Shakeela: ‘ಕುಡಿದ ಮತ್ತಲ್ಲಿ ಮನಬಂದಂತೆ ಬೈತಾಳೆ, ಅವ್ಳೂ ಒಬ್ಳು ತಾಯಿನಾ? ಶಕೀಲಾ ವಿರುದ್ಧ ದತ್ತು ಪುತ್ರಿಯ ದೂರು
Jan 25, 2024 09:25 PM IST
Shakeela: ‘ಕುಡಿದ ಮತ್ತಲ್ಲಿ ಮನಬಂದಂತೆ ಬೈತಾಳೆ, ಅವ್ಳೂ ಒಬ್ಳು ತಾಯಿನಾ? ಶಕೀಲಾ ವಿರುದ್ಧ ದತ್ತು ಪುತ್ರಿಯ ದೂರು
- ಮಾಜಿ ವಯಸ್ಕ ಸಿನಿಮಾಗಳ ನಟಿ ಶಕೀಲಾ ಮತ್ತವರ ದತ್ತು ಪುತ್ರಿ ನಡುವೆ ಇದೀಗ ಕಿತ್ತಾಟ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಳೆದ ವಾರ ನಡೆದ ಈ ಘಟನೆ ಬಗ್ಗೆ ಇದೀಗ ಶಕೀಲಾ ದತ್ತು ಪುತ್ರಿ ಶೀತಲ್, ತಮ್ಮ ನಿಲುವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
Shakeela: ಬಹುಭಾಷಾ ನಟಿ, ಮಾಜಿ ವಯಸ್ಕ ಚಿತ್ರಗಳ ತಾರೆ ಶಕೀಲಾ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಹೇಳಿಕೆಗಳ ಮೂಲಕವೇ ಸದ್ದು ಮಾಡುವ ಶಕೀಲಾ, ಒಂದು ವಾರದ ಹಿಂದಷ್ಟೇ ದತ್ತು ಮಗಳು ಶೀತಲ್ ಜತೆಗಿನ ಕಿತ್ತಾಟ ತಾರಕಕ್ಕೇರಿತ್ತು. ಅದ್ಯಾವ ಮಟ್ಟಿಗೆ ಎಂದರೆ ಇಬ್ಬರೂ ಹೊಡೆದಾಡಿಕೊಂಡಿದ್ದರು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದತ್ತು ಮಗಳ ವಿರುದ್ಧ ಶಕೀಲಾ ದೂರು ನೀಡಿದರೆ, ಶಕೀಲಾ ವಿರುದ್ಧ ಆಕೆಯಿಂದಲೂ ದೂರು ದಾಖಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀತಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೂ ಶೀತಲ್ ಬೇರಾರು ಅಲ್ಲ. ಶಕೀಲಾಳ ಸಹೋದರನ ಮಗಳು. ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಚಿಕ್ಕಂದಿನಿಂದಲೇ ಆಕೆಯನ್ನು ದತ್ತು ಪಡೆದಿದ್ದರು. ತನ್ನ ಮಗಳಂತೆ ಆಕೆಯನ್ನು ಸಾಕಿ ಸಲುಹಿದ್ದರು ಶಕೀಲಾ. ಆದರೆ, ಇತ್ತೀಚಿನ ಕೆಲ ದಿನಗಳಿಂದ ಈ ಇಬ್ಬರ ನಡುವೆ ಒಂದಿಲ್ಲ ಒಂದು ಕಾರಣಕ್ಕೆ ಜಗಳಗಳಾಗುತ್ತಿದ್ದವು. ಹೀಗಿರುವಾಗಲೇ ಕಳೆದ ವಾರ ಶಕೀಲಾ ಜತೆಗೆ ಮನಸ್ತಾಪ ಮತ್ತು ಜಗಳ ಆಗಿದ್ದಕ್ಕೆ ಶೀತಲ್ ಮನೆಬಿಟ್ಟು ಹೋಗಿದ್ದರು.
