The Goat Life: ಆಡುಜೀವಿತಂ ಸಿನಿಮಾದಲ್ಲಿ ತನ್ನ ನಿಜ ಕಥೆ ನೋಡಿ ಕಣ್ಣೀರಿಟ್ಟ ರಿಯಲ್ ನಜೀಬ್; ಪೃಥ್ವಿರಾಜ್ ಸುಕುಮಾರನ್ ನಟನೆಗೆ ಮೆಚ್ಚುಗೆ
Mar 29, 2024 08:08 PM IST
ಆಡುಜೀವಿತಂ ಸಿನಿಮಾ ನೋಡಿದ ರಿಯಲ್ ನಜೀಬ್
- The Goat Life Movie: ಪೃಥ್ವಿರಾಜ್ ಸುಕುಮಾರನ್ ನಟನೆಯ ದಿ ಗೋಟ್ ಲೈಫ್ ಸಿನಿಮಾವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದ ಕಥೆಗೆ ಸ್ಪೂರ್ತಿಯಾಗಿರುವ ವ್ಯಕ್ತಿ ನಜೀಬ್ ಈಗಲೂ ಜೀವಂತವಾಗಿದ್ದಾರೆ. ಇವರು ಈ ಸಿನಿಮಾವನ್ನು ವೀಕ್ಷಿಸಿ ಕಣ್ಣೀರಿಟ್ಟಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ- ದಿ ಗೋಟ್ ಲೈಪ್ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ ಕೇಳಿಬರುತ್ತಿದೆ. ಈ ಸಿನಿಮಾವು ಕೇರಳದ ನಜೀಮ್ ಮಹಮ್ಮದ್ ಎಂಬ ವ್ಯಕ್ತಿಯ ಬದುಕಿನಲ್ಲಿ ನಡೆದ ಸತ್ಯ ಕಥೆ ಆಧರಿತವಾದದ್ದು. ಗಲ್ಫ್‌ಗೆ ಕೆಲಸ ಹೋದ ನಜೀಬ್ ಅಲ್ಲಿ ಮರುಭೂಮಿಯಲ್ಲಿ ಜೀತದಾಳುವಂತೆ ಸಿಲುಕಿ ಅಲ್ಲಿಂದ ಪಾರಾಗಿ ಬರಲು ಕಷ್ಟಪಟ್ಟ ಕಥೆಯಾಗಿದೆ. ಈ ಕಥೆ ಕಾದಂಬರಿಯಾಗಿಯೂ ಜನಪ್ರಿಯತೆ ಪಡೆದಿದೆ. ಈ ಕಾದಂಬರಿಯಿಂದ ಪ್ರೇರಣೆ ಪಡೆದು ಆಡುಜೀವಿತಂ ಸಿನಿಮಾ ಮಾಡಲಾಗಿದೆ. ಇದೀಗ ಈ ಸಿನಿಮಾದ ನಿಜವಾದ ಕಥಾನಾಯಕ ನಜೀಬ್ ಆಡುಜೀವಿತಂ ಸಿನಿಮಾವನ್ನು ವೀಕ್ಷಿಸಿದ್ದಾರೆ. ಟೈಮ್ಸ್ ನೌ ವರದಿ ಪ್ರಕಾರ ನಜೀಬ್ ಅವರು ಈ ಸಿನಿಮಾವನ್ನು ವೀಕ್ಷಿಸಿ ಅತೀವ ಭಾವನಾತ್ಮಕ ಅನುಭವಕ್ಕೆ ಒಳಗಾಗಿದ್ದಾರೆ. ಜತೆಗೆ ದಿ ಗೋಟ್ ಲೈಫ್ ಸಿನಿಮಾ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಆಡುಜೀವಿತಂ ಸಿನಿಮಾ ನೋಡಿದ ರಿಯಲ್ ನಜೀಬ್
"ನಾನು ಬಹುತೇಕ ದೃಶ್ಯಗಳನ್ನು ಕಣ್ಣೀರಲ್ಲೇ ನೋಡಿದೆ. ನಿಜಕ್ಕೂ ನನಗೆ ಈ ಸಿನಿಮಾ ನೋಡುವಾಗ ತುಂಬಾ ನೋವಾಯಿತು. ನನಗೆ ಸಾಕಷ್ಟು ಜನರು ಸಂದೇಶ ಕಳುಹಿಸಿದ್ದಾರೆ. ನಾವು ಈ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿದ್ದೇವೆ ಎಂದು ಸಂದೇಶ ಕಳುಹಿಸುತ್ತಿದ್ದಾರೆ. ಈ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. ನನ್ನ ಮೊಮ್ಮಗ ಕಳೆದ ವಾರ ಮೃತಪಟ್ಟ. ಕುಟುಂಬದ ಈ ತುರ್ತು ಪರಿಸ್ಥಿಯಲ್ಲೂ ಈ ಸಿನಿಮಾ ನೋಡುವಂತೆ ನನಗೆ ಎಲ್ಲರೂ ಹೇಳಿದರು. ಇಲ್ಲವಾದರೆ ನಾನು ಈ ಸಿನಿಮಾ ನೋಡುತ್ತ ಇರಲಿಲ್ಲ. ಈ ಸಿನಿಮಾ ಯಶಸ್ಸು ಪಡೆಯಲಿ. ಎಲ್ಲರೂ ಈ ಸಿನಿಮಾ ನೋಡಲಿ" ಎಂದು ನಜೀಬ್ ಹೇಳಿದ್ದಾರೆ.
"ಆಡುಜೀವಿತಂ ಸಿನಿಮಾದಲ್ಲಿ ಪೃಥ್ವಿರಾಜ್ ಅದ್ಭುತವಾಗಿ ನಟಿಸಿದ್ದಾರೆ. ಆತ ತುಂಬಾ ಅದ್ಭುತವಾಗಿ ನಟಿಸಿದ್ದಾನೆ. ನಾನು ಬಹುತೇಕ ದೃಶ್ಯಗಳಲ್ಲಿ ಅತ್ತುಬಿಟ್ಟೆ. ಕೆಲವೊಂದು ದೃಶ್ಯಗಳನ್ನು ನನಗೆ ನೋಡಲಾಗಲಿಲ್ಲ. ಅಷ್ಟೊಂದು ಅಳು ಬರುತ್ತಿತ್ತು. ಕೆಲವೊಂದು ದೃಶ್ಯಗಳನ್ನು ನೋಡುವ ಧೈರ್ಯವಾಗಲಿಲ್ಲ" ಎಂದು ನಜೀಬ್ ಹೇಳಿದ್ದಾರೆ.
ಆಡುಜೀವಿತಂ ಸಿನಿಮಾವು ಕೇರಳದ ನಜೀಬ್ ಎಂಬ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. 1990ರ ದಶಕದಲ್ಲಿ ಉದ್ಯೋಗಕ್ಕಾಗಿ ನಜೀಬ್ ಗಲ್ಫ್ ದೇಶಕ್ಕೆ ಹೋಗಿರುತ್ತಾನೆ. ಆದರೆ, ಆತನನ್ನು ಮರುಭೂಮಿಯಲ್ಲಿ ಆಡು ಮೇಯಿಸುವ ಕೆಲಸಕ್ಕೆ ಹಾಕಲಾಗುತ್ತದೆ. ಹೊರಜಗತ್ತಿನ ಪರಿಚಯ ಇಲ್ಲದಂತೆ ಗುಲಾಮನಂತೆ ಆತನನ್ನು ಇಡಲಾಗುತ್ತದೆ. ಆತನಿಗೆ ಸ್ವಲ್ಪ ಆಹಾರ ಮಾತ್ರ ನೀಡಲಾಗುತ್ತಿತ್ತು. ನೀರು ನೀಡುತ್ತಿರಲಿಲ್ಲ. ಅಂತಹ ಕ್ರೂರ ಬದುಕಿನಿಂದ ಪಾರಾಗಿ ತನ್ನ ಮನೆಗೆ ಹಿಂತುರುಗಬೇಕೆಂದು ನಜೀಬ್ ಬಯಸುತ್ತಾನೆ. ಆತನ ಆ ಬದುಕಿನ ಕಥೆಯೇ ಸಿನಿಮಾವಾಗಿದೆ. ಅಷ್ಟೊಂದು ಕಷ್ಟಪಟ್ಟ ಆ ನಜೀಬ್ ಇದೀಗ ತನ್ನದೇ ಬದುಕಿನ ಕಥೆಯನ್ನು ಸಿನಿಮಾ ರೂಪದಲ್ಲಿ ನೋಡಿ ಕಣ್ಣೀರಿಟಿದ್ದಾರೆ. ಈ ಸಿನಿಮಾವು ಬೆನ್ನಿಮಿನ್ ಬರೆದ ಗೋಟ್ ಡೇಸ್ ಎಂಬ ಕಾದಂಬರಿ ಆಧರಿತವಾಗಿದೆ. ಈ ಕಾದಂಬರಿಯು ಇದೇ ನಜೀಬ್ ಅವರ ಬದುಕಿನಲ್ಲಿ ನಡೆದ ಘಟನೆಯನ್ನು ಆಧರಿಸಿ ಬರೆಯಲಾಗಿದೆ. ಆದಿಜೀವಿತಂ ಸಿನಿಮಾ ಕೆಲಸ 2009ರಲ್ಲಿಯೇ ಆರಂಭವಾಗಿತ್ತು.
ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಿ ಗೋಟ್ ಲೈಫ್ ಸಿನಿಮಾವು ಮೊದಲ ದಿನ 7.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕುರಿತು ಹೀಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ವಿಮರ್ಶಶೆ ಬರೆಯಲಾಗಿದೆ. "ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ನಜೀಬ್ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದ ನಜೀಬ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಿನಿಮಾಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದಾರೆ. ನಜೀಬ್ ಬದುಕಿನ ಕಥೆಯನ್ನು ಅದೇ ರೀತಿ ತರಲು ನಿರ್ದೇಶಕ ಬ್ಲೆಸ್ಸಿ ಪ್ರಯತ್ನಿಸಿದ್ದಾರೆ. ಇವರು ಅತ್ಯಂತ ಕಠಿಣವಾದ ಕಥೆಯನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರನ್ನು ಅಭಿನಂದಿಸಲೇಬೇಕು. ಅವರಿಗೆ ನಜೀಬ್‌ನ ಕಥೆಯನ್ನು ಹೇಳುವ ಆತುರವಿಲ್ಲ. ನಜೀಬ್ ಈ ಹೊಸ ಜಗತ್ತಿನಲ್ಲಿ ಹೇಗೆ ಬದಲಾಗುತ್ತಾನೆ, ಹೇಗೆ ಹೊಂದಿಕೊಳ್ಳುತ್ತಾನೆ ಎನ್ನುವು ಪ್ರತಿಹಂತವನ್ನೂ ನೀವು ತೆರೆಯಮೇಲೆ ನೋಡುವಿರಿ". ಆಡುಜೀವಿತಂ ಸಿನಿಮಾದ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.