Amala Paul: ಮೊದಲ ಮದುವೆಯಿಂದ ಹೊರ ಬಂದಿದ್ದ 'ಹೆಬ್ಬುಲಿ' ನಟಿಗೆ ಬಾಯ್ ಫ್ರೆಂಡ್ನಿಂದ್ಲೂ ಕಿರುಕುಳ..ಅರೆಸ್ಟ್
Aug 30, 2022 09:07 PM IST
ಬಾಯ್ ಫ್ರೆಂಡ್ ವಿರುದ್ಧ ದೂರು ದಾಖಲಿಸಿದ ನಟಿ ಅಮಲಾ ಪೌಲ್
- ಭವಿಂದರ್ ಸ್ನೇಹಿತರು ಕೂಡಾ ನನಗೆ ಕರೆ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಮಲಾ ಪೌಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿದ್ದ ಭವಿಂದರ್ ಸಿಂಗ್ನನ್ನು ಅರೆಸ್ಟ್ ಮಾಡಿದ್ದಾರೆ.
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದ ಅಮಲಾ ಪೌಲ್ ಸಿನಿಪ್ರಿಯರಿಗೆ ಬಹಳ ಪರಿಚಿತ. ನಟಿಸಿದ್ದು ಒಂದೇ ಕನ್ನಡ ಸಿನಿಮಾದಲ್ಲಾದರೂ ಆಕೆಗೆ ಕರ್ನಾಟಕದಲ್ಲಿ ಕೂಡಾ ಸಾಕಷ್ಟು ಅಭಿಮಾನಿಗಳಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಅಮಲಾ ಗುರುತಿಸಿಕೊಂಡಿದ್ದಾರೆ.
ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಕಂಡಿರುವ ಅಮಲಾ ಪೌಲ್, ವೈಯಕ್ತಿಕ ಜೀವನದಲ್ಲಿ ಬಹಳ ನೊಂದಿದ್ದಾರೆ. ತಮಿಳು ನಿರ್ದೇಶಕ ಎ.ಎಲ್ ವಿಜಯ್ ಕೈ ಹಿಡಿದಿದ್ದ ಅಮಲಾ ಪೌಲ್ ಕೆಲವೇ ದಿನಗಳಲ್ಲಿ ಆ ಮದುವೆಯಿಂದ ಹೊರ ಬಂದಿದ್ದರು. ನಂತರ ಭವಿಂದರ್ ಸಿಂಗ್ ಎಂಬಾತನ ಪರಿಚಯವಾಗಿತ್ತು. ಅಮಲಾ ಪೌಲ್, ಭವಿಂದರ್ ಸಿಂಗ್ನನ್ನು ಕೂಡಾ ಮದುವೆಯಾಗಿದ್ದಾರೆ ಎನ್ನಲಾದರೂ ಆಕೆ ಮಾತ್ರ ಅದನ್ನು ನಿರಾಕರಿಸಿದ್ದರು. ಕೆಲವು ದಿನಗಳ ನಂತರ ಆಕೆ, ಭವಿಂದರ್ನಿಂದ ಕೂಡಾ ದೂರಾಗಿದ್ದರು. ಇದೀಗ ಅಮಲಾ ಪೌಲ್, ಮಾಜಿ ಗೆಳೆಯನ ವಿರುದ್ಧ ತಮಿಳುನಾಡಿನ ವಿಲ್ಲುಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭವಿಂದರ್ ಸಿಂಗ್ನಿಂದ ಬಹಳ ದಿನಗಳಿಂದ ನಾನು ದೂರ ಇದ್ದೇನೆ. ಇಷ್ಟಾದರೂ ಆತ ನನಗೆ ಕಿರುಕುಳ ನೀಡುತ್ತಿದ್ದಾನೆ. ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ. ಹಣ ನೀಡದಿದ್ದಲ್ಲಿ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಹೆದರಿಸುತ್ತಿದ್ದಾನೆ. ಭವಿಂದರ್ ಸ್ನೇಹಿತರು ಕೂಡಾ ನನಗೆ ಕರೆ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಮಲಾ ಪೌಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿದ್ದ ಭವಿಂದರ್ ಸಿಂಗ್ನನ್ನು ಅರೆಸ್ಟ್ ಮಾಡಿದ್ದಾರೆ.
ಕಿಸ್ಸಿಂಗ್ ದೃಶ್ಯಕ್ಕೆ ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ್ದ ಅಮಲಾ ಪೌಲ್
2016 ರಲ್ಲಿ ಬಿಡುಗಡೆಯಾದ 'ಹೆಬ್ಬುಲಿ'ಚಿತ್ರದಲ್ಲಿ ಅಮಲಾ ಪೌಲ್ ಸುದೀಪ್ಗೆ ನಾಯಕಿಯಾಗಿ ನಟಿಸಿದ್ದರು. 'ಆಮೆ' ಸೇರಿದಂತೆ ಅಮಲಾ ಕೆಲವೊಂದು ಸಿನಿಮಾಗಳಲ್ಲಿ ಬಹಳ ಬೋಲ್ಡ್ ಆಗಿ ನಟಿಸಿದ್ದಾರೆ. ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ 'ದಿ ಗೋಸ್ಟ್' ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಚಿತ್ರದಲ್ಲಿ ನಟಿಸಲು ಮೊದಲು ಕಾಜಲ್ ಅಗರ್ ವಾಲ್ ಆಯ್ಕೆಯಾಗಿದ್ದರು. ಆದರೆ ಕಾಜಲ್ ಈ ಚಿತ್ರದಿಂದ ಹಿಂದೆ ಸರಿದಿದ್ದು ಆಕೆ ಗರ್ಭಿಣಿ ಎಂಬ ಮಾತು ಕೇಳಿ ಬರುತ್ತಿದೆ. ನಂತರ ಕಾಜಲ್ ಅಗರ್ ವಾಲ್ ಜಾಗಕ್ಕೆ ಅಮಲಾ ಪೌಲ್ ಕರೆ ತರಲಾಗಿತ್ತು.
ಈ ಚಿತ್ರದಲ್ಲಿ ಕೆಲವೊಂದು ಹಾಟ್ ದೃಶ್ಯಗಳು ಇದ್ದು ಅಮಲಾ ಪೌಲ್, ನಾಗಾರ್ಜುನಗೆ ಕಿಸ್ ಮಾಡಲು ನಿರ್ಮಾಪಕರ ಬಳಿ ದೊಡ್ಡ ಮೊತ್ತದ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದರಂತೆ. ಆದರೆ ಅಷ್ಟು ದೊಡ್ಡ ಮೊತ್ತದ ಹಣ ನೀಡಲಾಗದೆ ನಿರ್ಮಾಪಕರು ಅಮಲಾ ಅವರನ್ನು ಚಿತ್ರದಿಂದ ಕೈ ಬಿಟ್ಟಿದ್ದರು. ಅಮಲಾ ಪೌಲ್ ಸಿನಿಮಾದಲ್ಲಿ ನಟಿಸುವ ಸಂಭಾವನೆ ಜೊತೆಗೆ ಆ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಹಣ ಬೇಡಿಕೆ ಇಟ್ಟಿರುವುದು ನಿರ್ಮಾಪಕರಿಗೆ ಹೊರೆಯಾದ ಕಾರಣ ನಿರ್ಮಾಪಕರು ಆಕೆಯನ್ನು ನಿರಾಕರಿಸಿದ್ದರು. ಸದ್ಯಕ್ಕೆ ಅಮಲಾ ಪೌಲ್ ಮಲಯಾಳಂನ ಟೀಚರ್, ಕ್ರಿಸ್ಟೋಫರ್ ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.