ಇದನ್ನು ಸರಿ ಮಾಡಬೇಕೆಂದು ಲಾಯರ್ ಸೌಂದರ್ಯ ಅವರನ್ನು ಮನೆಗೆ ಕರೆಸಿದ್ದರು ಶಕೀಲಾ. ಇದೇ ವೇಳೆ ಮನೆಯಿಂದ ಹೊರ ನಡೆದಿದ್ದ ಶೀತಲ್, ತಮ್ಮ ತಾಯಿ ಶಶಿ ಮತ್ತು ಸಹೋದರಿ ಜಮೀಲಾ ಜತೆಗೆ ಆಗಮಿಸಿ, ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಶಕೀಲಾ ಸೇರಿ ಲಾಯರ್‌ಗೆ ಗಾಯಗಳಾಗಿದ್ದವು. ಸಿಗರೇಟ್ ಟ್ರೇಯಿಂದ ತಲೆಗೂ ಬಲವಾಗಿ ಹೊಡೆದ ಬಗ್ಗೆಯೂ ಶಕೀಲಾ ದೂರಿನಲ್ಲಿ ನಮೂದಿಸಿದ್ದರು. ಸಮಸ್ಯೆ ಬಗೆಹರಿಸಲು ಬಂದ ಲಾಯರ್ ಮೇಲೂ ಹಲ್ಲೆ ನಡೆದ ವಿಚಾರವನ್ನೂ ಬರೆದಿದ್ದರು.
ಇತ್ತ ಶಕೀಲಾ ವಿರುದ್ಧ ಅದೇ ಚೆನ್ನೈನ ಕೊಡಂಬಕಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಶೀತಲ್. ದೂರು ದಾಖಲಿಸುವ ಬದಲು, ಇಬ್ಬರ ಜತೆ ಮಾತನಾಡುವ ಬಗ್ಗೆ ಪೊಲೀಸರು ನಿರ್ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದರು. ಇದೀಗ ದತ್ತು ತಾಯಿ ಶಕೀಲಾ ಮೇಲೆ ಹೀಗೆ ಏಕಾಏಕಿ ಮುಗಿಬೀಳಲು ಕಾರಣ ಏನೆಂಬುದನ್ನು ಶೀತಲ್ ಹೇಳಿಕೊಂಡಿದ್ದಾರೆ.
ಕುಡಿದ ಮತ್ತಲ್ಲಿ ಥಳಿಸಿದ್ದಾರೆ...
ಶಕೀಲಾ ನಿತ್ಯ ಮದ್ಯ ಸೇವಿಸ್ತಾರೆ. ಎಣ್ಣೆ ಮತ್ತಿನಲ್ಲಿ ಮನಬಂದಂತೆ ಕೆಟ್ಟ ಕೆಟ್ಟದಾಗಿ ಬೈಯುತ್ತಾರೆ. ನನಗೆ ಸಾಕಷ್ಟು ಬಾರಿ ಥಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿ ಜೈಲು ಸೇರಿಸುವೆ ಎಂದೆಲ್ಲ ಹೆದರಿಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹಾಗಾಗಿಯೇ ಕಳೆದ 15ದಿನಗಳ ಹಿಂದೆ ನಾನು ಮನೆಬಿಟ್ಟು ಹೊರಬಂದಿದ್ದೆ. ಹೀಗಿರುವಾಗಲೇ ಮಾತುಕತೆಗೆ ಬರುವಂತೆ ಅವರ ಸಹಾಯಕರಿಂದ ಕರೆ ಮಾಡಿಸಿ ನಮ್ಮನ್ನು ಕರೆಸಿಕೊಂಡರು. ಈ ವೇಳೆ ಕುಡಿದ ಮತ್ತಿನಲ್ಲಿ ನನಗಷ್ಟೇ ಅಲ್ಲದೆ ಅಮ್ಮನಿಗೂ ಮನಬಂದಂತೆ ಅವಾಚ್ಯವಾಗಿ ಬೈದರು. ಆ ಕಾರಣಕ್ಕೆ ದೂರು ನೀಡಿದ್ದೇವೆ ಹೇಳಿಕೊಂಡಿದ್ದಾರೆ ಶೀತಲ್.
ಮಾತುಕತೆಗೆ ಕರೆದು, ಮಾತಿನ ಮೂಲಕ ಅವಾಚ್ಯ ಪದಗಳ ಬಳಕೆ ಶುರುವಾಯ್ತು. ಅಲ್ಲಿಂದ ದೈಹಿಕವಾಗಿ ಹಿಂಸೆ ನೀಡಲು ಮುಂದಾದರು. ಅವರ ಜತೆಗಿದ್ದ ಲಾಯರ್ ಸಹ ಹಲ್ಲೆ ಮಾಡಿದರು. ಕ್ಷಮೆ ಕೋರುವಂತೆ ಒತ್ತಡ ಹೇರಿದರು. ಕ್ಷಮೆ ಕೇಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದರು ಎಂದು ಶೀತಲ್ ನೋವನ್ನು ಹೇಳಿಕೊಂಡಿದ್ದಾರೆ.