ಆ ನೋವಿನಲ್ಲೂ ನಟಿಸಿದ್ದೇನೆ, ಕುಣಿದಿದ್ದೇನೆ; ಮುಟ್ಟಿನ ದಿನಗಳನ್ನು ಎರಡು ಅಂಚಿನ ಕತ್ತಿಗೆ ಹೋಲಿಸಿದ ನಟಿ ಶ್ರುತಿ ಹಾಸನ್
Jun 02, 2024 04:15 PM IST
ಆ ನೋವಿನಲ್ಲೂ ನಟಿಸಿದ್ದೇನೆ, ಕುಣಿದಿದ್ದೇನೆ; ಮುಟ್ಟಿನ ದಿನಗಳನ್ನು ಎರಡು ಅಂಚಿನ ಕತ್ತಿಗೆ ಹೋಲಿಸಿದ ನಟಿ ಶ್ರುತಿ ಹಾಸನ್
- ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ, ಪಿರಿಯಡ್ ಪ್ರಾಬ್ಲಂ ಆದರೆ, ಅದರಂಥ ನರಕ ಇನ್ನೊಂದಿಲ್ಲ. ಅಂಥ ಎಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಪಿರಿಯಡ್ ಸಮಯದಲ್ಲಿಯೇ ಅತಿಯಾದ ನೋವಿನಲ್ಲಿಯೂ ಡಾನ್ಸ್ ಮಾಡಿದ್ದೇನೆ ಎಂದಿದ್ದಾರೆ ಬಹುಭಾಷಾ ನಟಿ ಶ್ರುತಿ ಹಾಸನ್.
Shruti Haasan about Bad Periods: ಉಳಗನಾಯಗನ್ ಕಮಲ್ ಹಾಸನ್ ಹಿರಿ ಮಗಳು ಶ್ರುತಿ ಹಾಸನ್, ಚಿತ್ರರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಅಷ್ಟೇ ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ ಈ ನಟಿ. ಕೆಲ ತಿಂಗಳ ಹಿಂದಷ್ಟೇ ಇದೇ ಶ್ರುತಿ ಹಾಸನ್ ನಟನೆಯ ಸಲಾರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದರು.
ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ನಟಿ ಶ್ರುತಿ ಹಾಸನ್ ಆಗಾಗ ಸುದ್ದಿಯ ಮುನ್ನೆಲೆಗೆ ಬರುತ್ತಿರುತ್ತಾರೆ. ಅದರಲ್ಲೂ ಬಾಯ್ಫ್ರೆಂಡ್, ಬ್ರೇಕಪ್ ಬಗ್ಗೆ ಸದ್ದು ಮಾಡಿದ್ದೇ ಹೆಚ್ಚು ಈ ನಟಿ. ಬಹುಕಾಲದ ಗೆಳೆಯ ಶಾಂತನು ಹಜಾರಿಕಾ ಜತೆಗೆ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರುತಿ, ಆತನಿಂದಲೂ ಇತ್ತೀಚೆಗಷ್ಟೇ ದೂರವಾಗಿದ್ದರು. ಇಬ್ಬರ ನಡುವಿನ ಪ್ರೀತಿಯೂ ಮುರಿದು ಬಿದ್ದಿತ್ತು. ಆತನ ಜತೆಗಿನ ಫೋಟೋಗಳನ್ನೂ ಅಳಿಸಿ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ಶ್ರುತಿ ಹಾಸನ್ ಮಾತ್ರ ತುಟಿ ಬಿಚ್ಚಿರಲಿಲ್ಲ.
ಶ್ರುತಿ ಹಾಸನ್ಗೆ ಹಾರ್ಮೋನಲ್ ಸಮಸ್ಯೆ
ಈ ಪ್ರೀತಿ, ಬ್ರೇಕಪ್ ವದಂತಿಗಳ ನಡುವೆಯೇ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆಯೂ ಶ್ರುತಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ತನಗೆ ಪಿಸಿಒಎಸ್ (Polycystic Ovary Syndrome) ಸಮಸ್ಯೆ ಇದೆ. ಅದರಿಂದ ಬಳಲುತ್ತಿದ್ದೇನೆ ಎಂದು ನೋವಿನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. "ನನಗೆ ಬ್ಯಾಡ್ ಪಿರಿಯಡ್ಸ್ ಸಮಸ್ಯೆ ಇದೆ. ಮೊದಲಿನಿಂದಲೂ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗಲೂ ಆ ನೋವಿನಿಂದ ನರಳುತ್ತಿದ್ದೇನೆ. ಆ ಅವಧಿಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಆ ಸಮಸ್ಯೆಯಿಂದ ನನ್ನ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ" ಎಂದು ಮುಟ್ಟಿನ ದಿನಗಳ ನೋವನ್ನು ಹೇಳಿಕೊಂಡಿದ್ದಾರೆ ಶ್ರುತಿ ಹಾಸನ್.
ಮುಟ್ಟು ಎಂಬುದು ಎರಡು ಅಂಚಿನ ಕತ್ತಿ..
ಋತುಸ್ರಾವದ ಸಮಯದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಶ್ರುತಿ, ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದೈಹಿಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಆಕೆ ಬಳಲುತ್ತಾಳೆ. ಮಾಸಾಂತ್ಯದ ದಿನಗಳಲ್ಲಿ ಒಂದು ರೀತಿ ಆಕೆ ತನ್ನ ದೇಹದ ಜತೆಗೆ ಯುದ್ದಕ್ಕೆ ನಿಂತಿರುತ್ತಾಳೆ. ಅದೊಂದು ರೀತಿ ಎರಡು ಅಂಚಿನ ಕತ್ತಿ" ಎಂದೂ ಶ್ರುತಿ ಮುಟ್ಟಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಶೂಟಿಂಗ್ ಸಮಯದಲ್ಲಿ ಪಿರಿಯಡ್ ಸಮಸ್ಯೆ
ಮುಂದುವರಿದು ಮಾತನಾಡುವ ಅವರು, "ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ, ಪಿರಿಯಡ್ ಪ್ರಾಬ್ಲಂ ಆದರೆ, ಅದರಂಥ ನರಕ ಇನ್ನೊಂದಿಲ್ಲ. ಅಂಥ ಎಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಪಿರಿಯಡ್ ಸಮಯದಲ್ಲಿಯೇ ಅತಿಯಾದ ನೋವಿನಲ್ಲಿಯೂ ಡಾನ್ಸ್ ಮಾಡಿದ್ದೇನೆ. ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದು ಅನಿವಾರ್ಯ" ಎಂದಿದ್ದಾರೆ ಶ್ರುತಿ ಹಾಸನ್. ಸಿನಿಮಾ ವಿಚಾರಕ್ಕೆ ಬರುವುದಾದರೆ, ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಲಿದ್ದಾರೆ.