Kabzaa 2 Poster: ಹಿಂದಿನ ತಪ್ಪನ್ನು ಸರಿಪಡಿಸಿಕೊಂಡು 'ಕಬ್ಜ-2' ಮಾಡುತ್ತಿದ್ದೇನೆ.. ಸೀಕ್ವೆಲ್ ಪೋಸ್ಟರ್ ರಿಲೀಸ್ ಮಾಡಿದ ಆರ್. ಚಂದ್ರು
Apr 14, 2023 08:16 PM IST
'ಕಬ್ಜ-2' ಪೋಸ್ಟರ್ ರಿಲೀಸ್
- ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಮುಂದಿನ ದಿನಗಳಲ್ಲಿ ಕೂಡಾ ಇದೇ ರೀತಿ ಇರಲಿ. ದಾರಿ ಗೊತ್ತಾಗಿದೆ. ಮೊದಲ ಚಿತ್ರದಲ್ಲಿ ಏನೇನು ತಪ್ಪು ಇತ್ತೋ ಎಲ್ಲವನ್ನೂ ಸರಿ ಮಾಡಿಕೊಂಡು 'ಕಬ್ಜ 2' ಮಾಡುತ್ತೇನೆ.
ಆರ್. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ 'ಕಬ್ಜ' ಸಿನಿಮಾ ಮಾರ್ಚ್ 17 ರಂದು ತೆರೆ ಕಂಡಿತ್ತು. ಈಗ ಸಿನಿಮಾ 25 ದಿನಗಳನ್ನು ಪೂರೈಸಿದೆ. ಚಿತ್ರಕ್ಕೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ನಡುವೆ ನಿರ್ದೇಶಕ ಆರ್. ಚಂದ್ರು 'ಕಬ್ಜ' ಚಿತ್ರದ ಸೀಕ್ವೆಲ್ ಘೋಷಣೆ ಮಾಡಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್ರು 'ಕಬ್ಜ' ಸೀಕ್ವೆಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ರಿಲೀಸ್ ನಂತರ ಮಾತನಾಡಿದ ಅವರು ಈ ಗೆಲುವು ನಿಮ್ಮದು, ಹಾಗೇ ಇದು ನನ್ನೊಬ್ಬನ ಸಿನಿಮಾ ಅಲ್ಲ, ನನ್ನ ಜೊತೆ ಕೆಲಸ ಮಾಡಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲು ಈ ಕಾರ್ಯಕ್ರಮ ಏರ್ಪಡಿಸಿದ್ದೇನೆ. ಸತ್ಯದ ದಾರಿಯಲ್ಲಿ ನಡೆದರೆ ಖಂಡಿತ ದೇವರು ಕೈ ಹಿಡಿಯುತ್ತಾನೆ. ಈ ಚಿತ್ರಕ್ಕೆ ನನಗೆ ಪ್ರೇರಣೆ ಆಗಿದ್ದು ಶಕ್ತಿ, ಬೆನ್ನುಲುಬು, ಪ್ರೇರಣೆ ಎಲ್ಲವೂ ತಂದೆ ಸಮಾನರಾದ ರಾಮಚಂದ್ರಗೌಡರು. ಅವರನ್ನು ನಾನು ಸದಾ ನೆನೆಯುತ್ತೇನೆ'' ಎಂದರು.
''ನನ್ನ ಮುಂದಿನ ಹೆಜ್ಜೆಗೆ ಶುಭ ಹಾರೈಸಿದ ಗಣ್ಯರಿಗೆ, ಪತ್ರಕರ್ತರಿಗೆ, ಸಿನಿಪ್ರಿಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಮುಂದಿನ ದಿನಗಳಲ್ಲಿ ಕೂಡಾ ಇದೇ ರೀತಿ ಇರಲಿ. ದಾರಿ ಗೊತ್ತಾಗಿದೆ. ಮೊದಲ ಚಿತ್ರದಲ್ಲಿ ಏನೇನು ತಪ್ಪು ಇತ್ತೋ ಎಲ್ಲವನ್ನೂ ಸರಿ ಮಾಡಿಕೊಂಡು 'ಕಬ್ಜ 2' ಮಾಡುತ್ತೇನೆ. ಸುಮಾರು 35 ದೇಶಗಳಲ್ಲಿ ಕಬ್ಜ ರಿಲೀಸ್ ಮಾಡಿದ್ದೆ. ಸೀಕ್ವೆಲನ್ನು ಇನ್ನೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿ ಇರಲಿ. ಹಾಗೇ ಯೂಟ್ಯೂಬರ್ಸ್‌ಗಳು ನಮ್ಮ ಚಿತ್ರಕ್ಕೆ ಬಹಳ ಸಪೋರ್ಟ್ ಮಾಡಿದ್ದೀರಿ, ಎಲ್ಲರಿಗೂ ಧನ್ಯವಾದಗಳು ಎಂದು ಆರ್. ಚಂದ್ರು ಚಿತ್ರವನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಆಕರ್ಷಕ ಪೋಸ್ಟರ್
'ಕಬ್ಜ-2' ಪೋಸ್ಟರನ್ನು ಆರ್. ಚಂದ್ರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮರದ ಖಾಲಿ ಚೇರ್‌ಗೆ ಬಂದೂಕನ್ನು ಒರಗಿಸಿಟ್ಟಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಸಿನಿಪ್ರಿಯರು 'ಕಬ್ಜ-2' ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಮೊದಲ ದಿನ 55 ಕೋಟಿ ಗಳಿಸಿದ್ದ ಸಿನಿಮಾ
ಕನ್ನಡದೊಂದಿಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ 'ಕಬ್ಜ' ಸಿನಿಮಾ ಮೊದಲ ದಿನವೇ ಎಲ್ಲಾ ಭಾಷೆಗಳಲ್ಲಿ ಉತ್ತಮ ಲಾಭ ಮಾಡಿದೆ. ಕೇವಲ ರಾಜ್ಯ, ರಾಷ್ಟ್ರದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡಾ 'ಕಬ್ಜ' ಕಮಾಲ್ ಮಾಡಿದೆ. ಒಂದೊಂದೇ ಭಾಷೆಯಲ್ಲಿ ಈ ಸಿನಿಮಾ ಗಳಿಕೆ ಎಷ್ಟು ಎಂಬುದನ್ನು ನೋಡುವುದಾದರೆ, ಕನ್ನಡದಲ್ಲಿ ಈ ಸಿನಿಮಾ ಶುಕ್ರವಾರ 20 ಕೋಟಿ ರೂ ಗಳಿಸಿದರೆ, ಹಿಂದಿಯಲ್ಲಿ 12 ಕೋಟಿ ರೂ. ಬಾಚಿಕೊಂಡಿದೆ. ತೆಲುಗಿನಲ್ಲಿ 7 ಕೋಟಿ ರೂ. ಮತ್ತು ತಮಿಳಿನಲ್ಲಿ 5 ಕೋಟಿ. ರೂ ಬೊಕ್ಕಸಕ್ಕೆ ಹಾಕಿಕೊಂಡರೆ, ಮಲಯಾಳಂನಲ್ಲಿ 3 ಕೋಟಿ ರೂ. ಕಮಾಯಿ ಮಾಡಿದೆ. ವಿದೇಶದಲ್ಲಿ 8 ಕೋಟಿ ಕಲೆಕ್ಷನ್ ಮಾಡಿತ್ತು.
ಕಬ್ಜ ಮೆಚ್ಚಿದ್ದ ಟಾಲಿವುಡ್ ನಟ ಪವನ್ ಕಲ್ಯಾಣ್
ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಕೂಡಾ 'ಕಬ್ಜ' ಸಿನಿಮಾ ನೋಡಿ ಮೆಚ್ಚಿದ್ದರು. 'ಕಬ್ಜ' ಆಡಿಯೋ ಲಾಂಚ್ ವೇಳೆ ಪವನ್ ಕಲ್ಯಾಣ್ ಆರ್. ಚಂದ್ರು ಅವರಿಗೆ ಪತ್ರ ಬರೆದು ವಿಶ್ ಮಾಡಿದ್ದು, ನಂತರ 'ಕಬ್ಜ' ಮೇಕಿಂಗ್ ನೋಡಿ ಕೂಡಾ ಮೆಚ್ಚಿಕೊಂಡಿದ್ದರು. ಚಿತ್ರದ ಮೊದಲಾರ್ಧ ಬಾಲಿವುಡ್ ರೀತಿ ಇದ್ರೆ ನಂತರ ಹಾಲಿವುಡ್ ರೀತಿ ಇದೆ. ಇದೊಂದು ಅಮೇಜಿಂಗ್ ಸಿನಿಮಾ ಎಂದು ಪವನ್ ಕಲ್ಯಾಣ್, ಆರ್.ಚಂದ್ರು ಹಾಗೂ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದರು.