Latha Rajinikanth: ಇದು ವಂಚನೆ ಪ್ರಕರಣವಲ್ಲ, ಸೆಲೆಬ್ರಿಟಿಗೆ ಮಾಡುವ ಅವಮಾನ, ಕಿರುಕುಳ, ಶೋಷಣೆ; ಲತಾ ರಜನಿಕಾಂತ್ ನೋವಿನ ನುಡಿಗಳು
Dec 27, 2023 08:43 AM IST
ಲತಾ ರಜನಿಕಾಂತ್
- ಕೊಚಾಡಿಯನ್ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಬೆಂಗಳೂರಿನ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಇದು ವಂಚನೆಯ ವಿಷಯವಲ್ಲ, ಸೆಲೆಬ್ರಿಟಿಯಾಗಿರುವುದಕ್ಕೆ ತೆತ್ತ ಬೆಲೆ ಎಂದು ಲತಾ ರಜನಿಕಾಂತ್ ಹೇಳಿದ್ದಾರೆ.
ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರು ಮಂಗಳವಾರ (ಡಿ. 26) ಬೆಂಗಳೂರಿನ ನ್ಯಾಯಾಲಯಕ್ಕೆ ಖುದ್ದಾಗಿ ಆಗಮಿಸಿ ಜಾಮೀನು ಪಡೆದುಕೊಂಡಿದ್ದಾರೆ. ಕೊಚಾಡಿಯನ್ ಚಿತ್ರದ ವಿತರಕರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನವರಿ 6, 2024ರೊಳಗೆ ನ್ಯಾಯಾಲಯದ ಮುಂದೆ ಖುದ್ದು ಹಾಜರಿರಬೇಕು ಎಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಸೂಚಿಸಿತ್ತು. ಅದರಂತೆ, ನಿನ್ನೆ ಬೆಂಗಳೂರು ನ್ಯಾಯಾಲಯದ ಮುಂದೆ ಬಂದು ಜಾಮೀನು ಪಡೆದಿದ್ದಾರೆ.
"ನನ್ನ ಪಾಲಿಗೆ ಇದು ವಂಚನೆ ಪ್ರಕರಣವಲ್ಲ, ಜನಪ್ರಿಯ ವ್ಯಕ್ತಿಯ ಅವಮಾನ, ಕಿರುಕುಳ ಮತ್ತು ಶೋಷಣೆಯ ಪ್ರಕರಣ. ನಾವು ಸೆಲೆಬ್ರಿಟಿಗಳಾಗಿರುವುದಕ್ಕೆ ಕೊಡಬೇಕಾಗಿರುವ ಬೆಲೆ. ಇದು ದೊಡ್ಡ ಪ್ರಕರಣ ಆಗಿಲ್ಲದೆ ಇರಬಹುದು. ಆದರೆ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಯಾವುದೇ ವಂಚನೆ ಮಾಡಲಾಗಿಲ್ಲ" ಎಂದು ಲತಾ ರಜನಿಕಾಂತ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಕೊಚಾಡಿಯನ್ ಪ್ರಕರಣ
1. ರಜನಿಕಾಂತ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 2014ರ ತಮಿಳು ಚಲನಚಿತ್ರ ಕೊಚಾಡಿಯಾನ್ ಸಿನಿಮಾದ ವಿತರಕರಿಗೆ ವಂಚನೆ ಮಾಡಿರುವ ಆರೋಪವನ್ನು ಲತಾ ರಜನಿಕಾಂತ್ ವಿರುದ್ಧ ಮಾಡಲಾಗಿದೆ. ಈ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ.
2. ಈ ಸಿನಿಮಾ ನಿರ್ಮಿಸಿದ ಆಡ್ ಬ್ಯೂರೋ ಮತ್ತು ಮೀಡಿಯಾವನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ನಡುವಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
3. ಈ ಚಿತ್ರವು ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಈ ಸಿನಿಮಾದಿಂದ ಆದ ನಷ್ಟವನ್ನು ಸರಿದೂಗಿಸಲು ನೀಡಿದ ಭರವಸೆಯನ್ನು ಲತಾ ಅವರು ಗೌರವಿಸಲಿಲ್ಲ ಎಂದು ಆಡ್ ಬ್ಯೂರೋ ಆರೋಪಿಸಿತ್ತು.
4. ಚೆನ್ನೈ ಮೂಲದ ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ 2015ರಲ್ಲಿ ಬೆಂಗಳೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಸಿನಿಮಾದ ಹಕ್ಕುಗಳನ್ನು ಎರಡೆರಡು ಬಾರಿ ಮಾರಾಟ ಮಾಡಲಾಗಿದೆ. ಲತಾ ರಜನಿಕಾಂತ್ ನೀಡಿರುವ ಲೆಟರ್‌ಹೆಡ್ ನಕಲಿ ಇತ್ಯಾದಿ ಹಲವು ದೂರುಗಳನ್ನು ದಾಖಲಿಸಲಾಗಿತ್ತು.
5. ಇದು ಸಿವಿಲ್ ಪ್ರಕರಣವೆಂದು ಕರ್ನಾಟಕ ಹೈಕೋರ್ಟ್ ಈ ದೂರನ್ನು ರದ್ದುಗೊಳಿಸಿತ್ತು. ಲತಾ ಅವರ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಲಾಯಿತು.
6. ಪ್ರಕರಣ ಸುಪ್ರೀಂಕೋರ್ಟ್‌ಗೆ ಹೋಯಿತು. 2018ರಲ್ಲಿ ಸುಪ್ರೀಂಕೋರ್ಟ್ ಕ್ರಿಮಿನಲ್ ಪ್ರಕರಣ ಮುಂದುವರೆಸಲು ಅನುಮತಿ ನೀಡಿತ್ತು. ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಬೆಂಗಳೂರು ಪೊಲೀಸರು ಲತಾ ರಜನಿಕಾಂತ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
7. ಮಾರ್ಚ್ 2021 ರಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ವಂಚನೆ ಮತ್ತು ಫೋರ್ಜರಿ ಆರೋಪಗಳು ಒಳಗೊಂಡ ಚಾರ್ಜ್ ಶೀಟ್ ಆಧರಿಸಿ ಲತಾ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು.
8. ಬೆಂಗಳೂರಿನ ವಿಚಾರಣಾ ನ್ಯಾಯಾಲಯದ ಆದೇಶವನ್ನು ಲತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ವಂಚನೆ ಮತ್ತು ಸುಳ್ಳು ಹೇಳಿಕೆ ನೀಡುವಿಕೆ, ಸುಳ್ಳು ಸಾಕ್ಷ್ಯ ಬಳಸಿದ ಆರೋಪಗಳನ್ನು ರದ್ದುಗೊಳಿಸಿತ್ತು. ಆದರೆ, ಆರೋಪದ ಮೇಲಿನ ವಿಚಾರಣೆಯನ್ನು ಮುಂದುವರೆಸಲು ಅನುಮತಿ ನೀಡಿತ್ತು.
9. ನಿನ್ನೆ ಲತಾ ರಜನಿಕಾಂತ್ ಅವರು ಖುದ್ದಾಗಿ ಬೆಂಗಳೂರು ನ್ಯಾಯಾಲಯಕ್ಕೆ ಆಗಮಿಸಿದ್ದರು. ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.
10. ನಾನು ಕಾನೂನಿಗೆ ಗೌರವ ಕೊಡುವ ಮಹಿಳೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನನ್ನ ಮೇಲೆ ಹಲವು ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಖುದ್ದಾಗಿ ನಾನು ಆಗಮಿಸಿದ್ದೇನೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.