OTT Movie Review: ನಮ್ಮೊಳಗಿನ ಅಹಂ ಅಣಕಿಸುವ ಪಾರ್ಕಿಂಗ್; ಒಟಿಟಿ ಪ್ರಿಯರು ಮಿಸ್ ಮಾಡದೆ ನೋಡಬಹುದಾದ ಸಿನಿಮಾ
Jan 08, 2024 03:55 PM IST
OTT Movie Review: ನಮ್ಮೊಳಗಿನ ಅಹಂ ಅಣಕಿಸುವ ಪಾರ್ಕಿಂಗ್ ಸಿನೆಮಾ
- OTT Must Watch Movies: ಒಂದು ಕಾರ್ ಪಾರ್ಕಿಂಗ್ ಸ್ಥಳ ಮತ್ತು ಎರಡು ಮನೆಗಳ ಇಬ್ಬರು ವ್ಯಕ್ತಿಗಳ ನಡುವಿನ ಅಹಂ ಅನ್ನು ಇಟ್ಟುಕೊಂಡು ಪಾರ್ಕಿಂಗ್ ಎಂಬ ರೋಚಕ ತಮಿಳು ಚಿತ್ರ ನಿರ್ಮಿಸಲಾಗಿದೆ. ಒಟಿಟಿಯಲ್ಲಿ ಇದನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನೋಡಬಹುದು.
ಬೆಂಗಳೂರಿನಂತಹ ನಗರಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಸ್ಥಳಾವಕಾಶವಿಲ್ಲ ಎನ್ನುವುದು ಬಹುತೇಕರ ಗೋಳು. ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿರುವ ಮನೆಗೆ ಈಗ ಬಹುತೇಕರು ಹೋಗಲು ಬಯಸುತ್ತಾರೆ. ಆದರೆ, ನಗರದಲ್ಲಿರುವ ಹಲವು ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕನಿಷ್ಠ ಇರುತ್ತದೆ. ಒಂದು ಸಾಮಾನ್ಯ ಕಟ್ಟಡದಲ್ಲಿ ನಾಲ್ಕೈದು ಮನೆಗಳಿದ್ದರೆ ಒಂದು ಕಾರು ಇಡಲು ಸ್ಥಳಾವಕಾಶ ಇರುತ್ತದೆ. ಇಂತಹ ಒಂದು ಪಾರ್ಕಿಂಗ್ ವಿಷಯವೂ ಕೊನೆತನಕ ಕುತೂಹಲದಿಂದ ಮುಂದೆನಾಗುತ್ತದೆ ಎಂದು ಕಾಯುವಂತಹ ಸಸ್ಪೆನ್ಸ್ ಸಿನಿಮಾವಾಗಬಹುದೇ? ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿರುವ ಪಾರ್ಕಿಂಗ್ ಎಂಬ ಸಿನಿಮಾ ಇದೇ ರೀತಿಯದ್ದು.
ಪಾರ್ಕಿಂಗ್ ಸಿನಿಮಾದ ಕಥೆಯೇನು ಎಂದರೆ ಒಂದು ಪ್ಯಾರಾದಲ್ಲಿ ಹೇಳಿ ಮುಗಿಸಬಹುದು. ಆದರೆ, ಇದನ್ನು 2 ಗಂಟೆ 9 ರೋಚಕ ಸಿನಿಮಾವಾಗಿ ಕಟ್ಟಿಕೊಟ್ಟಿರುವುದು ನಿರ್ದೇಶಕ ರಾಮಕುಮಾರ್ ಬಾಲಚಂದ್ರನ್ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಈ ಚಿತ್ರ ಕೇವಲ ಪಾರ್ಕಿಂಗ್ ಎಂಬ ಒಂದು ಸಮಸ್ಯೆಯ ಸುತ್ತದೇ ಪ್ರತಿಯೊಬ್ಬರಲ್ಲಿ, ವಿಶೇಷವಾಗಿ ಗಂಡಸರಲ್ಲಿ ಇರುವ ಅಹಂ ಕುರಿತು ಮಾತನಾಡುತ್ತದೆ. ಒಂದು ಪುಟ್ಟ ಪಾರ್ಕಿಂಗ್ ವಿಷಯ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥನವಾಗುತ್ತದೆ.
