logo
ಕನ್ನಡ ಸುದ್ದಿ  /  ಮನರಂಜನೆ  /  Parameshwar Gundkal: ಕಲರ್ಸ್‌ ಕನ್ನಡದಿಂದ ಹೊರ ಬಂದ ಪರಮೇಶ್ವರ ಗುಂಡ್ಕಲ್‌ ಈಗ ಮತ್ತೊಂದು ಸಂಸ್ಥೆಯ ಬ್ಯುಸ್ನೆಸ್‌ ಹೆಡ್‌

Parameshwar Gundkal: ಕಲರ್ಸ್‌ ಕನ್ನಡದಿಂದ ಹೊರ ಬಂದ ಪರಮೇಶ್ವರ ಗುಂಡ್ಕಲ್‌ ಈಗ ಮತ್ತೊಂದು ಸಂಸ್ಥೆಯ ಬ್ಯುಸ್ನೆಸ್‌ ಹೆಡ್‌

Rakshitha Sowmya HT Kannada

Apr 06, 2023 10:28 AM IST

google News

ಕಲರ್ಸ್‌ ಕನ್ನಡದಿಂದ ಹೊರ ಬಂದ ಪರಮೇಶ್ವರ ಗುಂಡ್ಕಲ್

    • ಟಿವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೆಯದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ.
ಕಲರ್ಸ್‌ ಕನ್ನಡದಿಂದ ಹೊರ ಬಂದ ಪರಮೇಶ್ವರ ಗುಂಡ್ಕಲ್
ಕಲರ್ಸ್‌ ಕನ್ನಡದಿಂದ ಹೊರ ಬಂದ ಪರಮೇಶ್ವರ ಗುಂಡ್ಕಲ್ (‌PC: Parameshwar Gundkal )

ಬಿಗ್‌ಬಾಸ್‌ ಆರಂಭವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಲರ್ಸ್‌ ಕನ್ನಡ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಚಾರವಾಗಿ ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ಕಲರ್ಸ್‌ ಕನ್ನಡದಿಂದ ಹೊರಬಂದ ನಂತರ ಪರಮೇಶ್ವರ್‌ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಕಾಡಿತ್ತು.

ಕಲರ್ಸ್‌ ಕನ್ನಡದಲ್ಲಿ ಅನೇಕ ಕಾರ್ಯಕ್ರಮಗಳು ಕಿರುತೆರೆಪ್ರಿಯರ ಮೆಚ್ಚುಗೆ ಗಳಿಸಿವೆ. ಆ ಯಶಸ್ಸಿನ ಹಿಂದೆ ಪರಮೇಶ್ವರ್‌ ಅವರ ಕೊಡುಗೆ ಸಾಕಷ್ಟಿದೆ. ಆದರೆ ಒಂದೊಳ್ಳೆ ಸ್ಥಾನದಲ್ಲಿದ್ದರೂ ಪರಮೇಶ್ವರ್‌ ಕಲರ್ಸ್‌ ಕನ್ನಡದಿಂದ ಹೊರಬಂದಿದ್ದರು. ಆದರೆ ಇದೀಗ ಅವರು ಜಿಯೋ ಸ್ಟುಡಿಯೋಸ್‌ನ ಬ್ಯುಸ್ನೆಸ್‌ ಹೆಡ್‌ ಆಗಿ ನೇಮಕವಾಗಿದ್ಧಾರೆ ಎನ್ನಲಾಗುತ್ತಿದೆ. ಜಿಯೋ ಸ್ಟುಡಿಯೋಸ್ ಈಗ ಕನ್ನಡದಲ್ಲಿ ಸಿನಿಮಾ, ವೆಬ್‌ಸೀರಿಸ್‌ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಇದರ ನೇತೃತ್ವ ವಹಿಸಲು ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿತ್ತು. ಇದೀಗ ಪರಮೇಶ್ವರ್‌ ಗುಂಡ್ಕಲ್‌ ಅವರನ್ನೇ ಆ ಸ್ಥಾನಕ್ಕೆ ಕರೆತರಲಾಗಿದೆ ಎಂಬ ಮಾತು ಕೇಳಿಬಂದಿದೆ. ಪರಮೇಶ್ವರ್‌ ಗುಂಡ್ಕಲ್‌ ಈ ಸುದ್ದಿಯನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

ಪರಮೇಶ್ವರ್‌ ಸಂದೇಶದಲ್ಲೇನಿದೆ..?

ಕಲರ್ಸ್‌ ಕನ್ನಡದ ಜೊತೆಗಿನ ತಮ್ಮ ಅನುಬಂಧದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಪರಮೇಶ್ವರ್‌ ಗುಂಡ್ಕಲ್‌, ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರ್‌ಟೈನ್ಮೆಂಟ್‌ ಆಗಿತ್ತು.

ಈ ಟಿವಿಯಂಥ ಎಂಟರ್‌ಟೈನ್ಮೆಂಟ್‌ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್‍ ಟಿವಿ ಬಿಡಿ, ಇನ್ನೂ ಟಿವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತಾ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್‍ ಕಲರ್‍ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟಿವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್ 18. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮಿ ಬಾರಮ್ಮ, ರಾಧಾರಮಣ, ಕನ್ನಡತಿ, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್‍, ಸೂಪರ್‍ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ರೀತಿಯ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್‍ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲಾ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು!

ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ. ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

ಇವತ್ತು ಬೆಳಿಗ್ಗೆಯಿಂದ ಟಿವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೆಯದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್ 18. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