logo
ಕನ್ನಡ ಸುದ್ದಿ  /  ಮನರಂಜನೆ  /  Lata Mangeshkar Birthday: ರಾಜಮನೆತನದ ಸೊಸೆ ಆಗಬೇಕಿದ್ದ ಅದ್ಭುತ ಕಂಠದ ಗಾಯಕಿ ಲತಾ ಮಂಗೇಶ್ಕರ್‌ ಮದುವೆ ಆಗದೆ ಉಳಿದಿದ್ದೇಕೆ?

Lata Mangeshkar Birthday: ರಾಜಮನೆತನದ ಸೊಸೆ ಆಗಬೇಕಿದ್ದ ಅದ್ಭುತ ಕಂಠದ ಗಾಯಕಿ ಲತಾ ಮಂಗೇಶ್ಕರ್‌ ಮದುವೆ ಆಗದೆ ಉಳಿದಿದ್ದೇಕೆ?

Rakshitha Sowmya HT Kannada

Sep 28, 2023 11:12 AM IST

google News

ಲತಾ ಮಂಗೇಶ್ಕರ್‌ 94ನೇ ಹುಟ್ಟುಹಬ್ಬದ ಸವಿನೆನಪು

  • ಲತಾ ಮಂಗೇಶ್ಕರ್‌ ಹಾಗೂ ರಾಜ್‌ಸಿಂಗ್‌ ನಡುವಿನ ಪ್ರೀತಿ ಗಟ್ಟಿಯಾಗುತ್ತಲೇ ಹೋಯ್ತು. ಇಬ್ಬರೂ ಮದುವೆ ಆಗಲೂ ನಿರ್ಧರಿಸಿದರು. ರಾಜ್‌ಸಿಂಗ್‌ ಅವರು ತಮ್ಮ ಮೆಚ್ಚಿನ ಲತಾ ಅವರನ್ನು ಪ್ರೀತಿಯಿಂದ ಮೀಟು ಎಂದು ಕರೆಯುತ್ತಿದ್ದಾಗಿ ಅವರ ಆತ್ಮೀಯರು ಹೇಳುತ್ತಾರೆ.

ಲತಾ ಮಂಗೇಶ್ಕರ್‌ 94ನೇ ಹುಟ್ಟುಹಬ್ಬದ ಸವಿನೆನಪು
ಲತಾ ಮಂಗೇಶ್ಕರ್‌ 94ನೇ ಹುಟ್ಟುಹಬ್ಬದ ಸವಿನೆನಪು

ಇಂದು ಬಾಲಿವುಡ್‌ ಗಾಯಕಿ ಲತಾ ಮಂಗೇಶ್ಕರ್‌ ಅವರ 94ನೇ ಹುಟ್ಟುಹಬ್ಬ. ಲತಾ ದೀದಿ ತಮ್ಮ ಹಾಡುಗಳಿಂದಲೇ ಕೋಟ್ಯಂತರ ಭಾರತೀಯರ ಹೃದಯಕ್ಕೆ ಲಗ್ಗೆ ಹಾಕಿದ ಅದ್ಭುತ ಕಂಠದ ಗಾಯಕಿ. ಹಿರಿಯ ಗಾಯಕಿ ಈಗ ನಮ್ಮೊಂದಿಗೆ ಇಲ್ಲ. ಅವರ ಹಾಡುಗಳಂತೂ ಎವರ್‌ ಗ್ರೀನ್‌. ಮೆಚ್ಚಿನ ಗಾಯಕಿ ಲತಾ ಮಂಗೇಶ್ಕರ್‌ ಹುಟ್ಟುಹಬ್ಬದ ಸವಿನೆನಪನ್ನು ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಸಂಭ್ರಮಿಸುತ್ತಿದ್ದಾರೆ.

