Puneeth Rajkumar Fans: ಅಪ್ಪು ಮಾಲೆ ಧರಿಸಿ ವ್ರತ ಆಚರಿಸಲು ಮುಂದಾದ ಅಭಿಮಾನಿಗಳು... ನೆಟಿಜನ್ಸ್ ಹೇಳಿದ್ದೇನು?
Feb 22, 2023 07:34 AM IST
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕರಪತ್ರ
- ಕಳೆದ ಬಾರಿ ಕೆಲವು ಅಭಿಮಾನಿಗಳು ಮಾಲೆ ಧರಿಸಿದ್ದಾಗ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನು ಹಿಡಿದು ಶಬರಿಮಲೆ ಬೆಟ್ಟ ಹತ್ತಿ, ದೇವರ ದರ್ಶನ ಪಡೆದು ಬಂದಿದ್ದರು. ಇದೀಗ ಅಪ್ಪು ಅವರ ನೆನಪಿನಲ್ಲಿ ಕೆಲವು ಅಭಿಮಾನಿಗಳು ಅಪ್ಪು ಮಾಲೆ ಧರಿಸಿ ವ್ರತ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಅಪ್ಪು ಅಭಿಮಾನಿ ಸಿದ್ದಾರ್ಥ್ ಸಿಂಗ್ ಎನ್ನುವವರ ಹೆಸರಿನಲ್ಲಿರುವ ಕರಪತ್ರದ ಪ್ರತಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ಮುಂದಿನ ತಿಂಗಳು 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅಪ್ಪು ಬರ್ತ್‌ಡೇ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪುನೀತ್ ಅಗಲಿದಾಗಿನಿಂದ ಅವರನ್ನು ನೆನೆಯದ ದಿನಗಳೇ ಇಲ್ಲ. ಇದೀಗ ಪುನೀತ್ ಅವರ ಹೆಸರಿನಲ್ಲಿ ಅಭಿಮಾನಿಗಳು ಮಾಲೆ ಧರಿಸಿ ವ್ರತ ಆಚರಿಸಲು ಮುಂದಾಗಿದ್ದಾರೆ.
ಪುನೀತ್ ರಾಜ್‌ಕುಮಾರ್, ಮಾಲೆ ಧರಿಸಿ ಅನೇಕ ಬಾರಿ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದರು. ಶಿವರಾಜ್‌ಕುಮಾರ್ , ನೆನಪಿರಲಿ ಪ್ರೇಮ್, ಹಿರಿಯ ನಟ ದಿವಂಗತ ಶಿವರಾಂ ಸೇರಿದಂತೆ ಅನೇಕರೊಂದಿಗೆ ಅವರು ಶಬರಿಮಲೆಗೆ ಹೋಗಿದ್ದ ಫೋಟೋಗಳನ್ನು ನಾವು ನೋಡಿದ್ದೇವೆ. ಬಹುಶ: ಅವರು ಇದ್ದಿದ್ದರೆ ಈ ಬಾರಿ ಕೂಡಾ ಮಾಲೆ ಧರಿಸುತ್ತಿದ್ದರೇನೋ. ಅಭಿಮಾನಿಗಳು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಕಳೆದ ಬಾರಿ ಕೆಲವು ಅಭಿಮಾನಿಗಳು ಮಾಲೆ ಧರಿಸಿದ್ದಾಗ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನು ಹಿಡಿದು ಶಬರಿಮಲೆ ಬೆಟ್ಟ ಹತ್ತಿ, ದೇವರ ದರ್ಶನ ಪಡೆದು ಬಂದಿದ್ದರು. ಇದೀಗ ಅಪ್ಪು ಅವರ ನೆನಪಿನಲ್ಲಿ ಕೆಲವು ಅಭಿಮಾನಿಗಳು ಅಪ್ಪು ಮಾಲೆ ಧರಿಸಿ ವ್ರತ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಅಪ್ಪು ಅಭಿಮಾನಿ ಸಿದ್ದಾರ್ಥ್ ಸಿಂಗ್ ಎನ್ನುವವರ ಹೆಸರಿನಲ್ಲಿರುವ ಕರಪತ್ರದ ಪ್ರತಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕರಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಮಾರ್ಚ್ 