ಬೆಂಗಳೂರು ನಗರದಲ್ಲೊಂದು ಸಾಮಾನ್ಯ ಬಾಡಿಗೆ ಮನೆ. ಕೆಳಗಿನ ಮನೆಯ ಮುಂದೆ ಒಂದು ಪಾರ್ಕಿಂಗ್ ಸ್ಪೇಸ್. ಮೇಲಿನ ಮನೆಗೆ ಹೊಸದಾಗಿ ಯುವ ಜೋಡಿ ಬಾಡಿಗೆಗೆ ಬರುತ್ತಾರೆ. ಕೆಳಗಿನ ಈಗಾಗಲೇ ಹತ್ತು ವರ್ಷದಿಂದ ಬಾಡಿಗೆಗೆ ಇರುವ ಸರಕಾರಿ ಉದ್ಯೋಗಿಯೊಬ್ಬರು ತನ್ನ ಕುಟುಂಬದ ಜತೆ ಇರುತ್ತಾರೆ. ಮೇಲಿನ ಮನೆಗೆ ಬಂದ ಈಶ್ವರ್ ಐಟಿ ಉದ್ಯೋಗಿ. ಆತನ ಪತ್ನಿ ಅಧಿಕ ಗರ್ಭಿಣಿ. ಇವರಿಬ್ಬರದ್ದು ಅನ್ಯೋನ್ಯ ಸಂಬಂಧ. ಆದರೆ, ಕೆಳಗಿನ ಮನೆಯ ಹಿರಿಯ ವ್ಯಕ್ತಿ ಇಲಮ್‌ಪರುತಿ ಅವರದ್ದು ವಿಭಿನ್ನ ವ್ಯಕ್ತಿತ್ವ. ಇನ್ನೊಂದು ವರ್ಷದಲ್ಲಿ ನಿವೃತ್ತಿಯಾಗುವ ಇವರು ಜಿಪುಣ. ಮಗಳ ಮದುವೆಗಾಗಿ ಹಣ ಕೂಡಿಡುವ ವ್ಯಕ್ತಿ. ಆದರೆ, ಈತ ಲಂಚ ತೆಗೆದುಕೊಳ್ಳದ ಒಳ್ಳೆಯ ವ್ಯಕ್ತಿ. ಸುತ್ತಮುತ್ತಲು ಮರ್ಯಾದೆಯಿಂದ ಬದುಕುತ್ತಿರುವಂತಹ ವ್ಯಕ್ತಿತ್ವ.
ಕೆಳಗಿನ ಮನೆಯ ಇಲಮ್‌ಪರುತಿ ಬಳಿ ಒಂದು ಹಳೆಯ ಬೈಕ್ ಇರುತ್ತದೆ. ಯಾವುದೇ ವಸ್ತು ಹಳತಾದರೂ ಹೊಸತು ತೆಗೆದುಕೊಳ್ಳದೆ ಅದನ್ನೇ ರಿಪೇರಿ ಮಾಡುತ್ತ ಇರುವ ವ್ಯಕ್ತಿ ಇವರು. ಇವರ ಹಳೆಯ ಬೈಕ್ ಒಂದು ಕಿಕ್‌ಗೆ ಸ್ಟಾರ್ಟ್ ಆಗುವಂತದ್ದಲ್ಲ. ಐಟಿ ಉದ್ಯೋಗಿ ಈಶ್ವರ್ ತನ್ನ ಪತ್ನಿ ಗರ್ಭಿಣಿಯಾಗಿರುವುದರಿಂದ ಅನುಕೂಲವಾಗಲಿ ಎಂದು ಹೊಸ ಕಾರು ತೆಗೆದುಕೊಳ್ಳುತ್ತಾನೆ. ಅಲ್ಲಿಂದ ಈ ಎರಡು ಮನೆಯ ನೆಮ್ಮದಿ ಹಾಳಾಗುತ್ತದೆ. ಈ ಮನೆಯ ಮುಂದೆ ಕಡಿಮೆ ಪಾರ್ಕಿಂಗ್ ಸ್ಥಳವಕಾಶ ಇರುತ್ತದೆ. ಒಂದು ಕಾರು ಮತ್ತು ಒಂದು ಬೈಕ್ ನಿಲ್ಲಿಸಬಹುದಷ್ಟೇ.
