Kids Story: ತೋಳ ಬಂತು ತೋಳ, ಗುಲಾಬಿ ಗಿಡ ಪಾಪಸ್ ಕಳ್ಳಿ, ಚಿನ್ನದ ಮೊಟ್ಟೆ ಇಡುವ ಕೋಳಿ- ಮಕ್ಕಳ ಕಥೆಗಳು
Aug 19, 2024 01:46 PM IST
ಮಕ್ಕಳ ಕಥೆಗಳು- ತೋಳ ಬಂತು ತೋಳ, ಚಿನ್ನದ ಮೊಟ್ಟೆ ಇಡುವ ಕೋಳಿ ಮತ್ತು ಇತರೆ ಕಥೆಗಳು
- Kids Story (ಮಕ್ಕಳ ಕಥೆಗಳು): ಮಕ್ಕಳಿಗೆ ರಜಾ ದಿನಗಳಂದು ಮೊಬೈಲ್ ಕೈಗೆ ನೀಡುವ ಬದಲು ನೀತಿಕಥೆಗಳನ್ನು ಹೇಳಬಹುದು. ಇದರಿಂದ ಮಕ್ಕಳಲ್ಲಿ ನೈತಿಕ ಪ್ರಜ್ಞೆ, ಒಳ್ಳೆಯ ಗುಣಗಳು ಹೆಚ್ಚುತ್ತವೆ. ಇಂದು ತೋಳಬಂತು ತೋಳ, ಗುಲಾಬಿ ಮತ್ತು ಕಳ್ಳಿ, ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಗಳನ್ನು ಮುದ್ದು ಮಕ್ಕಳಿಗೆ ಹೇಳಿರಿ (Kids Story in Kannada).
Kids Story: ಮಕ್ಕಳಿಗೆ ಕಥೆ ಹೇಳುವುದೆಂದರೆ ಇಷ್ಟ. ಮೊದಲೆಲ್ಲ ಅಜ್ಜ ಅಜ್ಜಿ ತನ್ನ ಮೊಮ್ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರು. ನಿದ್ರೆಗೆ ಮುನ್ನ ಪ್ರತಿನಿತ್ಯ ಒಂದಾದರೂ ಕಥೆ ಕೇಳಿಯೇ ಮಕ್ಕಳನ್ನು ಮಲಗಿಸುತ್ತಿದ್ದರು. ಈಗಿನ ಹೆತ್ತವರು ಮಕ್ಕಳಿಗೆ ಮಕ್ಕಳಿಗೆ ಕಥೆ ಹೇಳೋದಿಲ್ಲ ಎನ್ನುವ ದೂರಿದೆ. ಆದರೆ, ಒಂದಿಷ್ಟು ಹೆತ್ತವರು ಇಂಟರ್‌ನೆಟ್‌ನಲ್ಲಿ ಹುಡುಕಿ ಅಥವಾ ಕಿಡ್ಸ್ ಸ್ಟೋರಿ ಬುಕ್ಸ್ ಖರೀದಿಸಿಯಾದರೂ ಮಕ್ಕಳಿಗೆ ಕಥೆ ಹೇಳುತ್ತಾರೆ. ಈ ರೀತಿ ಮಕ್ಕಳಿಗೆ ಕಥೆ ಹೇಳಲು ಬಯಸುವವರಿಗೆ ಇಲ್ಲಿ ಮೂರು ಕಥೆಗಳಿವೆ. ಇವುಗಳಲ್ಲಿ ಹೆಚ್ಚಿನ ಕಥೆ ನಿಮಗೆ ನೆನಪಿರಬಹುದು. ಈ ಕಥೆಗಳು ಬೇರೆಬೇರೆ ರೂಪದಲ್ಲಿ ಪ್ರಚಲಿತದಲ್ಲಿವೆ. ತೋಳ ಬಂತು ತೋಳ ಕಥೆಯು ಮೊಸಳೆ ಬಂತು ಮೊಸಳೆ ರೂಪದಲ್ಲೂ ಇವೆ. ಬನ್ನಿ ಮೂರು ಮಕ್ಕಳ ಕಥೆಗಳನ್ನು ಓದೋಣ.
ಮಕ್ಕಳ ಕಥೆಗಳು: ತೋಳ ಬಂತು ತೋಳ (The Boy Who Cried Wolf)
ಒಂದು ಹಳ್ಳಿಯಲ್ಲಿ ಒಬ್ಬ ಬಾಲಕ ಇದ್ದ. ಆತನಿಗೆ ಕುರಿ ಮೇಯಿಸೋ ಕೆಲಸ. ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಯಲು ಪ್ರದೇಶಕ್ಕೆ ಹೋಗಿ ಕುರಿ ಮೇಯಿಸುವ ಕೆಲಸವನ್ನು ಪ್ರತಿನಿತ್ಯ ಮಾಡುತ್ತಿದ್ದ. ಕುರಿ ಮೇಯಿಸೋ ಸಮಯದಲ್ಲಿ ಬೇಸರವಾದರೆ ಏನಾದರೂ ಆಟವಾಡುತ್ತ ಸಮಯ ಕಳೆಯುತ್ತಿದ್ದನು. ಎಲ್ಲಾದರೂ ಕುರಿಗಳನ್ನು ಮೇಯಿಸುವ ಸಮಯದಲ್ಲಿ ತೋಳ ಬಂದರೆ ಜೋರಾಗಿ ನಮ್ಮನ್ನು ಕರೆ ಎಂದು ಗ್ರಾಮಸ್ಥರು ಹೇಳಿದ್ದರು. ಇಂದ್ಯಾಕೋ ಆತನಿಗೆ ಹೇಗೆ ಟೈಂಪಾಸ್ ಮಾಡುವುದು ಎಂದು ತಿಳಿಯಲಿಲ್ಲ. ಸುಮ್ಮನೆ "ತೋಳ ತೋಳ" ಎಂದು ಕೂಗಿಕೊಂಡರೆ ಗ್ರಾಮಸ್ಥರು ಬರ್ತಾರೆ ಎಂದುಕೊಂಡ. "ಅಯ್ಯೋ ಯಾರಾದ್ರೂ ಬನ್ನಿ, ಕುರಿ ಹಿಡಿಯಲು ತೋಳ ಬಂತು" ಎಂದು ಜೋರಾಗಿ ಕೂಗಿಕೊಂಡ. ಊರವರೆಲ್ಲ ಓಡೋಡಿ ಬಂದ್ರು. ಎಲ್ಲಿ ಹುಡುಕಿದರೂ ತೋಳ ಕಾಣಿಸಲಿಲ್ಲ. ಊರವರು ವಾಪಸ್ ಹೋದರು. ಬಾಲಕನಿಗೆ ಇದರಿಂದ ಖುಷಿಯಾಯ್ತು.
ಮತ್ತೊಂದು ದಿನ. ಇದೇ ರೀತಿ ಮಾಡಿದ. ತೋಳ ತೋಳ ಎಂದು ಕೂಗಿಕೊಂಡು ಓಡಿದ. ಊರವರೆಲ್ಲ ದೊಣ್ಣೆ ಎತ್ತಿಕೊಂಡು ಬಂದರು. ಎಲ್ಲೂ ತೋಳ ಕಾಣಿಸಲಿಲ್ಲ. ಹುಡುಗ ಸುಳ್ಳು ಹೇಳಿದ್ದಾನೆ ಎಂದು ನಗುತ್ತಾ ವಾಪಸ್ ಹೋದ್ರು. ಇನ್ನೊಂದು ದಿನವೂ ಹುಡುಗ ಇದೇ ರೀತಿ ಮಾಡಿದ. ಕೆಲವು ಗ್ರಾಮಸ್ಥರು ಬಂದು ಹುಡುಕಿದರು. ಎಲ್ಲೂ ಕಾಣಿಸಲಿಲ್ಲ. "ಮಾಡೋಕ್ಕೆನೂ ಕೆಲಸ ಇಲ್ಲ!" ಎಂದುಕೊಂಡು ವಾಪಸ್ ಹೋದ್ರು.
ಅವತ್ತು ಆ ಹುಡುಗ ಕುರಿ ಮೇಯಿಸ್ತಾ ಇದ್ದ. ಸಂಜೆಯಾಯಿತು. ವಾಪಸ್ ಕುರಿಗಳನ್ನು ದೊಡ್ಡಿಗೆ ಬಿಡೋಣ ಎಂದು ರೆಡಿಯಾಗುತ್ತಿದ್ದ. ಆಗ ಬಂತು ನೋಡಿ ನಿಜವಾದ ತೋಳ. ಕುರಿ ಮಂದೆ ಮೇಲೆ ದಾಳಿ ಮಾಡ್ತು. ಭಯಗೊಂಡ ಹುಡುಗ ಹಳ್ಳಿಯತ್ತ "ತೋಳ ತೋಳ" ಎಂದು ಕೂಗುತ್ತ ಓಡಿದ. ಆದರೆ, ಇವನು ಸುಳ್ಳು ಹೇಳುತ್ತಿದ್ದಾನೆ ಎಂದು ಊರವರು ಬರಲೇ ಇಲ್ಲ. ತೋಳವು ಹಲವು ಕುರಿಗಳನ್ನು ತಿಂದಿತ್ತು. ಇದನ್ನು ನೋಡಿ ಹುಡುಗ ಅಳುತ್ತ ಕೂತ. ಇನ್ಮುಂದೆ ಸುಳ್ಳು ಹೇಳೋದಿಲ್ಲ ಎಂದು ನಿರ್ಧಾರ ಮಾಡಿದ.