1 ರಿಂದ ಅಪ್ಪು ಹುಟ್ಟುಹಬ್ಬದ ದಿನದವರೆಗೆ ( ಮಾ.17) ಅಪ್ಪು ಅಭಿಮಾನಿಗಳು ಮಾಲೆ ಧರಿಸಿ, ವ್ರತ ಆಚರಿಸಿ ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾರ್ಚ್ 18 ರಂದು ಅವರ ಪುಣ್ಯಭೂಮಿಗೆ ತೆರಳಿ ದರ್ಶನ ಪಡೆಯುವುದು. ನಂತರ ಅಲ್ಲಿಂದ ವಾಪಸಾಗಿ ಹಂಪಿ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ವಿರೂಪಾಕ್ಷೇಶ್ವರ ಸ್ವಾಮಿಯ ಪೂಜೆ ಮಾಡಿ ಮಾಲೆ ವಿಸರ್ಜನೆ ಮಾಡುವಂತೆ ಕರಪತ್ರದಲ್ಲಿ ಸೂಚಿಸಲಾಗಿದೆ. ಇದರೊಂದಿಗೆ ಮಾಲೆ ಧರಿಸಿದ ನಂತರ ಅನುಸರಿಸಬೇಕಾದ ನೀತಿ, ನಿಯಮಗಳ ಬಗ್ಗೆ ಕೂಡಾ ತಿಳಿಸಲಾಗಿದೆ.
ಪುನೀತ್ ರಾಜ್‌ಕುಮಾರ್ ಅವರದ್ದು, ಯುವಜನತೆಗೆ ಮಾತ್ರವಲ್ಲ, ಪುಟ್ಟ ಮಕ್ಕಳು ಹಾಗೂ ವಯೋವೃದ್ಧರು ಕೂಡಾ ಬಹಳ ಇಷ್ಟಪಡುತ್ತಿದ್ದ ವ್ಯಕ್ತಿತ್ವ. ಅವರ ನಗು, ಸರಳತೆ, ಸಹಾಯ ಮನೋಭಾವ ಎಲ್ಲರಿಗೂ ಬಹಳ ಇಷ್ಟ. ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದವರು ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ಅಪ್ಪು ಇದ್ದಾಗ ಅವರನ್ನು ದೇವರಂತೆ ಆರಾಧಿಸುತ್ತಿದ್ದ ಜನರು ಈಗ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಅಭಿಮಾನಿಗಳು ಅವರ ಫೋಟೋವನ್ನು ದೇವರಕೋಣೆಯಲ್ಲಿರಿಸಿ ಪೂಜೆ ಮಾಡುತ್ತಿದ್ದಾರೆ. ಇದೀಗ ಬಳ್ಳಾರಿ ಅಭಿಮಾನಿಗಳು ಅವರ ಹೆಸರಿನಲ್ಲಿ ಮಾಲೆ ಧರಿಸಿ ವ್ರತ ಆಚರಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೆಟಿಜನ್ಸ್, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು-ಮೈಸೂರು ಔಟರ್ ರಿಂಗ್ ರೋಡ್‌ಗೆ ಪುನೀತ್ ರಾಜಕುಮಾರ್ ಹೆಸರು
ಪುನೀತ್ ರಾಜ್‌ಕುಮಾರ್ ನಿಧನರಾದಾಗ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದ ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರು-ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆವರೆಗಿನ 12 ಕಿ.ಮೀ. ಉದ್ದದ ಔಟರ್ ರಿಂಗ್ ರೋಡ್‌ಗೆ ಪುನೀತ್ ರಾಜಕುಮಾರ್ ಹೆಸರನ್ನು ಇಟ್ಟು ಗೌರವ ಸಲ್ಲಿಸಿತ್ತು. ಸರ್ಕಾರದ ಕಾರ್ಯಕ್ಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡಾ ಟ್ವೀಟ್ ಮೂಲಕ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದರು.