Vijay Deverakonda Remuneration: ನಿರ್ಮಾಪಕರಿಗೆ ಸಂಭಾವನೆ ಹಣ ವಾಪಸ್ ನೀಡಿದ 'ಲೈಗರ್' ನಟ...ಪಡೆದದ್ದೆಷ್ಟು, ಕೊಟ್ಟಿದ್ದೆಷ್ಟು..?
Sep 07, 2022 10:12 AM IST
ಸಂಭಾವನೆ ಹಣದಲ್ಲಿ 6 ಕೋಟಿ ರೂಪಾಯಿ ವಾಪಸ್ ನೀಡಿದ ವಿಜಯ್ ದೇವರಕೊಂಡ
- ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಬಾಕ್ಸಾಫೀಸಿನಲ್ಲಿ ಸೋಲು ಕಂಡಿತು. ಇದು ಚಿತ್ರತಂಡ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಭಾರೀ ನಿರಾಶೆಯುಂಟುಮಾಡಿದೆ. ಚಿತ್ರದ ಸೋಲಿನಿಂದ ನಿರ್ಮಾಪಕರು ಹಾಗೂ ವಿತರಕರು ನಷ್ಟ ಅನುಭವಿಸಿದ್ದಾರೆ.
ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಸಿನಿಮಾ ಆರಂಭವಾದಾಗ ಇದು ಭಾರತೀಯ ಚಿತ್ರರಂಗದ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗಬಹುದು ಎಂದು ಅಂದಾಜಿಸಲಾಗಿತ್ತು. ಟೀಸರ್, ಟ್ರೇಲರ್ ಬಿಡುಗಡೆ ಆದಾಗ ಕೂಡಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಹಗಲು ರಾತ್ರಿ ಎನ್ನದೆ ಪ್ರಮೋಷನ್ ಕೆಲಸಗಳಲ್ಲಿ ಭಾಗಿಯಾಗಿದ್ದರು. ವಿಜಯ್ ದೇವರಕೊಂಡ ಮನೆಯಲ್ಲಿ ಲೈಗರ್ ಯಶಸ್ಸಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜೊತೆಗೆ ಸಿನಿಮಾವನ್ನು ಹಲವರು ಬಾಯ್ ಕಾಟ್ ಮಾಡಿದ್ದರು. ಟ್ವಿಟ್ಟರ್‌ನಲ್ಲಿ ಬಾಯ್ ಕಾಟ್ ಅಭಿಯಾನ ಕೂಡಾ ನಡೆದಿತ್ತು. ಇಷ್ಟಾದರೂ ವಿಜಯ್ ದೇವರಕೊಂಡ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಯಾರು ಏನಂದರೂ ನಮ್ಮ ಕೆಲಸ ನಾವು ಮಾಡಿದ್ದೇವೆ, ಏನೇ ಆದರೂ ಹೋರಾಡುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಇದು ಕೆಲವರಿಗೆ ಅಹಂ ಎನ್ನಿಸಿತ್ತು.
ಆದರೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಬಾಕ್ಸಾಫೀಸಿನಲ್ಲಿ ಸೋಲು ಕಂಡಿತು. ಇದು ಚಿತ್ರತಂಡ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಭಾರೀ ನಿರಾಶೆಯುಂಟುಮಾಡಿದೆ. ಚಿತ್ರದ ಸೋಲಿನಿಂದ ನಿರ್ಮಾಪಕರು ಹಾಗೂ ವಿತರಕರು ನಷ್ಟ ಅನುಭವಿಸಿದ್ದಾರೆ. 125 ಕೋಟಿ ರೂಪಾಯಿ ಖರ್ಚು ಮಾಡಿದ ಸಿನಿಮಾ ಕಲೆಕ್ಷನ್ ಮಾಡಿರುವುದು ಕೇವಲ 55 ಕೋಟಿ ರೂಪಾಯಂತೆ. ಆದ್ದರಿಂದ ವಿಜಯ್ ದೇವರಕೊಂಡ ತಾವು ಪಡೆದಿದ್ದ ಸಂಭಾವನೆ ಹಣದಲ್ಲಿ ಸ್ವಲ್ಪ ವಾಪಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
'ಲೈಗರ್' ಚಿತ್ರದಲ್ಲಿ ಅಭಿನಯಿಸಲು ವಿಜಯ್ ದೇವರಕೊಂಡ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರಂತೆ, ಆದರೆ ಇದೀಗ ತಮ್ಮ ಸಂಭಾವನೆ ಹಣದಲ್ಲಿ ಅವರು 6 ಕೋಟಿ ರೂಪಾಯಿ ಹಣವನ್ನು ನಿರ್ಮಾಪಕ ಕರಣ್ ಜೋಹರ್ ಹಾಗೂ ಚಾರ್ಮಿ ಕೌರ್‌ಗೆ ವಾಪಸ್ ನೀಡಿದ್ದಾರಂತೆ. ಹಾಗಾಗಿ ಇಬ್ಬರಿಗೂ ತಲಾ 3 ಕೋಟಿ ರೂಪಾಯಿ ವಾಪಸ್ ಬಂದಂತೆ ಆಗಿದೆ. ಸದ್ಯಕ್ಕೆ ವಿಜಯ್ ದೇವರಕೊಂಡ 'ಖುಷಿ' ಎಂಬ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದನ್ನು ಹೊರತುಪಡಿಸಿ ಅವರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿಲ್ಲ.
ತಮ್ಮನ್ನು ನಿಂದಿಸಿದ್ದ ಥಿಯೇಟರ್ ಮಾಲೀಕನನ್ನು ಭೇಟಿಯಾಗಿದ್ದ ವಿಜಯ್ ದೇವರಕೊಂಡ
ಸಿನಿಮಾ ಸೋಲುತ್ತಿದ್ದಂತೆ ಬೇಸರಕೊಂಡಿದ್ದ ಮುಂಬೈನ ಚಿತ್ರಮಂದಿರದ ಮಾಲೀಕರೊಬ್ಬರು, ವಿಜಯ್ ಸಿನಿಮಾ ಸೇರಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಆತ ಓರ್ವ ದುರಹಂಕಾರಿ ಎಂದೂ ತೆಗಳಿ ಹಿಗ್ಗಾಮುಗ್ಗಾ ಬೈಯ್ದಿದ್ದರು. ಇದರ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ ಥಿಯೇಟರ್ ಮಾಲೀಕನನ್ನು ಭೇಟಿಯಾಗಿ ಬಂದಿದ್ದರು. ಅಷ್ಟೇ ಅಲ್ಲ ಅವರೊಂದಿಗೆ ಒಂದಷ್ಟು ಸಮಯ ಕಳೆದು ಬಂದಿದ್ದರು. ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರ ಮತ್ತು ಗೈಟಿ ಗ್ಯಾಲಕ್ಸಿ ಚಿತ್ರಮಂದಿರದ ಮಾಲೀಕ ಮನೋಜ್ ದೇಸಾಯಿ ಅವರನ್ನು ವಿಜಯ್ ಭೇಟಿ ಮಾಡಿದ್ದಾರೆ. ವಿಜಯ್ ಹೀಗೆ ಭೇಟಿಯಾಗಿದ್ದೇ ತಡ, 'ತಮ್ಮಿಂದ ತಪ್ಪಾಗಿದೆ. ಹಾಗೇ ನಿಂದಿಸಿದ್ದಕ್ಕೆ ವಿಷಾದವಿದೆ' ಎಂದು ಮನೋಜ್ ದೇಸಾಯಿ ಕ್ಷಮೆ ಕೇಳಿದ್ದಾರೆ. 'ವಿಜಯ್ ನಿಜಕ್ಕೂ ಒಳ್ಳೆಯ ಹುಡುಗ, ನಟ. ನಾನು ವಿಜಯ್ ಅವರ ಕೆಲಸವನ್ನು ಇಷ್ಟಪಡುತ್ತೇನೆ. ಅವರಿಗೆ ಉಜ್ವಲ ಭವಿಷ್ಯವಿದೆ' ಎಂದು ಮನೋಜ್ ತಾವು ಆಡಿದ ಮಾತಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.