Kollywood News: ಧನ್ಯಾ ಬಾಲಕೃಷ್ಣ ಬಾಲಾಜಿ ಮೋಹನ್ ಮದುವೆ ವಿವಾದ; ಕಾಲಿವುಡ್ ಜೋಡಿಯ ಕ್ಷಮೆ ಯಾಚಿಸಿದ ಯೂಟ್ಯೂಬರ್ ಕಲ್ಪಿಕಾ ಗಣೇಶ್
Jul 03, 2023 10:07 AM IST
ಬಾಲಾಜಿ ಮೋಹನ್ ಧನ್ಯಾ ಬಾಲಕೃಷ್ಣ ಕ್ಷಮೆ ಯಾಚಿಸಿದ ಕಲ್ಪಿಕಾ ಗಣೇಶ್
ನಾನು ಮಾಡಿರುವ ಆರೋಪಗಳು ಆಧಾರರಹಿತ, ನನ್ನ ವಿಡಿಯೋದಿಂದ ಅವರಿಗೆ ಆದ ಅಪಮಾನಕ್ಕೆ, ಅವರಿಗೆ ಉಂಟಾದ ಹಾನಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇನ್ಮುಂದೆ ಧನ್ಯಾ ಬಗ್ಗೆಯಾಗಲೀ ಬಾಲಾಜಿ ಬಗ್ಗೆಯಾಗಲೀ ನಕಾರಾತ್ಮಕವಾಗಿ ಮಾತನಾಡುವುದಿಲ್ಲ ಎಂದು ಕಲ್ಪಿಕಾ ಭರವಸೆ ನೀಡಿದ್ದಾರೆ.
ಬೆಂಗಳೂರು ಹುಡುಗಿ ಧನ್ಯಾ ಬಾಲಕೃಷ್ಣ ಹಾಗೂ ತಮಿಳು ನಿರ್ದೇಶಕ ಬಾಲಾಜಿ ಮೋಹನ್ ಮದುವೆ ವಿಚಾರ ಕಾಲಿವುಡ್‌ನಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಧನ್ಯಾ ಹಾಗೂ ಬಾಲಾಜಿ ಇಬ್ಬರೂ ಕಳೆದ ವರ್ಷವೇ ಸೀಕ್ರೇಟ್ ಆಗಿ ಮದುವೆ ಆಗಿದ್ದು ಈ ವಿಚಾರವನ್ನು ಇತ್ತೀಚೆಗೆ ರಿವೀಲ್ ಮಾಡಿದ್ದರು. ಈ ವಿಚಾರ ತಿಳಿದು ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ಶಾಕ್ ಆಗಿದ್ದರು.
ಇನ್ನು ಇವರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಕಲ್ಪಿಕಾ ಗಣೇಶ್ ತಮ್ಮ ವಾಹಿನಿಯಲ್ಲಿ ಧನ್ಯಾ ಬಾಲಾಜಿ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದರು. ಜೊತೆಗೆ ಧನ್ಯಾ ಬಾಲಕೃಷ್ಣ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದರು. ತಮ್ಮ ಹಾಗೂ ಪತ್ನಿ ಬಗ್ಗೆ ಕಲ್ಪಿಕಾ ಈ ರೀತಿ ಹೇಳಿಕೆ ನೀಡಿದ್ದಕ್ಕೆ ನಿರ್ದೇಶಕ ಬಾಲಾಜಿ, ಕಲ್ಪಿಕಾ ಗಣೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮಗೆ ಕಾನೂನು ಸಮಸ್ಯೆ ಎದುರಾದ ಹಿನ್ನೆಲೆ ಇದೀಗ ಕಲ್ಪಿಕಾ ಗಣೇಶ್ ಸೆಲ್ಫಿ ವಿಡಿಯೋವೊಂದನ್ನು ಮಾಡಿ ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಕಲ್ಪಿಕಾ ಗಣೇಶ್ ಧನ್ಯ ಬಾಲಕೃಷ್ಣ ಹಾಗೂ ಬಾಲಾಜಿ ಮೋಹನ್‌ಗೆ ಕ್ಷಮೆ ಕೇಳಿದ್ದಾರೆ. ಇಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಅವರ ಮಾನಹಾನಿ ಮಾಡಿದಕ್ಕೆ ಕ್ಷಮೆ ಯಾಚಿಸುತ್ತೇನೆ. ನಾನು