ಜೈಲರ್‌ನಲ್ಲಿ ರಜನಿಕಾಂತ್ ವಯಸ್ಸಿಗೆ ತಕ್ಕ ಪಾತ್ರ ಬೇಡ, ಅವರನ್ನು ಚಿಕ್ಕವರಾಗಿ ತೋರಿಸಿ ಎಂದಿದ್ರು ತುಂಬಾ ಜನ; ಸತ್ಯ ಬಿಚ್ಚಿಟ್ಟ ನಿರ್ದೇಶಕ
Dec 15, 2023 10:37 AM IST
ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್‌ಕುಮಾರ್
- Rajinikanth: "ರಜನಿಕಾಂತ್ ಅವರಿಗೆ ವಯಸ್ಸಾಗಿದೆ, ಜೈಲರ್ ಸಿನಿಮಾದಲ್ಲಿ ಅವರಿಗೆ ಅವರ ವಯಸ್ಸಿನ ಪಾತ್ರ ನೀಡಬೇಡಿ, ಈ ಹಿಂದೆ ಮಾಡಿರುವಂತಹ ರೋಲ್‌ಗಳನ್ನೇ ನೀಡಿ" ಎಂದು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೆ ಸಾಕಷ್ಟು ಜನರು ಹೇಳಿದ್ದರಂತೆ.
ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಈಗ 73 ವರ್ಷ ವಯಸ್ಸು. ತೆರೆ ಮೇಲೆ ಅವರು ಹದಿಹರೆಯದ ಯುವ ನಟರನ್ನು ನಾಚಿಸುವಂತೆ ನಟಿಸುತ್ತಾರೆ. ಈ ವಯಸ್ಸಿನಲ್ಲೂ ಇವರು ನಾಯಕ ನಟನಾಗಿ ನಟಿಸಿರುವ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತವೆ. ಇದಕ್ಕೆ ಇತ್ತೀಚಿನ ಜೈಲರ್ ಸಿನಿಮಾವೇ ಸಾಕ್ಷಿ. ಜೈಲರ್‌ನಲ್ಲಿ ಅವರು ಹಿರಿಯ ವ್ಯಕ್ತಿಯಾಗಿಯೇ ಕಾಣಿಸಿಕೊಂಡಿದ್ದರು. ಇವರ ವಯಸ್ಸು ಮತ್ತು ಪಾತ್ರದ ಕುರಿತು ಜೈಲರ್ ಸಿನಿಮಾದ ಸಂದರ್ಭದಲ್ಲಿ ನಿರ್ದೇಶಕ ನೆಲ್ಸನ್‌ಗೆ ಒಂದಿಷ್ಟು ಗೊಂದಲ ಕಾಡಿತ್ತಂತೆ. ಜೈಲರ್ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ, ವಿಶೇಷವಾಗಿ ಸ್ಕ್ರಿಪ್ಟ್ ಬರೆಯುವ ಸಮಯದಲ್ಲಿ "ನನಗೆ ರಜನಿಕಾಂತ್ ಜತೆ ಸಿನಿಮಾ ಮಾಡುವ ಅವಕಾಶ ದೊರಕಬಹುದೇ?" ಎಂಬ ಸಂದೇಹ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗಿತ್ತಂತೆ.
ಇದೇ ಸಂದರ್ಭದಲ್ಲಿ “ರಜನಿಕಾಂತ್‌ಗೆ ವಯಸ್ಸಾಗಿದೆ. ಅವರಿಗೆ ವಯಸ್ಸಾದ ರೋಲ್ ಕೊಡಬೇಡಿ. ಇನ್ನು ಸಣ್ಣವರಂತೆ ಕಾಣಿಸುವ ಈ ಹಿಂದೆ ಮಾಡಿರುವಂತಹ ರೋಲ್‌ಗಳನ್ನೇ ನೀಡಿ” ಎಂದು ಸಾಕಷ್ಟು ಜನರು ನೆಲ್ಸನ್ ಅವರಿಗೆ ಸಲಹೆ ನೀಡಿದ್ದರು. ಈ ವಿಷಯವನ್ನು ನಡೆಸಿದ "ಫಿಲ್ಮ್ ಕಂಪ್ಯಾನಿಯನ್ ಡೈರೆಕ್ಟರ್ಸ್ ಅಡ್ಡಾ 2023"ರಲ್ಲಿ (Film companion Directors adda 2023) ನಿರ್ದೇಶಕರಾದ ನೆಲ್ಸನ್ ದಿಲೀಪ್‌ಕುಮಾರ್ ಬಹಿರಂಗಪಡಿಸಿದ್ದಾರೆ.
