ಎಚ್‌ಟಿ ಸಂದರ್ಶನ: ಗೋಟ್ ಲೈಫ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ಯಾಕೆ? ಜಿಮ್ಮಿ ಜೀನ್ ಲೂಯಿಸ್ ಅವರ ಆಡುಜೀವಿತಂ ಅನುಭವ ಹೀಗಿತ್ತು ನೋಡಿ
Mar 27, 2024 06:52 PM IST
ಗೋಟ್ ಲೈಫ್ ಸಿನಿಮಾದಲ್ಲಿ ಜಿಮ್ಮಿ ಜೀನ್ ಲೂಯಿಸ್
- Goat Life's Jimmy Jean-Louis: ಈ ವಾರ ಗೋಟ್ ಲೈಫ್ / ಆಡುಜೀವಿತಂ ಹೆಸರಿನ ಬಹುನಿರೀಕ್ಷಿತ ಮಲಯಾಳಂ ಸಿನಿಮಾ ಬಿಡುಗಡೆಯಾಗಲಿದೆ. ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಲು ಮಲಯಾಳಂ ಪ್ರಾಜೆಕ್ಟನ್ನು ಜಿಮ್ಮಿ ಜೀನ್-ಲೂಯಿಸ್ ಏಕೆ ಆಯ್ಕೆ ಮಾಡಿಕೊಂಡರು? ಜಿಮ್ಮಿ ಅವರು ಆಡುಜೀವಿತಂ ಅನುಭವವನ್ನು ಹಿಂದೂಸ್ತಾನ್ ಟೈಮ್ಸ್ ಜತೆ ಹಂಚಿಕೊಂಡಿದ್ದಾರೆ.
ಕ್ಯಾರಿಬಿಯನ್ ದೇಶವಾದ ಹೈಟಿಯ ನಟ ಜಿಮ್ಮಿ ಜೀನ್ ಲೂಯಿಸ್ ಇದೇ ಮೊದಲ ಬಾರಿಗೆ ಭಾರತದ ಚಿತ್ರರಂಗಕ್ಕೆ ಮಲಯಾಳಂ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಇವರು ಮಲಯಾಳಂ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ವಾಸವಾಗಿರುವ ಈ ನಟ ಪೃಥ್ವಿರಾಜ್ ಸುಕುಮಾರನ್ ಜತೆ ಈ ಚಿತ್ರದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಗೋಟ್ ಲೈಫ್ ಅಥವಾ ಆಡುಜೀವಿತಂ ಸಿನಿಮಾದಲ್ಲಿ ಜಿಮ್ಮಿ ಜೀನ್ ಲೂಯಿಸ್ ಅವರು ಸೌದಿ ಅರೇಬಿಯಾದಲ್ಲಿ ಪ್ರಯಾಣಿಸುವ ಮಲಯಾಳಿ ವಲಸೆ ಕಾರ್ಮಿಕ ನಜೀಬ್‌ಗೆ ಸಹಾಯ ಮಾಡುವ ಸ್ಥಳೀಯ ಇಬ್ರಾಹಿಂ ಖಾದಿರಿ ಪಾತ್ರದಲ್ಲಿ ನಟಿಸಿದ್ದಾರೆ.
ಹೈಟಿ ನಟ ಜಿಮ್ಮಿ ಜೀನ್ ಲೂಯಿಸ್ ಅವರು ಹಿಂದೂಸ್ತಾನ್ ಟೈಮ್ಸ್ ಜತೆಗೆ ಮಾತನಾಡಿದ್ದಾರೆ. ನಿರ್ದೇಶಕ ಬ್ಲೆಸ್ಸಿ ಅವರ ದಿ ಗೋಟ್ ಲೈಫ್ ಸಿನಿಮಾವನ್ನು ಜಿಮ್ಮಿ ಏಕೆ ಆಯ್ಕೆ ಮಾಡಿಕೊಂಡರು? ಪೃಥ್ವಿರಾಜ್ ಸುಕುಮಾರನ್ ಜತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು? ಶೂಟಿಂಗ್ ಸಮಯದಲ್ಲಿ ಅವರು ಅನುಭವಿಸಿದ ಸವಾಲುಗಳೇನು? ಇತ್ಯಾದಿ ವಿವರವನ್ನು ನೀಡಿದ್ದಾರೆ.
ಪ್ರಶ್ನೆ: ಭಾರತೀಯ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಮಲಯಾಳಂ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಭಾರತೀಯ ಸಿನಿಮಾವು ಬಾಲಿವುಡ್‌ಗಿಂತಲೂ ಹೆಚ್ಚಿನದ್ದು ಎಂದು ನಿಮಗೆ ತಿಳಿದಿರುವುದೇ?
ಉತ್ತರ: ನನಗೆ ಪ್ರತಿಯೊಂದು ಭಾರತೀಯ ಚಲನಚಿತ್ರವೂ ಬಾಲಿವುಡ್ ಚಲನಚಿತ್ರ. ಈ ಪ್ರಾಜೆಕ್ಟ್ ಕುರಿತು ನನ್ನ ಬಳಿಗೆ ಮಾತನಾಡಲು ಬಂದಾಗ ನನಗೆ ಇದು ಯಾವ ಚಿತ್ರರಂಗ ಎಂದು ತಿಳಿದಿರಲಿಲ್ಲ. ನನ್ನಲ್ಲಿ ಕೆಲವು ಪ್ರಶ್ನೆಗಳು ಇದ್ದವು. ನನಗೆ ಸ್ಕ್ರಿಪ್ಟ್ ಕಳುಹಿಸಲಾಯಿತು. ಈ ಚಿತ್ರದ ಹಿಂದೆ ಯಾರಿದ್ದಾರೆ ಎಂದು ಸ್ವಲ್ಪ ರಿಸರ್ಚ್ ಮಾಡಿದೆ. ಈ ನಟ ಅವರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶದಲ್ಲೂ ಪ್ರಮುಖ ನಟ ಎನ್ನುವ ಅಂಶ ತಿಳಿಯಿತು. ಇದಾದ ಬಳಿಕ ನನಗೆ ನಜೀಬ್ ಅವರ ಕಥೆ ಆಶ್ವರ್ಯವುಂಟು ಮಾಡಿತು. ಸಿನಿಮಾದ ಕಥೆಯಲ್ಲಿರುವ ಆ ವ್ಯಕ್ತಿ ಇನ್ನೂ ಬದುಕಿದ್ದಾರೆ ಎಂದು ತಿಳಿದು ಆಶ್ಚರ್ಯವಾಯಿತು. ಈ ಅಂಶ ನನಗೆ ಗಮನ ಸೆಳೆಯಿತು. ಜತೆಗೆ ಜೋರಾರ್ನ್ ಮತ್ತು ಸಹರಾ ಮರುಭೂಮಿಯಲ್ಲಿ ಶೂಟಿಂಗ್ ಇದೆ ಎಂದು ತಿಳಿಯಿತು. ಇದು ನನಗೆ ಇಷ್ಟವಾದ ಅಂಶವಾಗಿತ್ತು. ನಿರ್ದೇಶಕ ಬ್ಲೆಸ್ಸಿ ಅಥವಾ ಪೃಥ್ವಿರಾಜ್‌ರಂತೆ ಈ ಚಿತ್ರದಲ್ಲಿ ನನ್ನ ಪ್ರಯಾಣ ಸುದೀರ್ಘವಲ್ಲ. ಕೆಲವು ತಿಂಗಳಷ್ಟೇ ಇತ್ತು. ಆದರೆ, ಇದು ಅದ್ಭುತ ಅನುಭವ.
ಪ್ರಶ್ನೆ: ಈ ಸಿನಿಮಾದ ಪಾತ್ರ ಮತ್ತು ಚಿತ್ರದ ಸಬ್ಜೆಕ್ಟ್ ವಿಷಯದಲ್ಲಿ ನಿಮಗೆ ಹೆಚ್ಚು ಸವಾಲು ಉಂಟುಮಾಡಿದ ಸಂಗತಿ ಯಾವುದು?
ಉತ್ತರ: ಈ ಕುರಿತೇ ತುಂಬಾ ಮಾತನಾಡಬಹುದು. ಏಕೆಂದರೆ ಇದು ಭಿನ್ನ ಸಂಸ್ಕೃತಿ (ಭಾರತೀಯ ಸಿನಿಮಾ) ಮತ್ತು ಈ ಸಿನಿಮಾದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿರಲಿಲ್ಲ. ಹೆಚ್ಚಿನ ಸಮಯದಲ್ಲಿ ಸ್ಪಷ್ಟತೆ ಇರಲಿಲ್ಲ. ಇದೇ ರೀತಿ ಇಂದು, ನಾಳೆ, ಮುಂದಿನ ವಾರ ಏನಾಗಲಿದೆ ಎಂದೂ ಗೊತ್ತಿರಲಿಲ್ಲ. ಇದು ಸವಾಲಿನ ಶೂಟಿಂಗ್ ಆಗಿತ್ತು. ಇದೇ ಸಮಯದಲ್ಲಿ ಸಿನಿಮಾ ತಯಾರಿಸುವ ಬಿಸಿನೆಸ್ ಮತ್ತು ನನ್ನನ್ನು ಹೇಗೆ ದೂರದಲ್ಲಿಟ್ಟುಕೊಳ್ಳಬೇಕೆಂದು ನನಗೆ ತಿಳಿದಿತ್ತು. ನಾವು ಸಾಕಷ್ಟು ಸವಾಲು ಎದುರಿಸಿದ್ದೇವೆ. ಮರಳು ಬಿರುಗಾಳಿ ಕೂಡ ಎದುರಾಗಿದೆ. ಅಂತಹ ಸಮಯದಲ್ಲಿ ಚಿತ್ರೀಕರಣ ಸುಲಭವಾಗಿರಲಿಲ್ಲ. ದೈಹಿಕವಾಗಿ ಈ ಸಿನಿಮಾದಲ್ಲಿ ನಾನು ಪೃಥ್ವಿರಾಜ್ ಅವರನ್ನು ಎತ್ತಿಕೊಂಡು ಹೋಗಬೇಕಿತ್ತು. ಬೇರೆ ಕಡೆಗಳಲ್ಲಿ ಇದು ಕಷ್ಟವಲ್ಲ. ಆದರೆ, ಆ ವಾತಾವರಣದಲ್ಲಿ ಅದು ಸ್ವಲ್ಪ ಕಠಿಣ. ನಾನು ಅರೇಬಿಕ್ ಮಾತನಾಡಲು ಕಲಿಯಬೇಕಿತ್ತು.
ಪ್ರಶ್ನೆ: ನೀವು ಹಲವು ಅಂತಾರಾಷ್ಟ್ರೀಯ ನಟರೊಂದಿಗೆ ಕೆಲಸ ಮಾಡಿದ್ದೀರಿ. ನಟರಾಗಿ ಪೃಥ್ವಿರಾಜ್ ಸುಕುಮಾರನ್ ಬಗ್ಗೆ ನಿಮ್ಮ ಅಭಿಪ್ರಾಯೇನು?
ಉತ್ತರ: ನಾನು ಹಲವು ಮಾರುಕಟ್ಟೆಗಳಲ್ಲಿ (ಫ್ರಾನ್ಸ್, ಅಮೆರಿಕ) ಎಲ್ಲಾ ರೀತಿಯ ನಟರ ಜತೆ ಕೆಲಸ ಮಾಡಿರುವುದು ನಿಮಗೆ ತಿಳಿದಿದೆ. ಈ ಸಮಯದಲ್ಲಿ ನಾನು ಒಬ್ಬ ನಟನನ್ನು ನಟನಾಗಿಯೇ ನೋಡುವೆ. ಅವರು ಹೇಗೆ ನಟಿಸ್ತಾರೆ ಎನ್ನುವುದನ್ನು ನೋಡುವೆ. ಸುತ್ತಲಿನ ಗದ್ದಲದ ಕುರಿತು ನನಗೆ ಗಮನ ಇರುವುದಿಲ್ಲ. ಅವರ ವೃತ್ತಿಪರತೆ, ಬದ್ಧತೆಯ ಕುರಿತು ಖಂಡಿತಾವಾಗಿಯೂ ನಾನು ಪ್ರಭಾವಿತನಾಗಿದ್ದೇನೆ. ಈ ಸಿನಿಮಾದ ಪಾತ್ರಕ್ಕಾಗಿ ಅವರು 31 ಕೆಜಿ. ತೂಕ ಕಳೆದುಕೊಂಡಿದ್ದಾರೆ. ನಟರಾಗಿ ಈಗಾಗಲೇ ಟಾಪ್‌ನಲ್ಲಿರುವ ಪೃಥ್ವಿರಾಜ್ ಇದನ್ನು ಮಾಡಬೇಕಿರಲಿಲ್ಲ. ಆದರೆ, ಆತನೊಳಗಿನ ನಟ ಇದನ್ನು ಮಾಡಲು ಒಪ್ಪಿದ್ದಾನೆ. ಇದು ನಿಜಕ್ಕೂ ಗ್ರೇಟ್. ಮರುಭೂಮಿಯ ಕೆಟ್ಟ ಪರಿಸ್ಥಿತಿಗಳಲ್ಲಿ ಶೂಟಿಂಗ್ ನಡೆದಾಗಲೂ ಪ್ರಶಿದ್ಧ ನಟನ ಜತೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿದಿದ್ದೇನೆ. ಭಾರತದಲ್ಲಿ ಸ್ಪರ್ಧೆ ಹೆಚ್ಚಿದೆ. ನನಗೆ ಪೃಥ್ವಿರಾಜ್ ಸುಕುಮಾರನ್ ಅವರಲ್ಲಿ ಹ್ಯಾರಿಸನ್ ಫೋರ್ಡ್ ಅಥವಾ ಬ್ರಾಡ್ಲಿ ಕೋಪರ್ ಅವರನ್ನು ಕಂಡೆ.
ಪ್ರಶ್ನೆ: ದಿ ಗೋಟ್ ಲೈಫ್ ಸಿನಿಮಾ ಫ್ರೆಂಚ್ ಭಾಷೆಗೂ ಡಬ್ ಆಗಬೇಕು, ಅಲ್ಲೂ ಬಿಡುಗಡೆಯಾಗಬೇಕೆಂದು ನೀವು ಬಯಸುವಿರಾ?
ಉತ್ತರ: ಇದನ್ನು ಎಲ್ಲಾ ಭಾಷೆಗಳಲ್ಲಿಯೂ ಡಬ್ ಮಾಡಬೇಕು ಅಥವಾ ಸಬ್ ಟೈಟಲ್ ನೀಡಬೇಕು ಎಂದು ನಾನು ಭಾವಿಸುವೆ. ಏಕೆಂದರೆ, ಇದು ಎಲ್ಲರೊಂದಿಗೆ ಮಾತನಾಡುವ ಸಿನಿಮಾ. ನೀವು ಮನುಷ್ಯರಾಗಿದ್ದರೆ ಈ ಸಿನಿಮಾವನ್ನು ಇಷ್ಟಪಡುವಿರಿ. ಕೆಲವೊಮ್ಮೆ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಭಾಷೆಯ ಅಗತ್ಯವಿಲ್ಲ. ಅಂತಹ ಭಾವನಾತ್ಮಕ ಸಂಪರ್ಕ ಈ ಸಿನಿಮಾದಲ್ಲಿ ದೊರಕುತ್ತದೆ. ಈ ಚಿತ್ರತಂಡಕ್ಕೆ ಇರುವ ವಿತರಣೆಯ ಬಲದ ನೆರವಿನಿಂದ ಸಾಧ್ಯವಿರುವಷ್ಟು ಹೆಚ್ಚಿನ ಭಾಷೆಗಳಿಗೆ, ಮಾರುಕಟ್ಟೆಗೆ ತಲುಪಿಸಬೇಕು ಎನ್ನುವುದು ನನ್ನ ಅಭಿಪ್ರಾಯ.
ಸಂದರ್ಶನ: ಲತಾ ಶ್ರೀನಿವಾಸನ್, ಹಿಂದೂಸ್ತಾನ್ ಟೈಮ್ಸ್