Tollywood: ನಂದಮೂರಿ ಕುಟುಂಬದಲ್ಲಿ ವಿಷಾದ...ಆತ್ಮಹತ್ಯೆಗೆ ಶರಣಾದ ಉಮಾ ಮಹೇಶ್ವರಿ
Aug 01, 2022 06:26 PM IST
ನಂದಮೂರಿ ಬಾಲಕೃಷ್ಣ ಸಹೋದರಿ ಉಮಾ ಮಹೇಶ್ವರಿ ಆತ್ಮಹತ್ಯೆ (PC: ANI)
- ಉಮಾ ಮಹೇಶ್ವರಿ ಜ್ಯೂಬ್ಲಿ ಹಿಲ್ಸ್ನಲ್ಲಿ ನೆಲೆಸಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತೆಲುಗು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಉಮಾ ಮಹೇಶ್ವರಿ ಅಂತಿಮ ದರ್ಶನ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದಾರೆ.
ಖ್ಯಾತ ತೆಲುಗು ನಟ ನಂದಮೂರಿ ತಾರಕ್ ರಾಮಾರಾವ್ ಪುತ್ರಿ, ನಂದಮೂರಿ ಬಾಲಕೃಷ್ಣ ಸಹೋದರಿ ಕಾಂತಮನೇನಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಉಮಾ ಮಹೇಶ್ವರಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ನಿವಾಸದ ರೂಮ್ ಒಂದರಲ್ಲಿ ಪತ್ತೆಯಾಗಿದೆ.
ಕಾಂತಮನೇನಿ ಉಮಾ ಮಹೇಶ್ವರಿ, ತೆಲುಗು ಖ್ಯಾತ ನಟ ದಿವಂಗತ ಎನ್ಟಿಆರ್ ಅವರ ನಾಲ್ಕನೇ ಪುತ್ರಿ. ಕಳೆದ ಕೆಲವು ದಿನಗಳಿಂದ ಉಮಾ ಮಹೇಶ್ವರಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದರಂತೆ. ಆದರೆ ಇಂದು ಬೆಳಗ್ಗೆ ಅವರು ತಮ್ಮ ರೂಮ್ನ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮಾ ಮಹೇಶ್ವರಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೈದರಾಬಾದ್ ಉಸ್ಮಾನಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಉಮಾ ಮಹೇಶ್ವರಿ ಇತ್ತೀಚೆಗೆ ತಮ್ಮ ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರಂತೆ. ನರೇಂದ್ರ ರಾಜ್ ಎಂಬುವವರನ್ನು ಕೈ ಹಿಡಿದಿದ್ದ ಉಮಾ ಮಹೇಶ್ವರಿ ಕೆಲವು ವರ್ಷಗಳ ನಂತರ ಅವರಿಂದ ದೂರಾಗಿ ನಂತರ ಕಂಠಮನೇನಿ ಶ್ರೀನಿವಾಸ್ ಪ್ರಸಾದ್ ಎಂಬುವರನ್ನು ಮದುವೆಯಾಗಿದ್ದರು. ಉಮಾ ಮಹೇಶ್ವರಿ ಜ್ಯೂಬ್ಲಿ ಹಿಲ್ಸ್ನಲ್ಲಿ ನೆಲೆಸಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತೆಲುಗು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಉಮಾ ಮಹೇಶ್ವರಿ ಅಂತಿಮ ದರ್ಶನ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ತಾರಕ್ ರಾಮಾರಾವ್ ಸಿನಿಮಾ ಜೊತೆಗೆ ತೆಲುಗು ದೇಶಂ ಪಾರ್ಟಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮೂರು ಬಾರಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಇವರಿಗೆ 8 ಮಂದಿ ಗಂಡುಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು. ಗಂಡು ಮಕ್ಕಳಲ್ಲಿ ಮೊದಲ ಪುತ್ರ ನಂದಮೂರಿ ರಾಮಕೃಷ್ಣ, 4ನೇ ಪುತ್ರ ನಂದಮೂರಿ ಹರಿಕೃಷ್ಣ, 6ನೇ ಮಗ ನಂದಮೂರಿ ಬಾಲಕೃಷ್ಣ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಂದಮೂರಿ ಹರಿಕೃಷ್ಣ ಪುತ್ರ ಜ್ಯೂನಿಯರ್ ಎನ್ಟಿಆರ್ ಕೂಡಾ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಜ್ಯೂನಿಯರ್ ಎನ್ಟಿಆರ್ಗೆ ಉಮಾ ಮಹೇಶ್ವರಿ ಸಂಬಂಧದಲ್ಲಿ ಅತ್ತೆ ಆಗಬೇಕು.
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಒಬ್ಬರು. ಅನೇಕ ಹಿಟ್ ಸಿನಿಮಾಗಳನ್ನು ಅವರು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಬಾಲಕೃಷ್ಣ ಅವರಿಗೆ ಕರ್ನಾಟಕದಲ್ಲಿ ಕೂಡಾ ಅಭಿಮಾನಿಗಳಿದ್ದಾರೆ. ಬಾಲಕೃಷ್ಣ ಅವರಿಗೆ, ಡಾ. ರಾಜ್ಕುಮಾರ್ ಕುಟುಂಬ ಸೇರಿದಂತೆ ಕನ್ನಡದ ಅನೇಕ ನಟರೊಂದಿಗೆ ಒಡನಾಟ ಇದೆ. ಪುನೀತ್ ರಾಜ್ಕುಮಾರ್ ನಿಧನರಾದಾಗ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಅವರ ಅಂತಿಮ ದರ್ಶನ ಪಡೆದಿದ್ದರು. ಪುನೀತ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದರು. ಆಂಧ್ರದಲ್ಲಿ ಪ್ರತಿ ವರ್ಷ ನಡೆಯುವ ಲೇಪಾಕ್ಷಿ ಉತ್ಸವಕ್ಕೆ ಶಿವರಾಜ್ಕುಮಾರ್ ಹಾಗೂ ಕುಟುಂಬದವರನ್ನು ತಪ್ಪದೆ ಆಹ್ವಾನಿಸುವ ಬಾಲಕೃಷ್ಣ ಎಂದರೆ ಕನ್ನಡಿಗರಿಗೂ ಅಚ್ಚುಮೆಚ್ಚು.
ಜ್ಯೂನಿಯರ್ ಎನ್ಟಿಆರ್
ಜ್ಯೂನಿಯರ್ ಎನ್ಟಿಆರ್ ಕೂಡಾ ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರು. 1991 ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಜ್ಯೂನಿಯರ್ ಎನ್ಟಿಆರ್, ನಾಯಕನಾಗಿ ಕೂಡಾ ದೊಡ್ಡ ಯಶಸ್ಸು ಗಳಿಸಿದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿರುವ ಆರ್ಆರ್ಆರ್ ಸಿನಿಮಾ ತೆರೆ ಕಂಡಿತ್ತು.