ರಜನಿಕಾಂತ್‌ಗೆ ಕಲಾನಿಧಿ ಮಾರನ್ ಚೆಕ್ ಹಸ್ತಾಂತರ; ತಲೈವಾ ಸಂಭಾವನೆ ಬಗ್ಗೆ ಫ್ಯಾನ್ಸ್ ಲೆಕ್ಕಾಚಾರ
Sep 01, 2023 06:43 AM IST
ರಜನಿಕಾಂತ್‌ಗೆ ಚೆಕ್ ಹಸ್ತಾಂತರಿಸುತ್ತಿರುವ ಕಲಾನಿಧಿ ಮಾರನ್
ಕಲಾನಿಧಿ ಮಾರನ್ ರಜನಿಕಾಂತ್‌ಗೆ ಚೆಕ್ ಹಸ್ತಾಂತರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಚೆಕ್ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ 'ಜೈಲರ್' ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಕೂಡಾ ನಟಿಸಿರುವುದರಿಂದ ಕನ್ನಡ ಸಿನಿಮಾಭಿಮಾನಿಗಳೂ ಕೂಡಾ ಥಿಯೇಟರ್‌ಗೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ಆಗಸ್ಟ್ 10 ರಂದು ತೆರೆ ಕಂಡ ಸಿನಿಮಾ ನಾಗಾಲೋಟದಿಂದ ಸಾಗುತ್ತಿದೆ.
21 ದಿನಗಳಲ್ಲಿ 560 ಕೋಟಿ ಬಾಚಿದ ಸಿನಿಮಾ
ಜೈಲರ್ ಸಿನಿಮಾ 200 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ. ಇದುವರೆಗೂ ಸಿನಿಮಾ 560 ಕೋಟಿ ರೂಪಾಯಿ ಲಾಭ ಮಾಡಿದೆ ಅನ್ನೋದು ಸಿನಿ ವಿಮರ್ಶಕರ ಮಾತು. ಈ ನಡುವೆ ಜೈಲರ್ ಚಿತ್ರಕ್ಕಾಗಿ ತಲೈವಾ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಚರ್ಚೆ ಅಭಿಮಾನಿ ವಲಯದಲ್ಲಿ ಶುರುವಾಗಿದೆ. ರಜನಿಕಾಂತ್ ದಕ್ಷಿಣ ಭಾರತದ ಹಿರಿಯ, ಬೇಡಿಕೆಯ ನಟರಲ್ಲಿ ಪ್ರಮುಖರು. ಅವರಿಗೆ 72 ವರ್ಷ ವಯಸ್ಸಾದರೂ ಡಿಮ್ಯಾಂಡ್ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ. ಜೈಲರ್ ಚಿತ್ರ ಹಿಟ್ ಆಗಿದ್ದು ಅವರ ಸಂಭಾವನೆ ಎಷ್ಟಿರಬಹುದು ಎಂದು ತಿಳಿಯಲು ಅಭಿಮಾನಿಗಳು ಹರ ಸಾಹಸ ಮಾಡುತ್ತಿದ್ದಾರೆ. ಈ ನಡುವೆ ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ರಜನಿಕಾಂತ್‌ಗೆ ಚೆಕ್ ಹಸ್ತಾಂತರಿಸುತ್ತಿದ್ದಾರೆ ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚೆಕ್ ಹಸ್ತಾಂತರ
ದಕ್ಷಿಣ ಭಾರತದ ಖ್ಯಾತ ಸಿನಿ ವಿಮರ್ಶಕ ಮನೋಬಾಲಾ ವಿಜಯಬಾಲನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇಬ್ಬರು ವ್ಯಕ್ತಿಗಳ ಕೈಗಳು ಮಾತ್ರ ಕಾಣಿಸುತ್ತಿವೆ. ಒಬ್ಬರು ಎನ್ವಲಪ್ ಕವರ್ ನೀಡುತ್ತಿದ್ದರೆ, ಮತ್ತೊಬ್ಬರು ಸ್ವೀಕರಿಸುತ್ತಿದ್ದಾರೆ. ಎನ್ವಲಪ್ ಮೇಲೆ ರಜನಿಕಾಂತ್ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನೋಡಿದರೆ ಇದು ಖಂಡಿತ ನಿರ್ಮಾಪಕ ಕಲಾನಿಧಿ ಮಾರನ್ ರಜನಿಕಾಂತ್ ಅವರಿಗೆ ನೀಡುತ್ತಿರುವ ಚೆಕ್. ಹಾಗಿದ್ರೆ ತಲೈವಾ ಎಷ್ಟು ಹಣ ಪಡೆದಿರಬಹುದು ಎಂದು ಜನರು ತಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. 21 ದಿನಗಳಲ್ಲಿ ಸಿನಿಮಾ 560 ಕೋಟಿ ರೂಪಾಯಿ ಹಣ ಬಾಚಿಕೊಂಡಿದೆ. ಆದಷ್ಟು ಬೇಗ ಸಿನಿಮಾ 600 ಕೋಟಿ ರೂಪಾಯಿ ಕ್ಲಬ್ ಸೇರಲಿ ಎಂದು ತಲೈವಾ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಕಲಾನಿಧಿ ಮಾರನ್ ಕೂಡಾ ರಜನಿಕಾಂತ್‌ಗೆ ಚೆಕ್ ಹಸ್ತಾಂತರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಚೆಕ್ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸಿನಿಮಾ
ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿಧಿ ಮಾರನ್ ನಿರ್ಮಿಸಿದ್ದು ನೆಲ್ಸನ್ ದಿಲೀಪ್ ಕುಮಾರ್ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರಜನಿಕಾಂತ್, ವಿನಾಯಕನ್, ರಮ್ಯ ಕೃಷ್ಣನ್, ವಸಂತ್ ರವಿ ಸುನಿಲ್, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ. ಮಲಯಾಳಂನಿಂದ ಮೋಹನ್ ಲಾಲ್, ಕನ್ನಡದಿಂದ ಶಿವರಾಜ್‌ಕುಮಾರ್, ಹಿಂದಿಯಿಂದ ಜಾಕಿಶ್ರಾಫ್, ತೆಲುಗಿನಿಂದ ತಮನ್ನಾ ಭಾಟಿಯಾ ( ಕಾವಾಲಯ್ಯ ಹಾಡಿನಲ್ಲಿ) ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.