National Film Awards Live: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ, ರಾಕೆಟ್ರಿ ಅತ್ಯುತ್ತಮ ಚಿತ್ರ, ಅಲ್ಲು ಅರ್ಜುನ್ ಅತ್ಯುತ್ತಮ ನಟ
Aug 24, 2023 06:31 PM IST
National Film Awards 2023 live updates: 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಕನ್ನಡದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅಲ್ಲು ಅರ್ಜುನ್, ಆಲಿಯಾ ಭಟ್ ಸೇರಿದಂತೆ ಹಲವರಿಗೆ ಪ್ರಶಸ್ತಿ ದೊರಕಿದೆ. ನ್ಯಾಷನಲ್ ಫಿಲ್ಮ್ ಅವಾರ್ಡ್‌ನ ತಾಜಾ ಅಪ್‌ಡೇಟ್ ಇಲ್ಲಿ ಪಡೆಯಿರಿ.
ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿಗೆ ಭಾಜನವಾದ ದಿ ಕಾಶ್ಮೀರ್ ಫೈಲ್ಸ್
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ರಾಕೆಟ್ರಿ; ನಂಬಿ ಎಫೆಕ್ಟ್ ಅತ್ಯುತ್ತಮ ಸಿನಿಮಾ
ಆರ್ ಮಾಧವನ್ ನಟನೆ ಮತ್ತು ನಿರ್ದೇಶನದ ರಾಕೆಟ್ರಿ; ನಂಬಿ ಎಫೆಕ್ಟ್ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದರೆ, ಪುಷ್ಪ ಸಿನಿಮಾದ ನಾಯಕ ಅಲ್ಲು ಅರ್ಜುನ್ ಅತ್ಯುತ್ತಮ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ. ಈ ಕುರಿತು ವಿಶೇಷ ವರದಿ ಇಲ್ಲಿದೆ.
ಸಂಜಯ್ ಲೀಲಾ ಬನ್ಸಾಲಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ
ಗಂಗೂಬಾಯಿ ಕಥಿಯಾವಾಡಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕಾಶ್ಮೀರ್ ಫೈಲ್ಸ್ ನಟಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಹಲವು ಸಿನಿಮಾ ನಟನಟಿಯರು ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಪೋಷಕ ನಟಿಯರಾಗಿ ದಿ ಕಾಶ್ಮೀರ್ ಫೈಲ್ಸ್‌ನ ಪಲ್ಲವಿ ಜೋಶಿ ಮತ್ತು ಮಿಮಿ ಸಿನಿಮಾದ ಪಂಕಜ್ ತ್ರಿಪಾಠಿ ಪ್ರಶಸ್ತಿ ಪಡೆದಿದ್ದಾರೆ.
ಆಲಿಯಾ ಭಟ್ ಮತ್ತು ಕೃತಿ ಸನನ್ ಬೆಸ್ಟ್ ನಟಿ, ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಆಲಿಯಾ ಭಟ್ ಮತ್ತು ಕೃತಿ ಸನನ್ ಬೆಸ್ಟ್ ನಟಿಯರಾಗಿ ಹೊರಹೊಮ್ಮಿದ್ದಾರೆ. ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ನಾನ್ ಫಿಕ್ಷನ್ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ
ಗರ್ವಾಲಿ ಮತ್ತು ಹಿಂದಿ ಸಿನಿಮಾ ಏಕ್ ಥ ಗಾವೋ ಸಿನಿಮಾವು ನಾನ್ ಫಿಕ್ಷನ್ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸ್ಪರ್ಧಿಸಿದ ಸಿನಿಮಾಗಳು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸುಮಾರು 28 ಭಾಷೆಯ ಒಟ್ಟು 280 ಸಿನಿಮಾಗಳು ಸ್ಪರ್ಧಿಸಿದ್ದವು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಅತ್ಯುತ್ತಮ ಹಿಂದಿ ಚಿತ್ರ
ಸರ್ದಾರ್ ಉದಮ್‌ಗೆ ಅತ್ಯುತ್ತಮ ಹಿಂದಿ ಸಿನಿಮಾ ರಾಷ್ಟ್ರ ಪ್ರಶಸ್ತಿ ದೊರಕಿದೆ. ಚೆಲ್ಲೊ ಶೋ ಗೆ ಅತ್ಯುತ್ತಮ ಗುಜರಾತಿ ಸಿನಿಮಾ ಪ್ರಶಸ್ತಿ ದೊರಕಿದೆ
ಕನ್ನಡದ ನಟ ಅನಿರುದ್ಧ್ ಜತ್ಕರ್ ನಿರ್ದೇಶನದ ಬಾಳೇ ಬಂಗಾರ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ
2021ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗಾಗಿ ನೀಡುವ ಪ್ರಶಸ್ತಿ ಇದಾಗಿದ್ದು, ಇದರಲ್ಲಿ 14 ಭಾಷೆಗಳ 280 ಫೀಚರ್ಸ್ ಸಿನಿಮಾಗಳು, 150 ನಾನ್ ಫೀಚರ್ಸ್ ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು. ಆ ಪೈಕಿ ನಾನ್ ಫೀಚರ್ಸ್ ವಿಭಾಗದಲ್ಲಿ ಕನ್ನಡದ ನಟ ಅನಿರುದ್ಧ್ ಜತ್ಕರ್ ನಿರ್ದೇಶನದ ಬಾಳೇ ಬಂಗಾರ ಸಾಕ್ಷ್ಯಚಿತ್ರಕ್ಕೆ ಸ್ಪೆಷಲ್ ಮೆನ್ಷನ್ ಅವಾರ್ಡ್ ಲಭಿಸಿದೆ.
ಕನ್ನಡದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 777 ಚಾರ್ಲಿಗೆ ರಾಷ್ಟ್ರ ಪ್ರಶಸ್ತಿ
ಕನ್ನಡದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 777 ಚಾರ್ಲಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ
ಕಳೆದ ಬಾರಿ ಕನ್ನಡದ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದ ಡೊಳ್ಳು
ಕಳೆದ ವರ್ಷ , ‘ಡೊಳ್ಳು’ ಸಿನಿಮಾ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು. ಈ ಚಿತ್ರಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಕನ್ನಡ ಸಿನಿಮಾ, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರಕ್ಕೆ ‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಕುರಿತ ವಿಶೇಷ ವರದಿ ಇಲ್ಲಿದೆ
ಕಳೆದ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದವರ ಕಂಪ್ಲಿಟ್ ಲಿಸ್ಟ್
ಕಳೆದ ಜುಲೈನಲ್ಲಿ ಘೋಷಣೆಯಾಗಿದ್ದರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ಗೆ 'ಅತ್ಯುತ್ತಮ ನಟ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ.
69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಘೋಷಣೆ
69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಘೋಷಣೆಯಾಗುತ್ತಿದೆ. ಸಂಜೆ 5 ಗಂಟೆಯ ಬಳಿಕ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪ್ರಕಟಗೊಳ್ಳಲಿದೆ. ಈ ಬಾರಿ ದಕ್ಷಿಣ ಭಾರತದ ಹಲವು ಸಿನಿಮಾಗಳಿಗೆ ಪ್ರಶಸ್ತಿ ದೊರಕುವ ಸಾಧ್ಯತೆ ಹೆಚ್ಚಿದೆ. 2023ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯು 2021 ರಲ್ಲಿ ಬಿಡುಗಡೆ/ಸೆನ್ಸಾರ್ ಆದ ಸಿನಿಮಾಗಳಿಗೆ ದೊರಕಲಿದೆ. ಅಂದರೆ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ತಂತ್ರಜ್ಞರಿಗೆ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಲಿದೆ.
ತೆಲುಗಿನ ಆರ್‌ಆರ್‌ಆರ್ ಸಿನಿಮಾಕ್ಕೆ ಹಲವು ಪ್ರಶಸ್ತಿ ಸಾಧ್ಯತೆ
ಆರ್‌ಆರ್‌ಆರ್ ಸಿನಿಮಾವು ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಸದ್ದು ಮಾಡಿದ ಸಿನಿಮಾ. ಈ ಬಾರಿಯ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಆರ್‌ಆರ್‌ಆರ್ ಮುಡಿಗೆ ಹಲವು ಪ್ರಶಸ್ತಿಗಳು ದೊರಕುವ ಸಾಧ್ಯತೆಯಿದೆ. ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿದೆ. ಆದರೆ, 2021ರಲ್ಲಿಯೇ ಸೆನ್ಸಾರ್ ಆಗಿರುವುದರಿಂದ ಪ್ರಶಸ್ತಿ ವ್ಯಾಪ್ತಿಗೆ ಬರಲಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪಾ ಕೂಡ ಪ್ರಶಸ್ತಿ ರೇಸ್‌ನಲ್ಲಿದೆ. ಜಾತಿ ರತ್ನಾಲು, ಅಪ್ಪೆನ ಇತ್ಯಾದಿ ಹಲವು ಸಿನಿಮಾಗಳು ತೆಲುಗು ಭಾಷೆಯಲ್ಲಿ ಪ್ರಶಸ್ತಿಗಾಗಿ ಕಾಯುತ್ತಿವೆ. ರಾಮ್ ಚರಣ್, ಜೂ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ಮುಂತಾದ ನಟರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡದ ಸಿನಿಮಾಗಳಿಗೂ ಪ್ರಶಸ್ತಿ ನಿರೀಕ್ಷೆ
2021ರಲ್ಲಿ ಸೆನ್ಸಾರ್ ಆದ ಅಥವಾ ಬಿಡುಗಡೆಯಾದ ಕನ್ನಡದ ಕೆಲವು ಸಿನಿಮಾಗಳು 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ರೇಸ್‌ನಲ್ಲಿವೆ. ‘ಗರುಡಗಮನ ವೃಷಭ ವಾಹನ' ಸೇರಿದಂತೆ ಕೆಲವು ಕಲಾತ್ಮಕ ಸಿನಿಮಾಗಳು ಪಟ್ಟಿಯಲ್ಲಿದ್ದು, ಕನ್ನಡಕ್ಕೂ ಪ್ರಶಸ್ತಿಯ ನಿರೀಕ್ಷೆ ಹೆಚ್ಚಾಗಿದೆ.
ಮಲಯಾಳಂ ಸಿನಿಮಾಗಳ ಸ್ಪರ್ಧೆ
ಮೇಪ್ಪಾದಿಯಾನ್, ನಾಯಟ್ಟು, ಮಿನ್ನಲ್ ಮುರಲಿ, ದಿ ಗ್ರೇಟ್ ಇಂಡಿಯನ್ ಕಿಚನ್ ಮುಂತಾದ ಮಲೆಯಾಳಂ ಸಿನಿಮಾಗಳು ಪ್ರಶಸ್ತಿ ರೇಸ್‌ನಲ್ಲಿವೆ. ಈ ಬಾರಿ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ರೇಸ್‌ನಲ್ಲಿ ಹೀಗೆ ಹಲವು ದಕ್ಷಿಣ ಭಾರತದ ಸಿನಿಮಾಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ದಕ್ಷಿಣ ಭಾರತದ ಸಿನಿಮಾಗಳ ಪಾರುಪತ್ಯ ನಿರೀಕ್ಷೆ
ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಈ ಬಾರಿ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸಿನಿಮಾಗಳಿಗೆ ಹಲವು ಪ್ರಶಸ್ತಿ ದೊರಕುವ ಸಾಧ್ಯತೆಯಿದೆ. ತಮಿಳಿನಲ್ಲಿ ರಾಕೆಟ್ರಿ: ದಿ ನಂಬಿ ಎಫೆಕ್ಟ್, ಜೈಭೀಮ್, ಕರ್ಣನ್, ಸರ್ಪಟ್ಟ ಪರಂಬರೈ, ಮಾನಾಡು ಇತ್ಯಾದಿ ಹಲವು ಸಿನಿಮಾಗಳು ಪ್ರಶಸ್ತಿ ರೇಸ್‌ನಲ್ಲಿವೆ. ಸೂರ್ಯ, ಧನುಶ್, ಆರ್ಯಾ, ಸಿಲಂಬರಸನ್, ಮಾಧವನ್‌ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಯಾರಿಗೆ ದೊರಕಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.