ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನಕ್ಕೆ ಕಾರಣ ಏನು, ಯಾವ ಕಾಯಿಲೆಯಿಂದ ಬಳಲುತ್ತಿದ್ದರು?
Oct 18, 2024 06:48 AM IST
ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ ನಿಧನ
- ಮನಸಾಲಜಿ ಮತ್ತು ಶುಗರ್ ಫ್ಯಾಕ್ಟರಿ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ ದೀಪಕ್ ಅರಸ್ ನಿಧನರಾಗಿದ್ದಾರೆ. ನಟಿ ಅಮೂಲ್ಯ ಅವರ ಸಹೋದರರಾಗಿರುವ ದೀಪಕ್, ಕಳೆದ ಕೆಲ ದಿನಗಳಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
Director Deepak Aras Death: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಕನ್ನಡದಲ್ಲಿ ಮನಸಾಲಜಿ ಮತ್ತು ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ ಸಿನಿಮಾಗಳಿಗೆ ದೀಪಕ್ ಅರಸ್ ಆಕ್ಷನ್ ಕಟ್ ಹೇಳಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದೀಪಕ್, ಶುಕ್ರವಾರ (ಅಕ್ಟೋಬರ್ 17) ಸಂಜೆ 7 ಗಂಟೆ ವೇಳೆಗೆ ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ 42 ವರ್ಷ ವಯಸ್ಸಿನ ದೀಪಕ್, ಕೆಲ ತಿಂಗಳಿಂದ ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಬೆಂಗಳೂರಿನ ಆರ್‌ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಸುನೀಗಿದ ಅವರ ಮೃತದೇಹವನ್ನು ವಯ್ಯಾಲಿಕಾವಲ್‌ನ ನಿವಾಸದಲ್ಲಿ ಇರಿಸಲಾಗಿದೆ.
ಇಂದು (ಅ. 18) ಹುಟ್ಟೂರು ಮಂಡ್ಯದ ನಾಗಮಂಗಲದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ದೀಪಕ್ ಅರಸ್‌ಗೆ ಮದುವೆಯಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ದೀಪಕ್ ಅರಸ್ ಅವರ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಸಿನಿಮಾ ನಿರ್ದೇಶನದ ಜತೆಗೆ ಸ್ವಂತ ಉದ್ಯಮವೊಂದನ್ನು ದೀಪಕ್ ನಡೆಸುತ್ತಿದ್ದರು. ಟ್ರಾವೆಲ್ ಏಜೆನ್ಸಿ ಹೊಂದಿದ್ದರು.
2011ರಲ್ಲಿ ಮನಸಾಲಜಿ ಎಂಬ ಸಿನಿಮಾವನ್ನು ದೀಪಕ್ ಅರಸ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸಿದರೆ, ರಾಕೇಶ್ ಅಡಿಗ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಾಣದ ಜವಾಬ್ದಾರಿಯೂ ದೀಪಕ್ ಅವರದ್ದೇ ಆಗಿತ್ತು. ಅಚ್ಯುತ್ ಕುಮಾರ್, ಸಾಧುಕೋಕಿಲ ಇನ್ನುಳಿದ ತಾರಾಗಣದಲ್ಲಿದ್ದರು. ಅದೇ ರೀತಿ ಕಳೆದ ವರ್ಷ ತೆರೆಕಂಡ ಡಾರ್ಲಿಂಗ್ ಕೃಷ್ಣ ಮತ್ತು ಸೋನಲ್ ಮೊಂತೆರೋ, ಅದ್ವಿತಿ ಶೆಟ್ಟಿ ನಟನೆಯ ಶುಗರ್ ಫ್ಯಾಕ್ಟರಿ ಸಿನಿಮಾವನ್ನೂ ದೀಪಕ್ ನಿರ್ದೇಶನ ಮಾಡಿದ್ದರು.