OTT play Change Makers 2023: ರಿಷಬ್ ಶೆಟ್ಟಿಗೆ ಒಲಿದ 'ಒಟಿಟಿ ಗೇಮ್‌ಚೇಂಜರ್ ಆಫ್ ದಿ ಇಯರ್' ಪ್ರಶಸ್ತಿ!
Mar 27, 2023 11:35 AM IST
ನಟ, ನಿರ್ದೇಶಕ ರಿಷಬ್ ಶೆಟ್ಟಿ
ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಒಟಿಟಿ ಪ್ಲೇ ತನ್ನ ಮೊದಲ ಆವೃತ್ತಿಯಲ್ಲಿ ಚೇಂಜ್ ಮೇಕರ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಜೊತೆ ಇತರ 40 ಮಂದಿ ಸಿನಿಮಾ ಸಾಧಕರನ್ನು ಗೌರವಿಸಲಾಗಿದೆ.
2022, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ವೃತ್ತಿ ಬದುಕನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ವರ್ಷ. 'ಕಾಂತಾರ' ಸಿನಿಮಾ ಬಿಡುಗಡೆಗೂ ಮುನ್ನ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಸಿನಿಮಾಗಿ ಅನೇಕ ಪ್ರಶಸ್ತಿ, ಪ್ರಶಂಸೆ ಪಡೆದಿರುವ ರಿಷಬ್ ಶೆಟ್ಟಿ ಈಗ 'ಒಟಿಟಿ ಗೇಮ್‌ಚೇಂಜರ್ ಆಫ್ ದಿ ಇಯರ್' ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಗ್ರೂಪ್‌ನ ಸೋದರ ಸಂಸ್ಥೆಯಾಗಿರುವ OTTPlay ಆಯೋಜಿಸಿದ್ದ ಒಟಿಟಿ ಪ್ಲೇ ಚೇಂಜ್‌ಮೇಕರ್ ಅವಾರ್ಡ್, ಮಾರ್ಚ್ 26 ಸಂಜೆ, ಮುಂಬೈನ ಜುಹುವಿನ ಪ್ರತಿಷ್ಠಿತ JW ಮ್ಯಾರಿಯೇಟ್ ಹಾಲ್‌ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. OTTPlay ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿಷಬ್ ಶೆಟ್ಟಿಗೆ ಈ ಪ್ರಶಸ್ತಿ ದೊರೆತಿರುವ ವಿಚಾರವನ್ನು ಹಂಚಿಕೊಂಡಿದೆ. ರಿಷಬ್ ಶೆಟ್ಟಿಗೆ ಸಂದಿರುವ ಗೌರವ ಕನ್ನಡಿಗರಿಗೆ ಮತ್ತಷ್ಟು ಖುಷಿ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ರಿಷಬ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿಶೇಷ ಎಂದರೆ ಈ OTTPlay ಪ್ರಶಸ್ತಿ ಸಮಾರಂಭಕ್ಕೆ ಕೂಡಾ ರಿಷಬ್, ಬಿಳಿ ಷರ್ಟ್, ಪಂಚೆ ಧರಿಸಿ ಭಾಗವಹಿಸಿದ್ದರು.
ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಒಟಿಟಿ ಪ್ಲೇ ತನ್ನ ಮೊದಲ ಆವೃತ್ತಿಯಲ್ಲಿ ಚೇಂಜ್ ಮೇಕರ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಜೊತೆ ಇತರ 40 ಮಂದಿ ಸಿನಿಮಾ ಸಾಧಕರನ್ನು ಗೌರವಿಸಲಾಗಿದೆ. ನಟ, ನಟಿಯರು ಮಾತ್ರವಲ್ಲದೆ ನಿರ್ದೇಶಕರು, ಕಂಟೆಂಟ್ ಕ್ರಿಯೇಟರ್‌ಗಳು, ತಂತ್ರಜ್ಞರು ಕೂಡಾ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಫಿಲ್ಮ್ ಮೇಕರ್ ಇನ್ ದಿ ಸ್ಪಾಟ್‌ಲೈಟ್, ಪಾತ್ ಬ್ರೇಕಿಂಗ್ ಫರ್ಫಾಮರ್, ಎಂಟರ್ಟೈರನ್ ಆಫ್ ದಿ ಡಿಕೇಡ್, ಬೆಸ್ಟ್ ವಿಎಫ್‌ಎಕ್ಸ್, ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಜ್‌ಕುಮಾರ್ ರಾವ್, ಪ್ರೊಸೆನ್‌ಜಿತ್ ಚಟರ್ಜಿ, ಅಯಾನ್ ಮುಖರ್ಜಿ, ಐಶ್ವರ್ಯ ರಾಜೇಶ್, ಜೋಜು ಜಾರ್ಜ್, ಪ್ರಿಯಾಮಣಿ, ಸಯಾನಿ ಗುಪ್ತಾ, ಗುನೀತ್ ಮೊಂಗಾ ಹಾಗೂ ಇನ್ನಿತರರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
ವಿದೇಶಿ ಭಾಷೆಗಳಿಗೂ ಡಬ್ ಆದ ‘ಕಾಂತಾರ’
ಕಳೆದ ವರ್ಷ ಸೆಪ್ಟೆಂಬರ್ 30 ರಂದು 'ಕಾಂತಾರ' ತೆರೆ ಕಂಡಿತ್ತು. ಆದರೆ ಸಿನಿಮಾಗೆ ದೊರೆತ ಪ್ರತಿಕ್ರಿಯೆ ನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿತ್ತು. ಮಾರ್ಚ್ 1 ರಂದು ಇಂಗ್ಲೀಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿತ್ತು. ಇದೀಗ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಕೂಡಾ ಡಬ್ ಆಗುತ್ತಿದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ ಸಂಸ್ಥೆ ಈ ವಿಚಾರವನ್ನು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು.
'ಕಾಂತಾರ' ಪ್ರೀಕ್ವೆಲ್‌ಗೆ ಕಥೆ ಬರೆಯಲು ಆರಂಭಿಸಿದ ರಿಷಬ್ ಶೆಟ್ಟಿ
ಯುಗಾದಿ ಹಬ್ಬದಂದು ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಸ್ಕ್ರಿಪ್ಟ್ ಬರೆಯಲು ಆರಂಭಿಸಿದ್ದಾರೆ. ಮಾರ್ಚ್ 22, ಯುಗಾದಿ ಹಬ್ಬದಂದು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ವಿಚಾರವನ್ನು ಹಂಚಿಕೊಂಡಿದ್ದರು. "ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, 'ಕಾಂತಾರ' ಚಿತ್ರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಕಾಯುತ್ತಿರಿ" ಎಂದು ಚಿತ್ರತಂಡ ಮಾಹಿತಿ ನೀಡಿತ್ತು.