Siddaramaiah: ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ..
Aug 24, 2022 02:34 PM IST
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ..
- ಪವನ್ ಒಡೆಯರ್ ನಿರ್ಮಾಣ ಮಾಡಿರುವ "ಡೊಳ್ಳು" ಸಿನಿಮಾವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಕಣ್ತುಂಬಿಕೊಂಡು, ಚಿತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.
ಬೆಂಗಳೂರು: ಪವನ್ ಒಡೆಯರ್ ನಿರ್ಮಾಣ ಮಾಡಿರುವ "ಡೊಳ್ಳು" ಸಿನಿಮಾವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಕಣ್ತುಂಬಿಕೊಂಡು, ಚಿತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ರಾಜಕೀಯದ ಜಂಜಡಗಳ ನಡುವೆಯೇ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡಿ ನಿರ್ದೇಶಕರ ಸಾಹಸಕ್ಕೆ ಸೈ ಎಂದಿದ್ದಾರೆ.
"ಸಿನಿಮಾ ತುಂಬಾ ಚೆನ್ನಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಕಲೆಯನ್ನು ಬೆಳೆಸಬೇಕು, ಉಳಿಯಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ಮಾಡಿದ್ದಾರೆ. ಕಲೆಗೆ ಜಾತಿ ಧರ್ಮ ಲಿಂಗಭೇದ ಯಾವುದು ಇರುವುದಿಲ್ಲ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಇಂತಹ ಸಿನಿಮಾಗಳು ಬರಬೇಕು. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ಶುಭ ಹಾರೈಸಿದರು. ಇದೇ ವೇಳೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸೇರಿ ಹಲವು ರಾಜಕೀಯ ಮುಖಂಡರು ಮತ್ತು ಸಿನಿಮಾ ತಂಡ ಸಿನಿಮಾ ವೀಕ್ಷಣೆ ವೇಳೆ ಹಾಜರಿತ್ತು.
ಒಡೆಯರ್ ಮೂವೀಸ್ ಬ್ಯಾನರ್ ಅಡಿ ಮೊದಲ ಬಾರಿಗೆ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜೊತೆಗೂಡಿ 'ಡೊಳ್ಳು' ಸಿನಿಮಾ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಸಾರಥ್ಯದಲ್ಲಿ ಚಿತ್ರ ತಯಾರಾಗಿದೆ. ಕಿರುತೆರೆ ಕಲಾವಿದ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗಡೆ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಚಿತ್ರಕ್ಕೆ ಅನಂತ್ ಕಾಮತ್ ಸಂಗೀತವಿದ್ದು, ಅಭಿಲಾಷ್ ಕಲಾಥಿ ಕ್ಯಾಮೆರಾ ಕೈಚಳಕ ಇದೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಟ್ರೇಲರ್ ಹಾಗೂ ಮಾಯಾನಗರಿ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮ್ಮ ಸಿನಿಮಾಗೆ ರಾಷ್ಟ್ರಪ್ರಶಸ್ತಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಸಾಗರ್ ಪುರಾಣಿಕ್, ನನ್ನನ್ನು ನಂಬಿ, ಈ ಚಿತ್ರಕ್ಕೆ ಹಣ ಹೂಡಿದ್ದಕ್ಕೆ ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಒಂದೊಳ್ಳೆ ತಂಡ ಸೇರಿದರೆ ಖಂಡಿತ ಯಶಸ್ಸು ದೊರೆಯುತ್ತದೆ ಎನ್ನುವುದಕ್ಕೆ ಡೊಳ್ಳು ಸಿನಿಮಾವೇ ಸಾಕ್ಷಿ ಎಂದು ಹೇಳಿ ಸಂತೋಷ ವ್ಯಕ್ತಪಡಿಸಿದ್ದರು.
ಮಾಯಾನಗರಿ ಹಾಡು ಮೆಚ್ಚಿದ ಧನಂಜಯ್
ಇತ್ತೀಚೆಗೆ 'ಡೊಳ್ಳು' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಸ್ಯಾಂಡಲ್‌ವುಡ್ ಖ್ಯಾತ ನಟ ಡಾಲಿ ಧನಂಜಯ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಬಿಡುಗಡೆಗೂ ಮುನ್ನ ಈ ಸಿನಿಮಾ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಪಡೆದಿರುವುದು ಹೆಮ್ಮೆಯ ವಿಚಾರ.
ಟ್ರೇಲರ್ ಬಿಡುಗಡೆಗೊಳಿಸಿದ್ದ ಗಣೇಶ್
ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ್ದ ಗಣೇಶ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದದ್ದರು. "ನಮ್ಮ ಸಿನಿಮಾ. ನಮ್ಮತನದ ಸಿನಿಮಾ, ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಕಲೆ ಮತ್ತು ಕಮರ್ಷಿಯಲ್ ನಡುವಿನ ಮಧ್ಯೆ ತೆಗೆದಿರುವ ಸಿನಿಮಾ. ಟ್ರೇಲರ್ ಬಹಳ ಚೆನ್ನಾಗಿದೆ. ಇದೇ 26ರಂದು ಚಿತ್ರ ಬಿಡುಗಡೆಯಾಗ್ತಿದೆ ಪ್ರತಿಯೊಬ್ಬರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ'' ಎಂದು ಸಿನಿಪ್ರಿಯರಲ್ಲಿ ಮನವಿ ಮಾಡಿದ್ದರು.