ಒಟಿಟಿಗೆ ಬರ್ತಿದೆ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಕ್ರೈಂ ಕಾಮಿಡಿ ಸಿನಿಮಾ; ಕನ್ನಡದಲ್ಲೂ ಸ್ಟ್ರೀಮ್ ಆಗಲಿದೆ ನುನಾಕ್ಕುಜಿ
Sep 07, 2024 01:44 PM IST
ಒಟಿಟಿಗೆ ಬರ್ತಿದೆ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಕ್ರೈಂ ಕಾಮಿಡಿ ಸಿನಿಮಾ; ಕನ್ನಡದಲ್ಲೂ ಸ್ಟ್ರೀಮ್ ಆಗಲಿದೆ ನುನಾಕ್ಕುಜಿ
ದೃಶ್ಯಂ ಸಿನಿಮಾ ಖ್ಯಾತಿಯ ಜೀತು ಜೋಸೆಫ್ ಕ್ರೈಂ ಥ್ರಿಲ್ಲರ್ ಸ್ಪೆಷಲಿಸ್ಟ್ ಎಂದೇ ಫೇಮಸ್. ಈಗ ಅವರು ಆ ಹಣೆಪಟ್ಟಿಯಿಂದ ಹೊರ ಬಂದು ಕ್ರೈಂ ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಈಗ ಒಟಿಟಿಯಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.
ಸಿನಿ ಪ್ರಿಯರಿಗೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ದೃಶ್ಯಂ, ಬಹಳ ಫೇವರೆಟ್ ಸಿನಿಮಾ. ಮಲಯಾಳಂ ಮೂಲದ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲೂ ಹಿಟ್ ಆಗಿತ್ತು. ಮಲಯಾಳಂನಲ್ಲಿ ಈ ಚಿತ್ರವನ್ನು ಜೀತು ಜೋಸೆಫ್ ನಿರ್ದೇಶಿಸಿದ್ದರು. ಇದೀಗ ಈ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳಿರುವ ಸಿನಿಮಾವೊಂದು ಒಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಚಿತ್ರಮಂದಿರದಲ್ಲೂ ಕಮರ್ಷಿಯಲ್ ಹಿಟ್ ಎನಿಸಿಕೊಂಡ ಚಿತ್ರ
ಕ್ರೈಮ್ ಕಾಮಿಡಿ ಸಿನಿಮಾ ನುನಾಕ್ಕುಜಿ, ಚಿತ್ರಮಂದಿರದಲ್ಲಿ ತೆರೆ ಕಂಡ ಕೆಲವು ದಿನಗಳ ನಂತರ ಒಟಿಟಿಗೆ ಲಗ್ಗೆ ಇಟ್ಟಿದೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಕಮರ್ಷಿಯಲ್ ಹಿಟ್ ಆಗಿದೆ. ಜೀತು ಜೋಸೆಫ್ ಸ್ಕ್ರೀನ್ ಪ್ಲೇ, ಟ್ವಿಸ್ಟ್ ಎಲ್ಲವೂ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದೆ. ಈ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಕೇವಲ 10 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇದುವರೆಗೂ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರಮಂದಿರದಲ್ಲಿ ಮೋಡಿ ಮಾಡಿದ್ದ ಈ ಚಿತ್ರ ಈಗ ನಿಮ್ಮನ್ನು ನಕ್ಕು ನಲಿಸಲು ಮನೆ ಮನೆಗೂ ಬರುತ್ತಿದೆ.
ನುನಾಕ್ಕುಜಿ ಒಟಿಟಿಗೆ ಬರುತ್ತಿದೆ.ಸ್ಟೆಪ್ಟೆಂಬರ್ 13 ರಿಂದ ಜೀ 5 ಒಟಿಟಿಯಲ್ಲಿ ಈ ಮಲಯಾಳಂ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ಒಟಿಟಿ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಮಲಯಾಳಂ ಜೊತೆಗೆ ಕನ್ನಡ, ತೆಲುಗು ಭಾಷೆಗಳಲ್ಲಿ ಕೂಡಾ ಸ್ಟ್ರೀಮ್ ಆಗಲಿದೆ. ಜೀತು ಜೋಸೆಫ್ ಚಿತ್ರಗಳಿಗೆ ಒಟಿಟಿಯಲ್ಲಿ ಇರುವ ಕ್ರೇಜ್ ದೃಷ್ಟಿಯಲ್ಲಿಟ್ಟುಕೊಂಡು ಥಿಯೇಟರ್‌ಗೆ ಬರುತ್ತಿದ್ದಂತೆ ಜಿ 5, ಈ ಚಿತ್ರವನ್ನುಖರೀದಿಸಿದೆ.
ಗಮನ ಸೆಳೆದ ಬೇಸಿಲ್ ಜೋಸೆಫ್ ನಟನೆ
ಇಬಿ ಜಕಾರಿಯಾ ಒಬ್ಬ ಬಿಸ್ನೆಸ್ ಮ್ಯಾನ್, ತಂದೆ ನಿಧನದ ನಂತರ ಈತನೇ ಎಲ್ಲಾ ಜವಾಬ್ದಾರಿ ಪಡೆದುಕೊಳ್ಳುತ್ತಾನೆ. ಒಮ್ಮೆ ಇಬಿ ಮನೆಯನ್ನು ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ಬ್ಲಾಕ್ ಮನಿ ಜೊತೆಗೆ ಆತನ ಪರ್ಸನಲ್ ಲ್ಯಾಪ್ ಟಾಪ್ ಕೂಡಾ ವಶ ಪಡಿಸಿಕೊಳ್ಳುತ್ತಾರೆ. ಆದರೆ ಆ ಲ್ಯಾಪ್‌ಟಾಪ್‌ನಲ್ಲಿ ಪತ್ನಿ ರಿಮಿ ಜೊತೆ ಇಬಿ ರೊಮಾನ್ಸ್ ವಿಡಿಯೋ ಇರುತ್ತದೆ. ಆದರೆ ಈ ವಿಡಿಯೋ ಯಾರಿಗೂ ಕಾಣದಂತೆ, ಹೇಗಾದರೂ ಮಾಡಿ ಆ ಲ್ಯಾಪ್‌ಟಾಪನ್ನು ಐಟಿ ಅಧಿಕಾರಿಗಳಿಂದ ವಾಪಸ್ ಪಡೆಯಬೇಕು ಎಂದು ಇಬಿ ಪ್ಲ್ಯಾನ್ ಮಾಡುತ್ತಾನೆ. ಅದಕ್ಕಾಗಿ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾನೆ. ನಂತರ ಏನಾಗುತ್ತದೆ? ಆ ಲ್ಯಾಪ್‌ಟಾಪ್ ಅವನಿಗೆ ವಾಪಸ್ ದೊರೆಯುವುದಾ ಅನ್ನೋದು ನುನಾಕ್ಕುಜಿ ಸಿನಿಮಾ ಕಥೆ.
ಚಿತ್ರದಲ್ಲಿ ಬೇಸಿಲ್ ಜೋಸೆಫ್ ಮತ್ತು ಗ್ರೇಸ್ ಆಂಟೋನಿ ನಟನೆಯಿಂದ ಸಿನಿಪ್ರಿಯರನ್ನು ಸೆಳೆದಿದ್ದಾರೆ. ಅನಾವಶ್ಯಕ ದೃಶ್ಯಗಳನ್ನು ಸೇರಿಸದೆ, ಎಲ್ಲೂ ಬೋರ್ ಎನಿಸದೆ 2 ಗಂಟೆಯಲ್ಲಿ ಸಿನಿಮಾ ಮುಗಿಯಲಿದೆ. ಕ್ರೈಂ ಥ್ರಿಲ್ಲರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಜೀತು ಜೋಸೆಫ್ ಕಾಮಿಡಿಯಲ್ಲೂ ಯಶಸ್ಸು ಗಳಿಸಿದ್ದಾರೆ. ಚಿತ್ರದ ನಾಯಕ ಬೇಸಿಲ್ ಜೋಸೆಫ್ ಬಗ್ಗೆ ಹೇಳುವುದಾದರೆ ಇದೇ ವರ್ಷ ಅವರು ನಾಯಕನಾಗಿ ನಟಿಸಿರುವ 4 ಸಿನಿಮಾಗಳು ತೆರೆ ಕಂಡಿವೆ. ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿರುವ ಟೊವಿನೋ ಥಾಮಸ್ ಅವರ ARM ಚಿತ್ರದಲ್ಲಿ ಬೇಸಿಲ್ ಜೋಸೆಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.