"ಪ್ರತಿಯೊಬ್ಬ ನಿರ್ದೇಶಕರು ತಮ್ಮ ಪ್ರಾಜೆಕ್ಟ್‌ನ ಕುರಿತು ಒಮ್ಮೆಯಾದರೂ ಸಂಪೂರ್ಣ ಅನುಮಾನ ಹೊಂದಿರುತ್ತಾರೆ. ಅಂತಹ ಅನುಮಾನದ ನಡುವೆಯೂ ಪ್ರಾಜೆಕ್ಟ್ ಅನ್ನು ಪ್ರೀತಿಯಿಂದ ಕೈಗೊಳ್ಳಲು ಕಾರಣವೇನು?. ಪ್ರತಿಯೊಬ್ಬ ನಿರ್ದೇಶಕರು ಈ ಕುರಿತು ನೆನಪಿಸಿಕೊಳ್ಳಬೇಕು" ಎಂದು ಡೈರೆಕ್ಟರ್ಸ್ ಅಡ್ಡಾದಲ್ಲಿ ಆರ್‌ಆರ್‌ಆರ್ ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ ಅವರು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಜೈಲರ್ ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ವಯಸ್ಸಿನ ಗೊಂದಲವನ್ನು ತಿಳಿಸಿದ್ದಾರೆ.
"ಇಂಡಸ್ಟ್ರಿಯ ಹಲವು ಜನರು ರಜನಿ ಸರ್ ಅವರ ವಯಸ್ಸನ್ನು ಗಮನಿಸಿ, ಅದೇ ವಯಸ್ಸಿನ ಪಾರ ಬೇಡ. ಅವರು ಈಗಾಗಲೇ ಮಾಡಿರುವ ಪಾತ್ರಗಳನ್ನು ಮಾಡಲಿ ಎಂದು ಹೇಳಿದರು. ಆದರೆ, ಜೈಲರ್‌ನಲ್ಲಿ ನಾವು ರಜನಿಕಾಂತ್‌ರನ್ನು ಹಿರಿಯ ವ್ಯಕ್ತಿಯಾಗಿಯೇ ತೋರಿಸಿದ್ದೇವೆ. ನಾನು ಏನು ಅಂದುಕೊಂಡಿದ್ದೇನೋ ಅದು ಖಂಡಿತಾ ವರ್ಕ್ ಆಗುತ್ತದೆ ಎಂದು ನನಗೆ ವಿಶ್ವಾಸವಿತ್ತು. ಕೆಲವೊಮ್ಮೆ ನಾನು ಕಡಿಮೆ ವಿಶ್ವಾಸ ಹೊಂದಿದ್ದೆ" ಎಂದು ಅವರು ಹೇಳಿದ್ದಾರೆ. "ನಾನು ಮನಸ್ಫೂರ್ತಿಯಾಗಿ ಈ ಸಿನಿಮಾ ಮಾಡುತ್ತಿದ್ದೆ. ಸಿನಿಮಾ ವಿಫಲವಾದರೂ ಪರವಾಗಿಲ್ಲ, ಚೆನ್ನಾಗಿ ಮಾಡಬೇಕು" ಎಂದುಕೊಳ್ಳುತ್ತಿದ್ದೆ. "ಇತರರು ಹೇಳಿದ ಕಾರಣದಿಂದ ನಾನು ಗೊಂದಲಕ್ಕೆ ಒಳಗಾಗಲಿಲ್ಲ. ಹತ್ತು ದಿನಗಳ ಶೂಟಿಂಗ್‌ನ ವಿಡಿಯೋ ಕ್ಲಿಪ್‌ಗಳನ್ನು ನೋಡಿದಾಗ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು" ಎಂದು ಅವರು ಹೇಳಿದ್ದಾರೆ.