ಈಶ್ವರ್ ಕಾರು ತಂದ ಬಳಿಕ ಇಲಮ್‌ಪರುತಿಯ ಅಹಂಗೆ ಪೆಟ್ಟು ಬೀಳುತ್ತದೆ. ಇದೇ ಸಮಯದಲ್ಲಿ ಈಶ್ವರ್‌ಗೆ ಮೂಗಿನ ತುದಿಯಲ್ಲಿ ಕೋಪ. ಮಾತಿನಲ್ಲಿ ಅಷ್ಟು ಹಿಡಿತ ಇರುವುದಿಲ್ಲ. ಈ ಎರಡು ವ್ಯಕ್ತಿತ್ವ ಮತ್ತು ಎರಡು ವಾಹನಗಳ ನಡುವಿನ ಕಾದಾಟ ಮುಂದೆ ರೋಚಕ ತಿರುವುಗಳನ್ನು ಪಡೆಯುತ್ತದೆ. ಎರಡು ವ್ಯಕ್ತಿಗಳು, ಎರಡು ವಾಹನಗಳ ನಡುವಿನ ಈ ವಿಷಯವನ್ನು ಥ್ರಿಲ್ಲರ್ ಮೂವಿಯಾಗಿ ಕಟ್ಟಿಕೊಟ್ಟಿರುವುದು ಈ ಸಿನಿಮಾ ನಿರ್ದೇಶಕರ ಹೆಚ್ಚುಗಾರಿಕೆ. ಇದರೊಂದಿಗೆ ಈ ಸಿನಿಮಾದ ಸಂಕಲನ, ಸಿನಿಮಾಟೊಗ್ರಫಿಯೂ ಚಿತ್ರವನ್ನು ಅದ್ಭುತವಾಗಿಸಿದೆ.
ಈ ಚಿತ್ರ ಮನುಷ್ಯನ ಅಹಂನಿಂದ ಆಗುವ ತೊಂದರೆಗಳ ಕುರಿತು ಮಾತನಾಡುತ್ತದೆ. ಒಂದು ಸಣ್ಣ ಹೊಂದಾಣಿಕೆ ಮಾಡಿಕೊಂಡರೆ ಬದುಕು ಚೆನ್ನಾಗಿರುತ್ತದೆ. ಇಗೋ ನಡುವೆ ಬದುಕಿದರೆ ಕೆಟ್ಟದಾಗಿರುತ್ತದೆ. ಈ ಸಿನಿಮಾದ ಕಲಾವಿದರ ನಟನೆಯೂ ನೈಜ್ಯತೆಗೆ ಹತ್ತಿರವಾಗಿದೆ. ಇಲಮ್‌ಪರುತಿ ಎಂಎಸ್ ಭಾಸ್ಕರ್ ನಟನೆಯಂತೂ ಅದ್ಭುತ. ನೀವು ಈ ಸಿನಿಮಾಕ್ಕೆ ಸಂಬಂಧಪಟ್ಟ ರೀಲ್ಸ್ ನೋಡಿರುತ್ತೀರಿ. ಸರಕಾರಿ ಅಧಿಕಾರಿಯೊಬ್ಬರು ಲಂಚ ತೆಗೆದುಕೊಂಡಿದ್ದಾರೆ ಎಂದು ವಿಜಿಲೆನ್ಸ್ ತಂಡ ಸರಕಾರಿ ಕಚೇರಿಯೊಂದರ ಮೇಲೆ ದಾಳಿ ಮಾಡುವುದು... ಆ ಸಂದರ್ಭದಲ್ಲಿ ಕರೆಂಟ್ ಇಲ್ಲದೆ ಇರುವುದು, ಫ್ಯಾನ್ ರೆಕ್ಕೆ ಮೇಲೆ ಹಣದ ಕಂತೆಗಳಿರುವುದು.... ವಿಜಿಲೆನ್ಸ್ ಅಧಿಕಾರಿಣಿ ಬರೀಕೈಯಲ್ಲಿ ಹೋಗಬೇಕೆನ್ನುವಷ್ಟರಲ್ಲಿ ಕರೆಂಟ್ ಬರುವುದು... ಫ್ಯಾನ್ ತಿರುಗುವುದು" ಈ ರೀಲ್ಸ್ ನೆನಪಾಯ್ತ.
ಒಂದು ಹತ್ತು ನಿಮಿಷ ತಾಳ್ಮೆಯಿಂದ ಈ ಸಿನಿಮಾವನ್ನು ನೋಡಲು ನೀವು ಕುಳಿತರೆ ಖಂಡಿತವಾಗಿಯೂ ಸಿನಿಮಾ ಮುಗಿಯುವ ತನಕ ನೀವು ಎದ್ದೇಳುವುದು ಕಷ್ಟ.