Rajinikanth: ಕ್ರಿಕೆಟ್ ವಿಶ್ವಕಪ್‌ಗೆ ರಜಿನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ
Sep 20, 2023 06:24 AM IST
Rajinikanth: ಕ್ರಿಕೆಟ್ ವಿಶ್ವಕಪ್‌ಗೆ ರಜಿನಿಕಾಂತ್‌ಗೆ ಆಹ್ವಾನ; ಗೋಲ್ಡನ್ ಟಿಕೆಟ್ ನೀಡಿದ ಜಯ್ ಶಾ
- ಈ ಸಲದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ, ದೇಶದಾದ್ಯಂತ ವಿಐಪಿಗಳಿಗೆ ಗೋಲ್ಡನ್ ಟಿಕೆಟ್‌ಗಳನ್ನು ನೀಡುತ್ತಿದೆ. ಈ ಟಿಕೆಟ್‌ಗಳನ್ನು ಹೊಂದಿರುವವರು ವಿಐಪಿ ಆಸನಗಳಲ್ಲಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
Rajinikanth: ಜೈಲರ್ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ ತಲೈವಾ ಸೂಪರ್ ಸ್ಟಾರ್ ರಜಿನಿಕಾಂತ್. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 650 ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಪಟ್ಟಿ ಸೇರಿದೆ. ಇದೆಲ್ಲದರ ಜತೆಗೆ ಕ್ರಿಕೆಟ್ ಮೇಲೆಯೂ ನಟ ರಜಿನಿಕಾಂತ್‌ಗೆ ವಿಶೇಷ ಆಸಕ್ತಿ. ಶೂಟಿಂಗ್ ಬಿಡುವಿನಲ್ಲಿ ಕ್ರಿಕೆಟ್ ವೀಕ್ಷಣೆ ಮಾಡಿದ್ದೂ ಉಂಟು. ಇದೀಗ ಈ ಸಲದ ಕ್ರಿಕೆಟ್ ವಿಶ್ವಕಪ್ ಪಂದ್ಯವನ್ನೂ ಅವರು ವೀಕ್ಷಿಸಲಿದ್ದಾರೆ.
ಈ ಸಲ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ದೇಶದ 10 ನಗರಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಟಿಕೆಟ್ ವಿಚಾರದಲ್ಲಿಯೂ ಈಗಾಗಲೇ ಬುಕಿಂಗ್ ಸಹ ಆರಂಭಗೊಂಡಿದೆ. ಇನ್ನು ಕೆಲವೆಡೆ ಬುಕಿಂಗ್ ಕ್ಲೋಸ್ ಆಗಿದೆ.
ಇತ್ತ ಈ ಸಲದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ದೇಶಾದ್ಯಂತ ವಿಐಪಿಗಳಿಗೆ ಗೋಲ್ಡನ್ ಟಿಕೆಟ್‌ಗಳನ್ನು ನೀಡುತ್ತಿದೆ. ಈ ಟಿಕೆಟ್‌ಗಳನ್ನು ಹೊಂದಿರುವವರು ವಿಐಪಿ ಆಸನಗಳಲ್ಲಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ಅದರಂತೆ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಈಗಾಗಲೇ ಗೋಲ್ಡನ್ ಟಿಕೆಟ್ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಜನಿಕಾಂತ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಚಿನ್ನದ ಟಿಕೆಟ್ ನೀಡಿದರು. 2011ರ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯವನ್ನು ಸೂಪರ್ ಸ್ಟಾರ್ ರಜನಿಕಾಂತ್ ಸಹ ವೀಕ್ಷಣೆ ಮಾಡಿದ್ದರು. ಇದೀಗ ಗೋಲ್ಡನ್ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ರಜನಿಕಾಂತ್ ಸಹ ಆಗಾಗ ಕಾಣಿಸಿಕೊಳ್ಳಲಿದ್ದಾರೆ. 2023ರ ವಿಶ್ವಕಪ್ ಗೋಲ್ಡನ್ ಟಿಕೆಟ್ ಪಡೆದ ದಕ್ಷಿಣದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ರಜನಿಕಾಂತ್ ಪಾತ್ರರಾಗಿದ್ದಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