ಇಂಟರ್‌ವಲ್ ಹೇಗಿರಬೇಕು ಎಂಬ ಕಲ್ಪನೆ ಸಾಕಾರಗೊಳಿಸಲು ಇವರು ಒಂದು ತಿಂಗಳು ತೆಗೆದುಕೊಂಡಿದ್ದರು. "ರಜನಿ ಸರ್ ಅವರು ಕೂಲ್ ಆಗಿ ಸಿನಿಮಾದಲ್ಲಿ ಕಾಣಿಸಬೇಕು ಎಂದು ಬಯಸಿದ್ದೆ. ಜತೆಗೆ, ರಜನಿಕಾಂತ್ ಸುತ್ತಮುತ್ತಲಿನ ಪಾತ್ರಗಳೂ ಆಸಕ್ತಿದಾಯಕವಾಗಿರಬೇಕು ಎಂದು ಯೋಚನೆ ಮಾಡುತ್ತಿದ್ದೆ. ಅವರ ಈ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಏನಾದರೂ ಅಂಶಗಳನ್ನು ನೀಡಬೇಕು ಎಂದು ಸಾಕಷ್ಟು ಯೋಚನೆ ಮಾಡಿದ್ದೆ" ಎಂದು ಹೇಳಿದ್ದಾರೆ.
ಫೈಟ್ ಮಾಸ್ಟರ್ ಜತೆ ಹಲವು ಸೆಷನ್ ಮಾಡಿದ್ದೆ. ಅವರು ನನಗೆ ಪ್ರತಿದಿನ ಹಲವು ಆಯ್ಕೆಗಳನ್ನು ತೋರಿಸುತ್ತಿದ್ದರು. ನಾನು ಬರೆದ ಕೆಲವು ಫೈಟಿಂಗ್ ಸೀನ್‌ಗಳಿಗೆ ಕೆಲವರು "ರಜನಿ ಸರ್ ದೊಡ್ಡ ಹೀರೋ, ಅವರಿಗೆ ಇದು ಸಾಕಾಗದು" ಎಂದು ಹೇಳುತ್ತಿದ್ದರು. ಆದರೆ, ನಾವು ಅಂದುಕೊಂಡಂತೆಯೇ ಮಾಡಿದೆವು. ಈ ಸಿನಿಮಾ ನಿರ್ಮಾಣದ ಉದ್ದಕ್ಕೂ ನನ್ನಲ್ಲಿ ಸಾಕಷ್ಟು ಗೊಂದಲವಿತ್ತು. ಒಬ್ಬ ಅಭಿಮಾನಿಯಾಗಿ ರಜನಿ ಸರ್ ಅವರ ಮಾತನಾಡುವ ಶೈಲಿ ಮತ್ತು ಡೈಲಾಗ್ ಡೆಲಿವರಿಗಳನ್ನು ಇಷ್ಟಪಡುತ್ತೇನೆ. ಜತೆಗೆ ಅವರ ಆಕ್ಷನ್ ಸೀಕ್ವೆನ್ಸ್ ನನಗೆ ಅಚ್ಚುಮೆಚ್ಚು. ಅಂತಿಮವಾಗಿ ಈ ಸಿನಿಮಾ ಅದ್ಭುತ ಯಶಸ್ಸು ಕಂಡಿದೆ. ಇದನ್ನು ಓದಿ: ರಜನಿಕಾಂತ್ ನಟಿಸಿದ ಹತ್ತು ಕನ್ನಡ ಚಲನಚಿತ್ರಗಳು
ಮಾಹಿತಿ: ಫಿಲ್ಮ್ ಕಂಪ್ಯಾನಿಯನ್
ವಿಭಾಗ