ಲತಾ ಮಂಗೇಶ್ಕರ್‌ ತಂದೆ ದೀನಾನಾಥ್‌ ಮಂಗೇಶ್ಕರ್‌ ಹಾಗೂ ತಾಯಿ ಸುಧಾಮತಿ. ತಂದೆ ಮರಾಠಿಗರಾದರೆ, ತಾಯಿ ಗುಜರಾತಿ. ತಂದೆ ಕೂಡಾ ಗಾಯಕರಾಗಿದ್ದರಿಂದ ಲತಾ ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. 13ನೇ ವಯಸ್ಸಿಗೆ ಲತಾ ಮಂಗೇಶ್ಕರ್‌ ಹಿನ್ನೆಲೆ ಗಾಯನ ಆರಂಭಿಸಿದರು. 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಲತಾ ಮಂಗೇಶ್ಕರ್‌ ಹಾಡಿದ್ದಾರೆ. ವೃತ್ತಿ ಜೀವನದಲ್ಲಿ ಉನ್ನತ ಶಿಖರಕ್ಕೆ ಏರಿದ ಲತಾ ದೀದಿ ಕೊನೆಯವರೆಗೂ ಮದುವೆ ಆಗದೆ ಕನ್ಯೆಯಾಗೇ ಉಳಿದರು. ಅಷ್ಟಕ್ಕೂ ಅವರು ಮದುವೆ ಆಗದೆ ಉಳಿದಿದ್ದಕ್ಕೆ ಒಂದು ಪ್ರಮುಖ ಕಾರಣ ಇದೆ.

ರಾಜಾ ಡುಂಗರ್‌ಪುರ್‌ ಅವರನ್ನು ಪ್ರೀತಿಸುತ್ತಿದ್ದ ಲತಾ ಮಂಗೇಶ್ಕರ್‌

ಲತಾ ಮಂಗೇಶ್ಕರ್‌, ರಾಜ ಮನೆತನದ ಸೊಸೆ ಆಗಬೇಕಿತ್ತು. ರಾಜಸ್ಥಾನದ ಡುಂಗರ್‌ಪುರ್‌ ಮನೆತನದ ರಾಜ ರಾಜ್‌ಸಿಂಗ್‌ ಡುಂಗರ್‌ಪುರ್‌ ಹಾಗೂ ಲತಾ ಮಂಗೇಶ್ಕರ್‌ ಇಬ್ಬರೂ ಪ್ರೀತಿಸುತ್ತಿದ್ದರು. ಲತಾ ಗಾಯಕಿಯಾಗಿದ್ದರೆ ರಾಜ್‌ಸಿಂಗ್‌ ಕ್ರಿಕೆಟ್‌ ಪ್ರೇಮಿ. ಲತಾ ಅವರ ಸಹೋದರ ಹೃದಯನಾಥ್‌ ಮಂಗೇಶ್ಕರ್‌ ಕೂಡಾ ಕ್ರಿಕೆಟ್‌ ಪ್ರೇಮಿಯಾಗಿದ್ದರಿಂದ ರಾಜ್‌ಸಿಂಗ್‌ ಹಾಗೂ ಹೃದಯ್‌ನಾಥ್‌ ಇಬ್ಬರೂ ಗೆಳೆಯರಾಗಿದ್ದರು. ಒಟ್ಟಿಗೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದರು. ದಿನೇ ದಿನೆ ಲತಾ ಮಂಗೇಶ್ಕರ್‌ ಹಾಗೂ ರಾಜ್‌ಸಿಂಗ್‌ ನಡುವಿನ ಪ್ರೀತಿ ಗಟ್ಟಿಯಾಗುತ್ತಲೇ ಹೋಯ್ತು. ಇಬ್ಬರೂ ಮದುವೆ ಆಗಲೂ ನಿರ್ಧರಿಸಿದರು. ರಾಜ್‌ಸಿಂಗ್‌ ಅವರು ತಮ್ಮ ಮೆಚ್ಚಿನ ಲತಾ ಅವರನ್ನು ಪ್ರೀತಿಯಿಂದ ಮೀಟು ಎಂದು ಕರೆಯುತ್ತಿದ್ದಾಗಿ ಅವರ ಆತ್ಮೀಯರು ಹೇಳುತ್ತಾರೆ.

ಆದರೆ ಲತಾ ಮಂಗೇಶ್ಕರ್‌ ಹಾಗೂ ರಾಜ್‌ಸಿಂಗ್‌ ಪ್ರೀತಿ ಹಾಗೂ ಮದುವೆಗೆ ರಾಜಮನೆತನದವರು ಒಪ್ಪಲಿಲ್ಲ. ಸಾಮಾನ್ಯ ಯುವತಿ ರಾಜಮನೆತನಕ್ಕೆ ಸೊಸೆಯಾಗಿ ಬರುವುದು ಅವರಿಗೆ ಇಷ್ಟವಿರಲಿಲ್ಲ. ಇವರಿಬ್ಬರೂ ಎಲ್ಲಿ ಗುಟ್ಟಾಗಿ ಮದುವೆ ಆಗಿಬಿಡುವರೋ ಎಂಬ ಕಾರಣಕ್ಕೆ ರಾಜ್‌ಸಿಂಗ್‌ ಹೆತ್ತವರು ಮಗನ ಬಳಿ ಲತಾ ಪ್ರೀತಿ ತೊರೆಯುವಂತೆ ಪ್ರಮಾಣ ಮಾಡಿಸಿಕೊಂಡಿದ್ದರಂತೆ. ಅಷ್ಟೇ ಅಲ್ಲ, ಲತಾ ಮಂಗೇಶ್ಕರ್‌ ಅವರನ್ನು ಕರೆಸಿ, ರಾಜ್‌ಸಿಂಗ್‌ನಿಂದ ದೂರ ಇರುವಂತೆ ಎಚ್ಚರಿಕೆ ಕೂಡಾ ನೀಡಿದ್ದರಂತೆ.

ಪ್ರೀತಿಗೆ ಮನೆಯವರಿಂದ ವಿರೋಧ

ರಾಜ್‌ಸಿಂಗ್‌ ಹೆತ್ತವರು ಮಗನಿಗೆ ಬೇರೆ ರಾಜಮನೆತನದ ಹುಡುಗಿಯನ್ನು ನಿಶ್ಚಯಿಸಿದ್ದಾರೆ. ಆದರೆ ಲತಾ ಮೇಲಿನ ಪ್ರೀತಿಗೆ ಅವರು ಆ ಮದುವೆಯನ್ನು ನಿರಾಕರಿಸಿದ್ದಾರೆ. ಈ ಪ್ರೀತಿಯಿಂದ ಹೊರ ಬರಲು ಮರೆಯಲು ಲತಾ ಅವರಿಗೆ ಬಹಳ ಸಮಯ ಹಿಡಿಸಿತಂತೆ. ಅದರೂ ಅವರು ಬೇರೆ ಹುಡುಗನನ್ನು ಮದುವೆ ಆಗಲಿಲ್ಲ. ರಾಜ್‌ಸಿಂಗ್‌ ಕೂಡಾ ಕೊನೆವರೆಗೂ ಬೇರೆ ಹುಡುಗಿಯನ್ನು ಮದುವೆ ಆಗದೆ ಹಾಗೇ ಉಳಿದರು. ಈ ವಿಚಾರವನ್ನು ರಾಜ್‌ ಸಿಂಗ್‌ ಅವರ ಸಹೋದರಿಯ ಪುತ್ರಿ ಬಿಕಾನೆರ್‌ನ ರಾಣಿ ರಾಜ್ಯಶ್ರೀ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇಬ್ಬರೂ ಗುಟ್ಟಾಗಿ ಮದುವೆ ಆಗಿದ್ದರು ಎಂಬ ಸುದ್ದಿ ಕೂಡಾ ಹರಡಿತ್ತು. ಅದನ್ನು ಕೂಡಾ ರಾಜ್ಯಶ್ರೀ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ರಾಜ್‌ಸಿಂಗ್‌, ಹೆತ್ತವರಿಗೆ ಮಾತು ಕೊಟ್ಟಿದ್ದರಿಂದ ಅವರು ಲತಾ ಅವರನ್ನು ಮದುವೆ ಆಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊನೆವರೆಗೂ ಇಬ್ಬರೂ ಸ್ನೇಹಿತರಾಗಿ ಉಳಿದಿದ್ದರು. ರಾಜ್‌ ಸಿಂಗ್‌ 2009ರಲ್ಲಿ ನಿಧನಾದರು. ಲತಾ ಮಂಗೇಶ್ಕರ್‌, 2022 ಫೆಬ್ರವರಿಯಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