Kantara Chapter 1: ಕಾಂತಾರ ಚಿತ್ರೀಕರಣಕ್ಕೆ ಬೀಳುತ್ತಾ ಬ್ರೇಕ್? ಒಂದಾದಮೇಲೊಂದು ಸಂಕಷ್ಟಕ್ಕೆ ಗುರಿಯಾಗ್ತಿದೆ ಚಿತ್ರತಂಡ
Jan 20, 2025 05:30 PM IST
ಕಾಂತಾರ ಚಿತ್ರೀಕರಣಕ್ಕೆ ಬೀಳುತ್ತಾ ಬ್ರೇಕ್?
- ರಿಷಬ್ ಶೆಟ್ಟಿ ನಿರ್ದೇಶಕನದ ಮತ್ತು ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಎಲ್ಲಾ ಸಾಧ್ಯತೆ ಇದೆ.

Kantara Chapter 1: ರಿಷಬ್ ಶೆಟ್ಟಿ ನಿರ್ದೇಶಕನದ ಮತ್ತು ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಮಾತ್ರವಲ್ಲದೆ, ದೇಶದ ಸಿನಿಮಾ ಪ್ರಿಯರ ಗಮನದಲ್ಲಿರುವ ಈ ಸಿನಿಮಾ ಚಿತ್ರೀಕರಣದ ವೇಳೆ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಈ ಕುರಿತು ವರದಿಗಳನ್ನು ಗಮನಿಸಿದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಚಿತ್ರೀಕರಣ ಸ್ಥಗಿತಗೊಳಿಸಲು ಸೂಚನೆ ನೀಡಲು ಕ್ರಮಕೈಗೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲ ಟಿಪ್ಪಣಿಯನ್ನೂ ಸಹ ಹಂಚಿಕೊಂಡಿದೆ.
ಟಿಪ್ಪಣಿಯಲ್ಲಿ ಏನಿದೆ?
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದಿ.03.01.2025 ರಿಂದ 15.01.2025 ರವರೆಗೆ ತಾತ್ಕಾಲಿಕ ಸೆಟ್ ನಿರ್ಮಾಣ ಮಾಡಿಕೊಳ್ಳಲು ಹಾಗೂ ದಿ.15.01.2025 ರಿಂದ 25.01.2025 ರವರೆಗೆ ಒಟ್ಟು 23 ದಿನ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಕಾಂತಾರಾ ತಂಡ ಕಾಡಿನಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ.
ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿತ್ರತಂಡದಿಂದ ಒಂದೊಮ್ಮೆ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ, ಸದ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಇದೇ ಶೂಟಿಂಗ್ ಸಮಯದಲ್ಲಿ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಈ ತಿಂಗಳ ಆರಂಭದಿಂದಲೂ ಇಲ್ಲಿನ ಹೆರೂರು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿನ ಗೋಮಾಳ ಜಾಗದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ, ಅರಣ್ಯ ಇಲಾಖೆಯಿಂದ ಕಾಂತಾರ ಚಿತ್ರತಂಡ ಪರವಾನಗಿ ಪಡೆದುಕೊಂಡಿದೆ. ಹೀಗಿರುವಾಗಲೇ ಶೂಟಿಂಗ್ ವೇಳೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಇತ್ತ ಅರಣ್ಯ ಭೂಮಿಗೆ ಬೆಂಕಿ ಹಚ್ಚಿದ್ದಕ್ಕೆ, ಹೆರೂರು ಗ್ರಾಮಸ್ಥರು ಚಿತ್ರತಂಡ ಮತ್ತು ಅರಣ್ಯ ಇಲಾಖೆ ನಡೆಯ ವಿರುದ್ಧ ಕೊಂಚ ಗರಂ ಆಗಿದ್ದಾರೆ.
ಕಾಂತಾರ ಚಾಪ್ಟರ್ 1ಕ್ಕೆ ಸರಣಿ ಸಂಕಷ್ಟ
ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇದೇ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ವೇಳೆ ಕೆಲ ಅವಘಡಗಳು ಸಂಭವಿಸಿದ್ದವು. ಶೂಟಿಂಗ್ ಸೆಟ್‌ನಲ್ಲಿ ಜೂನಿಯರ್ ಕಲಾವಿದರಿಗೆ ಸಂಭಾವನೆ ನೀಡದೆ, ಅವ್ಯವಸ್ಥೆಯ ವಸತಿ ಸೌಕರ್ಯದ ಜತೆಗೆ ಊಟ ನೀಡುತ್ತಿಲ್ಲ ಎಂಬ ಆರೋಪ ಹೊಂಬಾಳೆ ಫಿಲಂಸ್ ವಿರುದ್ಧ ಕೇಳಿಬಂದಿತ್ತು.
ಕಾಂತಾರ ಚಿತ್ರದ ಜೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ 20 ಜನರ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ರಿಷಬ್ ಶೆಟ್ಟಿಯ ಇದೇ ಚಿತ್ರದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿದೆ.