ಬ್ರಾಹ್ಮಣ ಅರ್ಚಕರ ಜತೆ ಆತ್ಮೀಯವಾಗಿ ಫೋಟೋಗೆ ಪೋಸ್ ನೀಡಿ, ಸಫಾಯಿ ಕರ್ಮಚಾರಿಗಳು ಹತ್ತಿರ ಬರ್ತಿದ್ದಂತೆ ಹೀಗ್ಯಾಕೆ ಮಾಡಿದ್ರು ರೋಜಾ? VIDEO
Jul 17, 2024 03:02 PM IST
ಬ್ರಾಹ್ಮಣ ಅರ್ಚಕರ ಜತೆ ಆತ್ಮೀಯವಾಗಿ ಫೋಟೋಗೆ ಪೋಸ್ ನೀಡಿ, ಸಫಾಯಿ ಕರ್ಮಚಾರಿಗಳು ಹತ್ತಿರ ಬರ್ತಿದ್ದಂತೆ ಹೀಗ್ಯಾಕೆ ಮಾಡಿದ್ರು ರೋಜಾ?
- ದೇವಸ್ಥಾನದ ಭೇಟಿ ವೇಳೆ ಸ್ವಚ್ಛತಾ ಕರ್ಮಚಾರಿಗಳ ಜತೆಗೆ ಫೋಟೋಕ್ಕೆ ಪೋಸ್ ನೀಡುವ ವೇಳೆ ಸನ್ನೆಯ ಮೂಲಕ ಅವರಿಗೆ ದೂರ ನಿಲ್ಲಿ ಎಂದಿದ್ದಾರೆ ನಟಿ, ರಾಜಕಾರಣಿ ರೋಜಾ ಸೆಲ್ವಮಣಿ. ರೋಜಾ ಅವರ ಈ ವರ್ತನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದೆ.
actress roja Selvamani: ಬಹುಭಾಷಾ ನಟಿ ರೋಜಾ ಸೌತ್ ಸಿನಿಮಾರಂಗದಲ್ಲಿ ತಮ್ಮದೇ ಆದ ಖ್ಯಾತಿ ಗಿಟ್ಟಿಸಿಕೊಂಡವರು. ಸ್ಯಾಂಡಲ್ವುಡ್ನಲ್ಲಿಯೂ ಹಲವು ಸಿನಿಮಾ ಮಾಡಿ ಕರುನಾಡ ಚಿತ್ರಪ್ರೇಮಿಗಳಿಗೂ ಚಿರಪರಿಚಿತರು. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ರೋಜಾ. ನಟನೆ ಜತೆಗೆ ವೈಎಸ್ಆರ್ಪಿ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿಯೂ ದಶಕಗಳಿಂದ ಸಕ್ರಿಯರಾಗಿದ್ದಾರೆ. ಇದೀಗ ಇದೇ ನಟಿಯ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಆ ವಿಡಿಯೋದಲ್ಲೇನಿದೆ? ಮುಂದೆ ಓದಿ.
ಒಂದು ಕಾಲದಲ್ಲಿ ತೆಲುಗು, ತಮಿಳು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದ್ದ ನಟಿ ರೋಜಾ ರಾಜಕೀಯಕ್ಕೆ ಬಂದ ಮೇಲೆ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ. ತೆಲುಗು ಕಿರುತೆರೆಯಲ್ಲಿಯೂ ಹಲವು ಶೋಗಳಲ್ಲಿ ಕಾಣಿಸಿಕೊಂಡು, ಚುನಾವಣೆ ಸಮೀಪಿಸುತ್ತಿದ್ದಂತೆ ಅದನ್ನೂ ತೊರೆದು ಕೆಲ ತಿಂಗಳ ಹಿಂದಷ್ಟೇ ಎಲೆಕ್ಷನ್ ಅಖಾಡಕ್ಕಿಳಿದು ಹೀನಾಯ ಸೋಲು ಅನುಭವಿಸಿದ್ದರು ರೋಜಾ. ಚುನಾವಣೆ ಸೋಲಿನ ಬಳಿಕ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ಇದೀಗ ಇದ್ದಕ್ಕಿಂದ್ದಂತೆ ಸುದ್ದಿಯಲ್ಲಿದ್ದಾರೆ.
ಸಫಾಯಿ ಕರ್ಮಚಾರಿಗಳನ್ನು ದೂರವಿಟ್ಟ ರೋಜಾ
ಇತ್ತೀಚೆಗಷ್ಟೇ ನಟಿ, ರಾಜಕಾರಣಿ ರೋಜಾ ಸೆಲ್ವಮಣಿ ತಮ್ಮ ಪತಿ ಸೆಲ್ವಮಣಿ ಅವರೊಂದಿಗೆ ತಮಿಳುನಾಡಿನ ಪ್ರಸಿದ್ಧ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಮುರುಗನ್ ಸ್ವಾಮಿಯ ದರ್ಶನ್ ಪಡೆದು, ದೇವಾಲಯದ ಅಧಿಕಾರಿಗಳಿಂದ ವಿಶೇಷ ಸನ್ಮಾನವನ್ನೂ ಸ್ವೀಕರಿಸಿದರು. ದರ್ಶನ ಮುಗಿಸಿ ಹೊರಬರುವ ವೇಳೆ ದೇವಸ್ಥಾನದ ಸಿಬ್ಬಂದಿ ರೋಜಾ ಅವರ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನೆಚ್ಚಿನ ನಟಿಯನ್ನು ಕಂಡು ಸ್ವಚ್ಛತಾ ಕರ್ಮಚಾರಿಗಳೂ ಫೋಟೋ ತೆಗೆಸಿಕೊಳ್ಳಲು ರೋಜಾ ಅವರ ಹತ್ತಿರ ಬಂದಿದ್ದಾರೆ. ಅವರು ಹತ್ತಿರ ಬರುತ್ತಿದ್ದಂತೆ, ಸನ್ನೆ ಮೂಲಕವೇ ಅವರನ್ನು ಹತ್ತಿರ ಬರಬೇಡಿ ಎಂದಿದ್ದಾರೆ ರೋಜಾ.
ಜಾಲತಾಣದಲ್ಲಿ ನಟಿಯ ವಿರುದ್ಧ ಟೀಕಾಸ್ತ್ರ
ಸ್ವಚ್ಛತಾ ಕರ್ಮಚಾರಿಗಳ ಫೋಟೋ ಬಳಿಕ ದೇವಸ್ಥಾನದ ಬ್ರಾಹ್ಮಣ ಅರ್ಚಕರ ಜತೆಗೆ ಖುಷಿಯಿಂದಲೇ ಎಲ್ಲರನ್ನೂ ಹತ್ತಿರ ಕರೆದು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಆಂಧ್ರಪ್ರದೇಶದ ಮಾಜಿ ಸಚಿವೆ ರೋಜಾ ಅವರ ಈ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನಟಿಯ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದಿದೆ. ಸ್ಚಚ್ಛತಾ ಕಾರ್ಮಿಕರು ಅಸ್ಪೃಶ್ಯರೇ? ರೋಜಾ ಏಕೆ ಹೀಗೆ ಮಾಡಿದ್ರು? ಎಂದು ಹಲವರು ಕಾಮೆಂಟ್ ಹಾಕುತ್ತಿದ್ದಾರೆ. ಇದ್ಯಾಕೋ ಅತಿಯಾಯ್ತು ರೋಜಾ ಎಂದು ಕೆಲವರು ಜರಿದರೆ, ಈ ಕಾರಣಕ್ಕೆ ನಿಮ್ಮನ್ನು ಎಲೆಕ್ಷನ್ನಲ್ಲಿ ಸೋಲಿಸಲಾಗಿದೆ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.
ಕನ್ನಡದಲ್ಲಿ ಯಾವೆಲ್ಲ ಸಿನಿಮಾಗಳಲ್ಲಿ ನಟಿಸಿದ್ದಾರೆ ರೋಜಾ?
1993ರಲ್ಲಿ ರವಿಚಂದ್ರನ್ ನಾಯಕನಾಗಿ ನಟಿಸಿದ ಗಡಿಬಿಡಿ ಗಂಡ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಬಂದ ರೋಜಾ, ಅದಾದ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಕಲಾವಿದ, ಪ್ರೇಮೋತ್ಸವ, ಇಂಡಿಪೆಂಡೆನ್ಸ್ ಡೇ, ಭರತ ನಾರಿ, ಗ್ರಾಮ ದೇವತೆ, ಸುಂದರ ಕಾಂಡ, ಪರ್ವ ಚಿತ್ರದಲ್ಲಿಯೂ ನಟಿಸಿ ಕನ್ನಡಿಗರ ಗಮನ ಸೆಳೆದಿದ್ದರು. 2004ರಲ್ಲಿ ಪುನೀತ್ ರಾಜ್ಕುಮಾರ್ ಜತೆಗೆ ಮೌರ್ಯ ಸಿನಿಮಾದಲ್ಲಿ ತಾಯಿಯಾಗಿ ನಟಿಸಿದ್ದರು. ಅದಾದ ಮೇಲೆ ಬೇರಾವ ಕನ್ನಡ ಸಿನಿಮಾಗಳಲ್ಲಿಯೂ ಅವರು ಕಾಣಿಸಿಕೊಳ್ಳಲಿಲ್ಲ.