Shruthi BJP campaign: ದೇಶದ ಅಭಿವೃದ್ಧಿಗೆ ಕುಟುಂಬವನ್ನು ತ್ಯಾಗ ಮಾಡಿದ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ.. ಜೆಡಿಎಸ್‌ಗೆ ನಟಿ ಶ್ರುತಿ ಟಾಂಗ್
Apr 11, 2023 10:15 AM IST
ಹಾವೇರಿಯಲ್ಲಿ ಶ್ರುತಿ ಬಿಜೆಪಿ ಪರ ಪ್ರಚಾರ (ಸಾಂಬರ್ಭಿಕ ಚಿತ್ರ)
- ''ಒಂದು ಕುಟುಂಬದ ಉದ್ಧಾರಕ್ಕಾಗಿ ಈ ದೇಶವನ್ನು ಬಳಿಸಿಕೊಂಡ ನಾಯಕರು ಯಾರೂ ನಮ್ಮ ಪಕ್ಷದಲ್ಲಿ ಇಲ್ಲ, ಅದರ ಬದಲಿಗೆ ಈ ದೇಶದ ಅಭಿವೃದ್ಧಿಗಾಗಿ ಇಡೀ ಕುಟುಂಬವನ್ನೇ ತ್ಯಾಗ ಮಾಡಿದ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ'' ಎಂದು ನಟಿ ಶ್ರುತಿ ಜೆಡಿಎಸ್ ಪಕ್ಷದ ಹೆಸರು ಹೇಳದೆ ಟಾಂಗ್ ನೀಡಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಅನುಸರಿಸುತ್ತಿವೆ. ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಪವರ್‌ಫುಲ್ ವ್ಯಕ್ತಿಗಳನ್ನು ಕರೆತರುತ್ತಿವೆ. ಈಗಾಗಲೇ ಸ್ಟಾರ್ ನಟ ಸುದೀಪ್ ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ಧಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡಾ ಬಿಜೆಪಿ ಪರ ನಿಂತಿದ್ದಾರೆ. ನಟಿಯರಾದ ಮಾಳವಿಕಾ ಅವಿನಾಶ್, ಶ್ರುತಿ ಸೇರಿದಂತೆ ಇನ್ನಿತರ ನಟಿಯರು ಕೂಡಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ನಟಿಯರು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಇತರ ರಾಜಕೀಯ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ನಟಿ ಶ್ರುತಿ ಭಾಗವಹಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದರು. ಅರೆ, ಬಿಜೆಪಿ ಪರ ನಿಂತು ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಮತ ಹಾಕಿ ಅಂತ ಏಕಂದ್ರು..? ಕನ್ಫ್ಯೂಸ್ ಆಗಬೇಡಿ ಮುಂದೆ ಓದಿ.
ಸಮಾವೇಶದಲ್ಲಿ ಮಾತನಾಡಿದ ಶ್ರುತಿ, ''ನಾನು ಭಾರತೀಯಳು ಎಂದು ಹೇಳಿಕೊಳ್ಳುವುದಕ್ಕೆ ಎಷ್ಟು ಹೆಮ್ಮೆಯೋ, ಹಾಗೇ ನಾನೊಬ್ಬ ಬಿಜೆಪಿ ಕಾರ್ಯಕರ್ತಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಕೇವಲ ಒಂದು ಕುಟುಂಬದ ಉದ್ಧಾರಕ್ಕಾಗಿ ಈ ದೇಶವನ್ನು ಬಳಿಸಿಕೊಂಡ ನಾಯಕರು ಯಾರೂ ನಮ್ಮ ಪಕ್ಷದಲ್ಲಿ ಇಲ್ಲ, ಅದರ ಬದಲಿಗೆ ಈ ದೇಶದ ಅಭಿವೃದ್ಧಿಗಾಗಿ ಇಡೀ ಕುಟುಂಬವನ್ನೇ ತ್ಯಾಗ ಮಾಡಿದ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ ಅನ್ನೋದೇ ಅದಕ್ಕೆ ಕಾರಣ'' ಎಂದು ನಟಿ ಶ್ರುತಿ ಜೆಡಿಎಸ್ ಪಕ್ಷದ ಹೆಸರು ಹೇಳದೆ ಟಾಂಗ್ ನೀಡಿದರು. ''ಚುನಾವಣೆ ಘೋಷಣೆ ಆದಾಗಿನಿಂದ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕಿ ಆಗಿ ನಾನು ರಾಜ್ಯದ ಅನೇಕ ಕಡೆ ಸುತ್ತಾಡಿದ್ದೇನೆ. 2014 ಇಸವಿಯಲ್ಲಿ ನಾವೆಲ್ಲಾ ಮೋದಿಯವರ ಪರವಾಗಿ ಒಂದು ