Dasara Teaser out: 'ದಸರಾ' ಟೀಸರ್ ರಿಲೀಸ್ ಮಾಡಿದ ರಾಜಮೌಳಿ, ರಕ್ಷಿತ್ ಶೆಟ್ಟಿ...ಕಾಂತಾರ, ಕೆಜಿಎಫ್ ನಂತರ ನಮ್ಮ ಸಿನಿಮಾನೇ ಎಂದ ನಾನಿ
Jan 30, 2023 08:02 PM IST
'ದಸರಾ' ಟೀಸರ್ ಬಿಡುಗಡೆಗೊಳಿಸಿದ ರಾಜಮೌಳಿ, ರಕ್ಷಿತ್ ಶೆಟ್ಟಿ
- ನಾಡಹಬ್ಬ ದಸರಾದಲ್ಲಿ ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಎಂಬರ್ಥದಲ್ಲಿ ಎಲ್ಲೆಡೆ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ದಸರಾ ಟೀಸರ್ ಆರಂಭದಲ್ಲೇ ರಾವಣನ ಮೂರ್ತಿಯನ್ನು ತೋರಿಸಲಾಗಿದೆ. ಈ ಸಿನಿಮಾ ಟೀಸರ್ ಕೂಡಾ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಅನ್ನೋದು ತಿಳಿಯುತ್ತಿದೆ.
ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ದಸರಾ' ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಈ ಟೀಸರನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.
ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ತೆಲುಗು ಟೀಸರನ್ನು ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಶಾಹೀದ್ ಕಪೂರ್, ತಮಿಳಿನಲ್ಲಿ ಧನುಷ್ ಹಾಗೂ ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ದಸರಾ ಸಿನಿಮಾಗೆ ಶುಭ ಹಾರೈಸಿದ್ದಾರೆ. ರಕ್ಷಿತ್ ಶೆಟ್ಟಿ ಸೇರಿದಂತೆ ಟೀಸರ್ ಬಿಡುಗಡೆ ಮಾಡಿದ ಎಲ್ಲರಿಗೂ ಚಿತ್ರತಂಡ ಶುಭ ಕೋರಿದೆ. ಸಿನಿಮಾ ಟೀಸರ್ ಸಖತ್ ಮಾಸ್ ಆಗಿದೆ. ನಾನಿ ಈ ಚಿತ್ರದಲ್ಲಿ ಹಿಂದೆಂದೂ ಮಾಡಿರದ ಅವತಾರ, ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಚುರಲ್ ಸ್ಟಾರ್ ರಗಡ್ ಲುಕ್ ಹಾಗೂ ಆಕ್ಟಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ನಾಡಹಬ್ಬ ದಸರಾದಲ್ಲಿ ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಎಂಬರ್ಥದಲ್ಲಿ ಎಲ್ಲೆಡೆ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ದಸರಾ ಟೀಸರ್ ಆರಂಭದಲ್ಲೇ ರಾವಣನ ಮೂರ್ತಿಯನ್ನು ತೋರಿಸಲಾಗಿದೆ. ಈ ಸಿನಿಮಾ ಟೀಸರ್ ಕೂಡಾ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಅನ್ನೋದು ತಿಳಿಯುತ್ತಿದೆ. ಗೋದಾವರಿ ತೀರದ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ಝಲಕ್‌ನಲ್ಲಿ ಅನಾವರಣ ಮಾಡಲಾಗಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡಾ ನೋಡುಗರನ್ನು ಕಿಕ್ಕೇರಿಸಿದೆ. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ನಾನಿ, ''ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಈ ಸಮಯದಲ್ಲಿ ನಿಮಗೊಂದು ವಿಚಾರ ಹೇಳಬೇಕು. ಮಾರ್ಚ್ 30 ರಂದು ನೀವೆಲ್ಲರೂ ಥಿಯೇಟರ್‌ನಿಂದ ಹೊರ ಬಂದು 'ದಸರಾ' ಸಿನಿಮಾ ಬಗ್ಗೆಯೇ ಮಾತನಾಡುತ್ತೀರಿ. ಅದೊಂದು ವಿಚಾರ ಬಿಟ್ಟು ಬೇರೇನೂ ಇರುವುದಿಲ್ಲ. ಚಿತ್ರರಂಗಕ್ಕೆ ಬಂದಾಗಿನಿಂದ ತೆಲುಗು ಚಿತ್ರಂಗಕ್ಕೆ ನನ್ನ ಕೊಡುಗೆ ಏನು ಎಂದು ಯೋಚಿಸುತ್ತಿದ್ದೆ. ಆದರೆ ಈಗ ನಾನು 'ದಸರಾ' ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕಳೆದ ವರ್ಷ ತೆಲುಗಿನಲ್ಲಿ ಆರ್‌ಆರ್‌ಆರ್, ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಸೇರಲಿದೆ'' ಎಂದು ತಮ್ಮ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
ನಾನಿ ಹಾಗೂ ಕೀರ್ತಿ ಸುರೇಶ್ ಜೋಡಿಯಾಗಿರುವ 'ದಸರಾ' ಚಿತ್ರವನ್ನು ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ, ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಇದೆ. ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರದ ಹಾಡುಗಳಿಗೆ ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ.