Turbo Movie Review: ಮಮ್ಮುಟ್ಟಿ ಟರ್ಬೊ ಸಿನಿಮಾಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ; ರಾಜ್ ಬಿ ಶೆಟ್ಟಿ ನಟನೆ ಮಾತ್ರ ಭಯಂಕರ ಮಾರ್ರೆ
May 23, 2024 02:46 PM IST
Turbo Movie Review: ಮಮ್ಮುಟ್ಟಿ ಟರ್ಬೊ ಸಿನಿಮಾಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
- Turbo Movie Public Review: ಎಕ್ಸ್ (ಟ್ವಿಟ್ಟರ್) ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಟನೆಯ ಟರ್ಬೊ ಸಿನಿಮಾಕ್ಕೆ ಮಿಶ್ರ ಪ್ರತಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡ ನಟ ರಾಜ್ ಬಿ ಶೆಟ್ಟಿ ವಿಲನ್ ಪಾತ್ರಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರು: ಮಲಯಾಳಂನ ಬಹುನಿರೀಕ್ಷಿತ ಟರ್ಬೊ ಸಿನಿಮಾ ಬಿಡುಗಡೆಯಾಗಿದೆ. ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಒಂದಿಷ್ಟು ಜನರು ಸೂಪರ್ ಎಂದರೆ, ಇನ್ನೊಂದಿಷ್ಟು ಜನರು ಸಾಧಾರಣ ಸಿನಿಮಾ ಎಂದಿದ್ದಾರೆ. ಇದೇ ಸಮಯದಲ್ಲಿ ಬಹುತೇಕರಿಗೆ ಕನ್ನಡ ನಟ ರಾಜ್ ಬಿ ಶೆಟ್ಟಿಯ ನಟನೆ ಸಕತ್ ಇಷ್ಟವಾಗಿದೆ.
ರಾಜ್ ಬಿ ಶೆಟ್ಟಿ ಇಂದು ಅಧಿಕೃತವಾಗಿ ಮಾಲಿವುಡ್ ಸಿನಿಮಾಕ್ಕೆ ಎಂಟ್ರಿ ನೀಡಿದ್ದಾರೆ. ಕಳೆದ ವರ್ಷ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ಮಾಲಿವುಡ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ, ಅದು ಡಬ್ಬಿಂಗ್ ಆಗಿರುವ ಸಿನಿಮಾ. ಆದರೆ, ಇದೀಗ ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಿದ್ದಾರೆ. ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ಈಗಾಗಲೇ ಕೇರಳ ಮಾತ್ರವಲ್ಲದೆ ಭಾರತದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಆಪ್ತರಾಗಿದ್ದಾರೆ.
ಟರ್ಬೊದಲ್ಲಿ ರಾಜ್ ಬಿ ಶೆಟ್ಟಿ ನಟನೆಗೆ ಮೆಚ್ಚುಗೆ
ಟರ್ಬೊ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ವೆಟ್ರಿವೇಲ್ ಷಣ್ಮುಗ ಸುಂದರಂ ಪಾತ್ರದಲ್ಲಿ ನಟಿಸಿದ್ದಾರೆ. ಮಿಧುನ್ ಮಾನ್ಯುಲ್ ಥಾಮಸ್ ಬರೆದ ಕಥೆ ಆಧರಿತ ಈ ಸಿನಿಮಾವನ್ನು ನಿರ್ದೇಶಕ ವೈಶಾಕ್ ಅವರು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಕುರಿತು ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ರಾಜ್ ಬಿ ಶೆಟ್ಟಿ ನಟನೆ ಬೆಂಕಿ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿದವರಿಗೆ ಮಮ್ಮುಟ್ಟಿ ನಟನೆಯೊಂದಿಗೆ ರಾಜ್ ಬಿ ಶೆಟ್ಟಿ ನಟನೆ ಸಕತ್ ಇಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟರ್ಬೊ ಜತೆಗೆ ರಾಜ್ ಬಿ ಶೆಟ್ಟಿ ಟ್ರೆಂಡ್ ಆಗುತ್ತಿದ್ದಾರೆ.
ಟರ್ಬೊ ಸಿನಿಮಾ ವಿಮರ್ಶೆ
ಮೊದಲಾರ್ಧ ಉತ್ತಮವಾಗಿದೆ. ಈ ಸಿನಿಮಾ ಶೋನ ಪ್ರಮುಖ ಆತ್ಮ ರಾಜ್ ಬಿ ಶೆಟ್ಟಿ. ಎಂತಹ ನಟನೆ, ಇವರ ಪರಿಚಯ ಸೀನ್‌ಗೆ ಇಡೀ ಥಿಯೇಟರ್ ರೋಮಾಂಚಗೊಂಡಿದೆ. ಮಮ್ಮುಟ್ಟಿಯ ಮೊದಲ ಇಂಟ್ರೋ ಕೂಡ ಉತ್ತಮವಾಗಿದೆ. ಕಾಮಿಡಿ, ಸ್ಟೈಲಿಶ್ ಆಕ್ಷನ್ ಗಮನ ಸೆಳೆಯುತ್ತದೆ ಎಂದು ಎಕ್ಸ್‌ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದಾರೆ.
ಟರ್ಬೊ ಸಿನಿಮಾ ನೋಡಿದೆ. ಒಂದೇ ಪದದಲ್ಲಿ ಹೇಳುವುದಾದರೆ ಇದು ಎಂಕಂಪನಿ ಸಿನಿಮಾ. ಇತ್ತೀಚೆಗೆ ಬಿಡುಗಡೆಯಾದ ಅತ್ಯುತ್ತಮ ಆಕ್ಷನ್ ಸಿನಿಮಾ. ಅತ್ಯುತ್ತಮ ನಿರ್ದೇಶನ, ಸಂಗೀತ, ಸಿನಿಮಾಟ್ರೊಗ್ರಫಿ, ಅತ್ಯುತ್ತಮ ಸ್ಕ್ರೀನ್‌ಪ್ಲೇ. ಹಾಸ್ಯವೂ ಇಷ್ಟವಾಗುತ್ತದೆ. ಮಮ್ಮುಟ್ಟಿಯವರ ಶಕ್ತಿ, ಸಾಹಸ ಅತ್ಯುತ್ತಮ. ರಾಜ್ ಬಿ ಶೆಟ್ಟಿ ವಿಲನ್ ಆಗಿ ಬೆರಗುಗೊಳಿಸುತ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಟರ್ಬೊ ಸಿನಿಮಾವು ವಾಣಿಜ್ಯ ಉದ್ದೇಶದಿಂದ ರಚನೆಯಾದಂತೆ ಇದೆ. ಮೊದಲಾರ್ಧ ಉತ್ತಮವಾಗಿದೆ. ದ್ವಿತೀಯಾರ್ಧ ಇನ್ನಷ್ಟು ಆಸಕ್ತಿದಾಯಕ. ಕ್ಲೈಮ್ಯಾಕ್ಸ್ ಅದ್ಭುತ. ವಿಲನ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟನೆ ನೋಟಲೇಬೇಕು ಎಂದು ಇನ್ನೊಬ್ಬರು ಎಕ್ಸ್‌ನಲ್ಲಿ ರಿವ್ಯೂ ಬರೆದಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿ ನಟನೆಯನ್ನು ಮೆಚ್ಚಿ ಸಾಕಷ್ಟು ಜನರು ರಿವ್ಯೂ ಬರೆದಿದ್ದಾರೆ.
ಟರ್ಬೊ ಸಿನಿಮಾದ ಬಗ್ಗೆ
ಮಮ್ಮುಟ್ಟಿ ಒಡೆತನದ 'ಮಮ್ಮುಟ್ಟಿ ಕಂಪನಿ' ನಿರ್ಮಿಸಿದ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ನಟಿಸಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ' ಲೈಟರ್ ಬುದ್ಧ ಫಿಲಂಸ್' ಹಂಚಿಕೆ ಮಾಡಿದೆ. ಮೇ 23ರಂದು ಚಿತ್ರಮಂದಿರಗಳಲ್ಲಿ ಟರ್ಬೊ ಸಿನಿಮಾ ಬಿಡುಗಡೆಯಾಗಿದೆ. ಈ ವಾರ ಚಿತ್ರಮಂದಿರಗಳಲ್ಲಿ ಆಸಕ್ತರು ವೀಕ್ಷಿಸಬಹುದು. ಇದೇ ಸಮಯದಲ್ಲಿ ಕನ್ನಡದ ದಿ ಜಡ್ಜ್ ಮೆಂಟ್ ಎಂಬ ಸಿನಿಮಾವೂ ಈ ವಾರ ರಿಲೀಸ್ ಆಗುತ್ತಿದೆ.