Geetha Shivarajkumar: ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು, ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ
Published Mar 26, 2025 09:30 AM IST
Geetha Shivarajkumar: ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು (ಸಂಗ್ರಹ ಚಿತ್ರ)
- ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರಿಗೆ ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರಿಗೆ ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಅಮೆರಿಕದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿಕೊಂಡು ಗುಣಮುಖರಾಗಿದ್ದರು. ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ಎಂದಾಗ ಅಭಿಮಾನಿಗಳು ಆತಂಕಗೊಂಡಿದ್ದರು. ಈ ಸಂದರ್ಭದಲ್ಲಿ ಪತಿಯ ಜತೆಗಿದ್ದು ಗೀತಾ ಶಿವರಾಜ್‌ಕುಮಾರ್ ಕಾಳಜಿ ವಹಿಸಿದ್ದರು. ಇದೀಗ ಗೀತಾ ಶಿವ ರಾಜ್‌ಕುಮಾರ್ ಅವರಿಗೆ ಅನಾರೋಗ್ಯ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಇದು ನರದ ಸಮಸ್ಯೆಗೆ ಸಂಬಂಧಪಟ್ಟಂತೆ ಕತ್ತಿನ ಭಾಗದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಈ ಹಿಂದೆಯೇ ಇವರು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಿತ್ತು. ಶಿವಣ್ಣನ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಲಾಗಿತ್ತು. ಈಗ ಸರ್ಜರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೀತಾ ಶಿವರಾಜ್ ಕುಮಾರ್‌ಗೆ ನಡೆದ ಶಸ್ತ್ರಚಿಕಿತ್ಸೆ ಕುರಿತು ಅವರ ಸಹೋದರ ಮಧು ಬಂಗಾರಪ್ಪ ಮಾಹಿತಿ ನೀಡಿದ್ದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅವರು ಈ ವಿವರ ನೀಡಿದ್ದರು. “ನಾನು ಈ ಕಾರ್ಯಕ್ರಮಕ್ಕೆ ಬೆಳಗ್ಗೆ ಬರಬೇಕಿತ್ತು. ಗೀತಕ್ಕನಿಗೆ ಸರ್ಜರಿ ಇತ್ತು. ಹಾಗೇ ಬರಲು ಸಾಧ್ಯವಾಗಲಿಲ್ಲ. ಈಗ ಸರ್ಜರಿ ಮುಗಿದಿದೆ. ಅವರ ಆರೋಗ್ಯ ಸುಧಾರಿಸಿದೆ” ಎಂದು ಅವರು ನಿನ್ನೆ ಮಾಹಿತಿ ನೀಡಿದ್ದರು.
ಇವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮಗಳು. ದಿವಂಗತ ಡಾ. ರಾಜ್‌ಕುಮಾರ್ ಸೊಸೆಯಾಗಿರುವ ಇವರು ಸಿನಿಮಾ ನಿರ್ಮಾಪಕಿಯಾಗಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ಕರ್ನಾಟಕದ ರಾಜಕಾರಣದಲ್ಲಿ ಹಲವು ಬಾರಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇವರು ಚುನಾವಣೆಗೆ ಸ್ಪರ್ಧಿಸಿದಾಗ ಶಿವಣ್ಣ ಸಾಥ್ ನೀಡಿದ್ದರು. ಹಲವು ಬಾರಿ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದಾರೆ.