Dasara Controversy: ಅಂಗನವಾಡಿ ಕಾರ್ಯಕರ್ತೆಯರ ಕೆಂಗಣ್ಣಿಗೆ ಗುರಿಯಾದ 'ದಸರಾ' ಸಿನಿಮಾ.. ಅಂತದ್ದೇನಿದೆ ಚಿತ್ರದಲ್ಲಿ?
Apr 03, 2023 09:54 AM IST
ವಿವಾದಲ್ಲಿ 'ದಸರಾ' ಸಿನಿಮಾ
- ಈ ದೃಶ್ಯಗಳ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಈ ದೃಶ್ಯಗಳನ್ನು ಡಿಲೀಟ್ ಮಾಡಬೇಕು. ಇಂತಹ ದೃಶ್ಯಗಳ ಮೂಲಕ ಚಿತ್ರದಲ್ಲಿ ನಮಗೆ ಅವಮಾನ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ಧಾರೆ.
ಮಾರ್ಚ್ 30 ರಂದು ತೆರೆ ಕಂಡ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದಸರಾ' ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಇದು ನಾನಿ ವೃತ್ತಿ ಬದುಕಿನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಬಹುದಾದ ಸಿನಿಮಾ ಎಂದು ಚಿತ್ರ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ದಸರಾ, ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗಿದೆ. ನಾನಿ, ಹಿಂದೆಂದೂ ಕಾಣದ ಅವತಾರದಲ್ಲಿ ಈ ಚಿತ್ರದಲ್ಲಿ ಸಿನಿಪ್ರಿಯರಿಗೆ ದರ್ಶನ ನೀಡಿದ್ದಾರೆ. ಚಿರಂಜೀವಿ ಸಿನಿಮಾಗಳು 2 ದಿನಗಳಲ್ಲಿ ಗಳಿಸಿದ ದಾಖಲೆಯನ್ನೂ ಹಿಂದಿಕ್ಕಿ 'ದಸರಾ' ನಾಗಲೋಟದಲ್ಲಿ ಸಾಗುತ್ತಿದೆ. ಈ ನಡುವೆ ಚಿತ್ರದ ದೃಶ್ಯವೊಂದು ವಿವಾದಕ್ಕೆ ಸಿಲುಕಿದೆ. ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಂಗನವಾಡಿ ಕಾರ್ಯಕರ್ತೆಯರು ಕೀರ್ತಿ ಸುರೇಶ್ ಅಭಿನಯದ ದೃಶ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ದಸರಾ' ಚಿತ್ರದಲ್ಲಿ ಕೀರ್ತಿ ಸುರೇಶ್, ವೆನ್ನಿಲ ಎಂಬ ಅಂಗನವಾಡಿ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ವೆನ್ನಿಲ ಅಂಗನವಾಡಿ ಮಕ್ಕಳಿಗಾಗಿ ಸರ್ಕಾರ ನೀಡುವ ಮೊಟ್ಟೆಗಳನ್ನು ಕದ್ದು ಬೇರೆಯವರಿಗೆ ಮಾರಿ ಹಣ ಗಳಿಸುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಅದೇ ಮೊಟ್ಟೆಗಳನ್ನು ಕದ್ದು ತಂದು ತಮ್ಮ ಮನೆಯವರಿಗೆ ನೀಡುತ್ತಾಳೆ. ಈ ದೃಶ್ಯಗಳ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಈ ದೃಶ್ಯಗಳನ್ನು ಡಿಲೀಟ್ ಮಾಡಬೇಕು. ಇಂತಹ ದೃಶ್ಯಗಳ ಮೂಲಕ ಚಿತ್ರದಲ್ಲಿ ನಮಗೆ ಅವಮಾನ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ಧಾರೆ. ಆಂಧ್ರ ಹಾಗೂ ತೆಲಂಗಾಣದ ಹಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಚಿತ್ರಮಂದಿರದ ಮುಂದೆ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಈ ವಿಚಾರದ ಬಗ್ಗೆ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯಿಸಲಿದೆ ಅನ್ನೋದನ್ನು ಕಾದು ನೋಡಬೇಕು.
'ದಸರಾ' ಚಿತ್ರವನ್ನು ಶ್ರೀಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಇದೆ. ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರದ ಹಾಡುಗಳಿಗೆ ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ. ಗೀತಾ ಆರ್ಟ್ಸ್ ಹಾಗೂ ಸ್ಟಾರ್ ಸ್ಟುಡಿಯೋಸ್ ಈ ಚಿತ್ರವನ್ನು ಹಂಚಿಕೆ ಮಾಡಿದೆ.
ನ್ಯಾಚುರಲ್ ಎಫೆಕ್ಟ್‌ಗಾಗಿ ನಿಜವಾಗಲೂ ಡ್ರಿಂಕ್ಸ್ ಮಾಡಿದ್ದರಂತೆ ನಾನಿ
ನಾನಿ ಇದಕ್ಕೂ ಮುನ್ನ ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚಾಗಿ ಚಾಕೊಲೇಟ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಅವರು ರಗಡ್ ಲುಕ್‌ನಲ್ಲಿ ದರ್ಶನ ನೀಡಿದ್ದಾರೆ. ಅವರ ಪಾತ್ರ ಕೂಡಾ ಹಾಗೇ ಇರಲಿದೆಯಂತೆ. ಸಿನಿಮಾದ ಕೆಲವೊಂದು ಸನ್ನಿವೇಶಗಳಿಗೆ ನಾನಿ ನಿಜವಾಗಿಯೂ ಡ್ರಿಂಕ್ಸ್ ಮಾಡಿ ನಟಿಸಿದ್ದಾರಂತೆ. ಈ ವಿಚಾರವನ್ನು ಸುದ್ದಿಗೋಷ್ಠಯಲ್ಲಿ ಸ್ವತ: ನಾನಿ ಹೇಳಿದ್ದಾರೆ.
''ಚಿತ್ರದಲ್ಲಿ ನಾನು ಡ್ರಿಂಕ್ಸ್ ಮಾಡುವ ದೃಶ್ಯಗಳಿವೆ. ಡ್ರಿಂಕ್ಸ್ ಮಾಡಿದಾಗ ನನ್ನ ಕಣ್ಣು ಕೆಂಪಗಾಗಬೇಕಿತ್ತು. ಆದರೆ ಏನೇ ಮಾಡಿದರೂ ನ್ಯಾಚುರಲ್ ಎಫೆಕ್ಟ್ ಬಾರದ ಕಾರಣ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ನಾನು ನಿಜವಾಗಿಯೂ ಡ್ರಿಂಕ್ಸ್ ಮಾಡಬೇಕಾಯ್ತು. ಚಿತ್ರದ ಕೆಲವೊಂದು ದೃಶ್ಯಗಳಲ್ಲಿ ನನ್ನ ಪಾತ್ರ ಬಹಳ ರಫ್ ಆಗಿದೆ. ಆದರೆ ಸಿನಿಮಾ ಔಟ್‌ಪುಟ್ ಮಾತ್ರ ಬಹಳ ಚೆನ್ನಾಗಿದೆ. ಸಿನಿಮಾ ಖಂಡಿತ ನಿಮ್ಮೆಲ್ಲರಿಗೂ ಬಹಳ ಇಷ್ಟವಾಗುತ್ತದೆ. ನೋಡುಗರಿಗೆ ನಿಜವಾಗಲೂ ಥ್ರಿಲ್ ಕೊಡುತ್ತದೆ'' ಎಂದು ಶೂಟಿಂಗ್ ಅನುಭವವನ್ನು ಹೇಳಿಕೊಂಡಿದ್ದರು.