಂದ ನಿರೀಕ್ಷಿತ ಪ್ರಮಾಣದ ಸ್ಕ್ರೀನ್‌ಗಳು ಸಿಗದ ಹಿನ್ನೆಲೆಯಲ್ಲಿ ತೆಲುಗು, ತಮಿಳಿನಲ್ಲಿ ಎರಡು ದಿನಗಳ ಬಳಿಕ ಮ್ಯಾಕ್ಸ್ ಸಿನಿಮಾ ರಿಲೀಸ್‌ ಆಗಲಿದೆ.

ಹೀಗಿದೆ ಪಾತ್ರವರ್ಗ, ತಾಂತ್ರಿಕ ಬಳಗ

ಮ್ಯಾಕ್ಸ್‌ ಚಿತ್ರದಲ್ಲಿ ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್‍ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್ ಸೇರಿ ಹಲವರು ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ನೀಡಿದರೆ, ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಚೇತನ್‍ ಡಿಸೋಜ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶಿವಕುಮಾರ್ ಅವರ ಕಲಾ ನಿರ್ದೇಶನ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