ನೀತಿ: ಸುಳ್ಳುಗಾರರು ಸತ್ಯವನ್ನು ಹೇಳಿದರೂ ಯಾರು ನಂಬೋದಿಲ್ಲ.
- ಮಕ್ಕಳೇ ಸುಳ್ಳು ಹೇಳಬೇಡಿ. ಅದು ಅಭ್ಯಾಸವಾಗುತ್ತದೆ. ಮುಂದೆ ನೀವು ಸತ್ಯ ಹೇಳಿದರೂ ಯಾರೂ ನಂಬೋದಿಲ್ಲ.
ಇದನ್ನೂ ಓದಿ: ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು
ಮಕ್ಕಳ ಕಥೆಗಳು: ಗುಲಾಬಿ ಗಿಡ ಮತ್ತು ಪಾಪಸ್ ಕಳ್ಳಿ
ಒಂದು ಗುಲಾಬಿ ಗಿಡ ಮತ್ತು ಒಂದು ಪಾಪಸ್ ಕಳ್ಳಿ ಗಿಡ ಅಕ್ಕಪಕ್ಕ ಇದ್ದವು. ಸುಂದರವಾದ ಗುಲಾಬಿ ಗಿಡಕ್ಕೆ ತುಂಬಾ ಅಹಂಕಾರ. ನಾನೇ ಚಂದ. ಎಲ್ಲರನ್ನೂ ನನ್ನ ಸೌಂದರ್ಯ ಹೊಗಳ್ತಾರೆ ಅನ್ನೋ ಅಹಂಕಾರ. ಸಮಯ ಸಿಕ್ಕಾಗಲೆಲ್ಲ ಪಾಪಸ್ ಕಳ್ಳಿಯನ್ನು ಅವಮಾನಿಸುತ್ತಿತ್ತು. ಅಯ್ಯೋ ಎಷ್ಟು ಕುರುಪವಾಗಿದ್ದಿಯಾ... ಎಂದೆಲ್ಲ ಹಂಗಿಸುತ್ತಿತ್ತು. ಆ ವರ್ಷ ಬೇಸಿಗೆ ವಿಪರೀತವಾಗಿತ್ತು. ಬಿಸಿಲೋ ಬಿಸಿಲು. ನೀರಿಲ್ಲದೆ ಎಲ್ಲರೂ ತೊಂದರೆ ಅನುಭವಿಸಿದರು. ಭೂಮಿ ಒಣಗತೊಡಗಿತು. ಗುಲಾಬಿ ಗಿಡ ಒಣಗಲು ಆರಂಭವಾಯಿತು. ಹಕ್ಕಿಗಳಿಗೆ ಪಾಪಸ್ ಕಳ್ಳಿ ನೀರಿನ ಮೂಲವಾಯಿತು. ಈ ಸಂದರ್ಭದಲ್ಲಿ ಗುಲಾಬಿ ಗಿಡ ತನ್ನ ಅಹಂ ಬಿಟ್ಟು ಪಾಪಸ್ ಕಳ್ಳಿ ಬಳಿ ನೀರು ಕೇಳಿತು. ಪಾಪಸ್ ಕಳ್ಳಿ ತುಂಬಾ ಒಳ್ಳೆಯವಳು. ಗುಲಾಬಿಗೆ ನೀರು ಕೊಟ್ಟಳು.
ನೀತಿ ಪಾಠ: ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕಿಂತ ಗುಣವನ್ನು ನೋಡಿ, ಶಾಲೆಯಲ್ಲಿ ನಿಮ್ಮ ಗೆಳೆಯ ಗೆಳತಿಯರನ್ನು ಕುರೂಪ, ಕುರೂಪಿ ಎಂದೆಲ್ಲ ಟೀಕಿಸಬೇಡಿ.
