Dasara: ಅಕ್ಟೋಬರ್ 16ರಿಂದ ಮೈಸೂರು ದಸರಾ ಸಿನಿಮೋತ್ಸವ- 7 ದಿನ 112 ಸಿನಿಮಾ, ಫಿಲ್ಮ್ ಫೆಸ್ಟಿವಲ್ ಟಿಕೆಟ್ ಬೇಕೇ, ಇಲ್ಲಿದೆ ವಿವರ
Oct 15, 2023 09:59 AM IST
ಮೈಸೂರು ದಸರಾ ಸಿನಿಮೋತ್ಸವ
- Mysuru Dasara Film Festival 2023 Updates: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 16ರಿಂದ 22ರವರೆಗೆ 7 ದಿನ 112 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ರಿಷಬ್ ಶೆಟ್ಟಿಯ ಕಾಂತಾರ, ದಿ. ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ಮಾತ್ರವಲ್ಲದೆ ಪಥೇರ್ ಪಾಂಚಾಲಿ, ಆದಿವಾಸಿ ಸೇರಿದಂತೆ ಹಲವು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಮೈಸೂರು: ಇಂದಿನಿಂದ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬ ಆರಂಭವಾಗಲಿದೆ. ನಾಡಬ್ರಹ್ಮ ಹಂಸಲೇಖ ಅವರಿಂದ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ದಸರಾ ಸಂಭ್ರಮದ ಸಮಯದಲ್ಲಿ ಈ ಬಾರಿ ಸಿನಿಪ್ರಿಯರಿಗೆ 112 ಸಿನಿಮಾಗಳು ಕಾಯುತ್ತಿವೆ. ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್ ನಾಳೆಯಿಂದ ಏಳು ದಿನಗಳ ಕಾಲ ನಡೆಯಲಿದೆ. ಮೈಸೂರಿನ ಐನಾಕ್ಸ್ ಮತ್ತು ಡಿಆರ್‌ಸಿ ಸಿನಿಮಾ ಮಂದಿರಗಳಲ್ಲಿ ದಸರಾ ಸಿನಿಮೋತ್ಸವ ನಡೆಯಲಿದೆ. ಆನ್‌ಲೈನ್‌ನಲ್ಲಿ ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್‌ಗೆ ಟಿಕೆಟ್ ಬುಕ್ ಮಾಡಬಹುದು.
ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್ ಪಾಸ್ ದರ ಎಷ್ಟು?
ಮೈಸೂರು ದಸರಾ ಸಿನಿಮೋತ್ಸವದಲ್ಲಿ 500 ರೂಪಾಯಿ ನೀಡಿ ಸಾರ್ವಜನಿಕರು ಸಿನಿಮಾ ಟಿಕೆಟ್ (ಪಾಸ್) ಬುಕ್ಕಿಂಗ್ ಮಾಡಬಹುದು. ವಿದ್ಯಾರ್ಥಿಗಳು 300 ರೂಪಾಯಿಗೆ ಸಿನಿಮಾ ಪಾಸ್ ಪಡೆಯಬಹುದು. ಕೇವಲ ಇಷ್ಟು ಹಣ ನೀಡಿದರೆ ಈ ಎಲ್ಲಾ ಸಿನಿಮಾಗಳನ್ನು ನೋಡಲು ಅವಕಾಶವಿದೆ. ಏಳು ದಿನಗಳಲ್ಲಿ ಸಮಯ ನಿಗದಿಪಡಿಸಿಕೊಂಡು 112 ಸಿನಿಮಾಗಳಲ್ಲಿ ನಿಮ್ಮ ಸಮಯಕ್ಕೆ ಅನುಗುಣವಾಗಿ ನಿಮಗೆ ಇಷ್ಟವಾದ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನೋಡಬಹುದು. ಒಟ್ಟು ನಾಲ್ಕು ಪರದೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಹೊಸ ಸಿನಿಮಾಗಳು, ಹಳೆ ಸಿನಿಮಾಗಳು, ಮಕ್ಕಳ ಸಿನಿಮಾಗಳು ಸೇರಿದಂತೆ ವೈವಿಧ್ಯಮಯ ಸಿನಿಮಾ ವೀಕ್ಷಣೆಗೆ ಇದು ಉತ್ತಮ ಅವಕಾಶವಾಗಿರುತ್ತದೆ.
ಮೈಸೂರು ಫಿಲ್ಮ್ ಫೆಸ್ಟಿವಲ್ ಟಿಕೆಟ್ ಬುಕ್ಕಿಂಗ್ ಹೇಗೆ?
ಮೈಸೂರು ದಸರಾ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವವರು ಆನ್‌ಲೈನ್ ಮೂಲಕ ಮಾತ್ರ ಪಾಸ್ ಅಥವಾ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಆಸಕ್ತರು mysurudasarafilmfestival.in ವೆಬ್‌ಸೈಟ್‌ಗೆ ಹೋಗಿ ನಿಗದಿತ ಮೊತ್ತ ಪಾವತಿಸಿ ಪಾಸ್ ಪಡೆಯಬಹುದು. ಒಂದು 300/500 ರೂಪಾಯಿ ಪಾಸ್‌ನಲ್ಲಿ ಏಳು ದಿನ ಎಷ್ಟು ಸಾಧ್ಯವೋ ಅಷ್ಟು ಸಿನಿಮಾಗಳನ್ನು ನೋಡಬಹುದಾಗಿದೆ.
ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್ ವೆಬ್‌ಸೈಟ್‌ನಲ್ಲಿ ಹೆಸರು ನಮೂದಿಸಿ ಪ್ರೊಫೈಲ್ ಫೋಟೋ ಲಗ್ಗತ್ತಿಸಬೇಕು. ಆಧಾರ್ ಕಾರ್ಡ್ ಅಥವಾ ಸ್ಟುಡೆಂಟ್ ಐಡಿ ಅಪ್ಲೋಡ್ ಮಾಡಬೇಕು. ಐಡಿ ಸಂಖ್ಯೆ ಬರೆಯಬೇಕು. ಪಾಸ್ ಇನ್ಫೋ ವಿಭಾಗದಲ್ಲಿ ಸ್ಟುಡೆಂಟ್ ಅಥವಾ ಅದರ್ ಆಯ್ಕೆಯಲ್ಲಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಬೇಕು. ವಯಸ್ಸು ಫೋನ್ ನಂಬರ್ ಇತ್ಯಾದಿ ಮಾಹಿತಿ ನಮೂದಿಸಬೇಕು.
ಮೈಸೂರು ದಸರಾ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳು
ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿರುವ ಮತ್ತು ಸಾಮಾಜಿಕ ಸಂದೇಶವಿರುವ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಇತ್ತೀಚೆಗೆ ಬಿಡುಗಡೆಯಾದ ಹಲವು ಕನ್ನಡ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ. ಕಾಂತಾರ, ಗಂಧದ ಗುಡಿ, ಸಪ್ತ ಸಾಗರಾದಾಚೆ ಎಲ್ಲೋ, ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ, ಆಚಾರ್ ಆಂಡ್ ಕೋ, ಡೇರ್ ಡೇವಿಲ್ ಮುಸ್ತಫಾ, ಟೋಬಿ, ಶಿವಾಜಿ ಸುರತ್ಕಲ್ ಮುಂತಾದ ಹಲವು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಹಳೆಯ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ. ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಕೂಡ ನೋಡಬಹುದು. ಸಂಸ್ಕಾರ, ನಾನು ಕುಸುಮಾ, ಕೊರಮ್ಮ (ತುಳು), ಆದಿವಾಸಿ, ಋತುಮತಿ, ದಿ ಗಾರ್ಡ್ ಮುಂತಾದ ಸಿನಿಮಾಗಳನ್ನೂ ನೋಡಬಹುದು. ಮಕ್ಕಳ ಚಿತ್ರಗಳೂ ಇರಲಿವೆ. ಹಾಲಿವುಡ್ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.