ಮಾಡಿರುವ ಆರೋಪಗಳು ಆಧಾರರಹಿತ, ನನ್ನ ವಿಡಿಯೋದಿಂದ ಅವರಿಗೆ ಆದ ಅಪಮಾನಕ್ಕೆ, ಅವರಿಗೆ ಉಂಟಾದ ಹಾನಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇನ್ಮುಂದೆ ಧನ್ಯಾ ಬಗ್ಗೆಯಾಗಲೀ ಬಾಲಾಜಿ ಬಗ್ಗೆಯಾಗಲೀ ನಕಾರಾತ್ಮಕವಾಗಿ ಮಾತನಾಡುವುದಿಲ್ಲ ಎಂದು ಕಲ್ಪಿಕಾ ಭರವಸೆ ನೀಡಿದ್ದಾರೆ. ಕಲ್ಪಿಕಾ ಗಣೇಶ್ ಕ್ಷಮೆ ಕೇಳುತ್ತಿದ್ದಂತೆ ಬಾಲಾಜಿ ಮೋಹನ್ ಕೂಡಾ ಮದ್ರಾಸ್ ಹೈ ಕೋರ್ಟ್‌ನಲ್ಲಿ ಹೂಡಿದ್ದ ಕೇಸ್ ವಾಪಸ್ ಪಡೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕಲ್ಪಿಕಾ ಅವರ ನಿಂದನೆ ವಿಡಿಯೋವನ್ನು ಮಾತ್ರ ಇರಿಸಿ ಉಳಿದವನ್ನು ಡಿಲೀಟ್ ಮಾಡಲಾಗಿದೆ. ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಕಲ್ಪಿಕಾಗೆ ಕೋರ್ಟ್ ಸೂಚಿಸಿದೆ ಎನ್ನಲಾಗಿದೆ. ಬಾಲಾಜಿ ಮೋಹನ್‌ಗೆ ಇದು ಎರಡನೇ ಮದುವೆ ಆಗಿದ್ದು ಕಲ್ಪಿಕಾ ಗಣೇಶ್, ಬಾಲಾಜಿ ಮೋಹನ್ ಮೊದಲ ಪತ್ನಿಯ ಆಪ್ತ ಸ್ನೇಹಿತೆ ಆಗಿದ್ದರಿಂದ ಧನ್ಯಾ ವಿರುದ್ಧ ಹೀಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.
ಬಾಲಾಜಿ ಮೋಹನ್ ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹಾಗೂ ನಟನಾಗಿ ಗುರುತಿಸಿಕೊಂಡಿದ್ದಾರೆ. 2012 ರಲ್ಲಿ ತಮಿಳು ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದ ಬಾಲಾಜಿ ಮೊದಲ ಚಿತ್ರದಲ್ಲೇ ಜನರ ಮೆಚ್ಚುಗೆ ಗಳಿಸಿದರು. ನಂತರ ಲವ್ ಫೇಲ್ಯೂರ್, ವಾಯ ಮುಡಿ ಪೇಸವಮ್, ಮಲಯಾಳಂನ ಸಂಸಾರಮ್ ಆರೋಗ್ಯತಿನು ಹಾನಿಕಾರಮ್, ತಮಿಳಿನ ಮಾರಿ ಹಾಗೂ ಮಾರಿ 2 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಟನಾರಿ ಕೂಡಾ 4-5 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸಿನಿಮಾವನ್ನು ನಿರ್ಮಾಣ ಕೂಡಾ ಮಾಡಿದ್ದಾರೆ.
ಇನ್ನು ಧನ್ಯಾ ಬಾಲಕೃಷ್ಣ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡತಿ ಆಗಿದ್ದರೂ ಧನ್ಯಾ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಸಾರ್ವಜನಿಕರಿಗೆ ಸುವರ್ಣಾವಕಾಶ, ನೋಡಿ ಸ್ವಾಮಿ ಇವನು ಇರೋದೇ ಹೀಗೆ, ಫ್ಲಿಪ್ ಫ್ಲಾಪ್, 2020 ಸಿನಿಮಾಗಳಲ್ಲಿ ನಟಿಸಿದ್ದಾರೆ.