- ಮಕ್ಕಳೇ ನಿಮ್ಮ ಶಾಲೆಯಲ್ಲಿರುವ ಗೆಳತಿಯರು ಗೆಳೆಯರು ನೋಡಲು ಬೇರೆಬೇರೆ ರೀತಿ ಇರಬಹುದು. ದೇವರು ಒಬ್ಬೊರೊಬ್ಬರಿಗೆ ಒಂದೊಂದು ರೀತಿ ಸೌಂದರ್ಯ ನೀಡಿರುತ್ತಾರೆ. ಸಹಪಾಠಿಗಳ ದೇಹದ ಬಣ್ಣ, ಆಕಾರ ಇತ್ಯಾದಿಗಳನ್ನು ನೋಡಿ ಟೀಕಿಸಬೇಡಿ. ಸೌಂದರ್ಯ ಶಾಶ್ವತವಲ್ಲ, ನಮ್ಮಲ್ಲಿರುವ ಒಳ್ಳೆಯ ಗುಣ ಸದಾ ನಮ್ಮ ಜತೆ ಇರುತ್ತದೆ.
ಮಕ್ಕಳ ಕಥೆಗಳು: ಚಿನ್ನದ ಮೊಟ್ಟೆ ಇಡುವ ಕೋಳಿ
ಒಬ್ಬ ರೈತನಿದ್ದ. ಆತನ ಕಷ್ಟ ನೋಡಿ ಕರಗಿದ ದೇವರು ಆತನಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ನೀಡಿದನು. ಆ ಕೋಳಿ ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿತ್ತು. ಪ್ರತಿದಿನ ಆ ಮೊಟ್ಟೆಯನ್ನು ಮಾರಿ ಹಣ ಸಂಪಾದನೆ ಮಾಡುತ್ತಿದ್ದ. ಇದರಿಂದ ಈತನ ಜೀವನ ಚೆನ್ನಾಗಿತ್ತು. ಒಳ್ಳೆಯ ಮನೆ ಕಟ್ಟಿಸಿದ. ಮಕ್ಕಳನ್ನು ದುಬಾರಿ ಕಾನ್ವೆಂಟ್ ಸ್ಕೂಲ್‌ಗೂ ಸೇರಿಸಿದ. ದಿನಕ್ಕೆ ಒಂದು ಮೊಟ್ಟೆ ಯಾಕೆ, ಕೋಳಿ ಹೊಟ್ಟೆಯಲ್ಲಿರುವ ಎಲ್ಲಾ ಚಿನ್ನದ ಮೊಟ್ಟೆಯನ್ನು ಪಡೆಯಬೇಕೆಂಬ ದುರಾಸೆ ಮೂಡಿತು. ಆತನ ಹೆಂಡತಿ, ಬೇಡ ನಮಗೆ ಇಷ್ಟು ಸಂಪತ್ತು ಸಾಕು ಎಂದಳು. ಆತ ಕೇಳಲಿಲ್ಲ. ಕೋಳಿಯನ್ನು ಕತ್ತರಿಸಿಬಿಟ್ಟ. ಕೋಳಿ ಸತ್ತು ಹೋಯಿತು. ಕೋಳಿಯ ಹೊಟ್ಟೆಯೊಳಗೆ ರಕ್ತ ಮತ್ತು ಕರಳು ಇದ್ದವು. ಅವನಿಗೆ ಈಗ ತನ್ನ ತಪ್ಪಿನ ಅರಿವಾಯ್ತು. ಅಂದಿನಿಂದ ಆತನಿಗೆ ಚಿನ್ನದ ಮೊಟ್ಟೆ ಸಿಗಲಿಲ್ಲ. ಸಾಲ ಹೆಚ್ಚಾಯ್ತು. ಆ ದಂಪತಿ ಮತ್ತೆ ಕಡುಬಡವರಾದರು.
ನೀತಿ: ಅತಿಯಾಸೆ ಒಳ್ಳೆಯದಲ್ಲ. ಏನಾದರೂ ನಿರ್ಧಾರ ಕೈಗೊಳ್ಳುವ ಮೊದಲು ಹಲವು ಬಾರಿ ಯೋಚಿಸಿ
- ಮಕ್ಕಳೇ ಪರೀಕ್ಷೆಗೆ ಒಂದೆರಡು ದಿನ ಇರುವಾಗ ಓದಲು ಆರಂಭಿಸಬೇಡಿ. ಆಯಾ ದಿನದ ಪಾಠವನ್ನು ಅಂದಂದೇ ಓದಿ.
- ರಾತ್ರಿ ಬೆಳಗಾಗುವ ಮೊದಲು ಒಂದೇ ದಿನದಲ್ಲಿ ಶ್ರೀಮಂತರಾಗುವ ಕನಸು ಕಾಣಬೇಡಿ. ಕಷ್ಟಪಟ್ಟು ಓದಿದರೆ, ಕಷ್ಟಪಟ್ಟು ದುಡಿದರೆ, ಒಳ್ಳೆಯ ಗುರಿ ತಲುಪಲು ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ನಿಮ್ಮದಾಗುತ್ತದೆ.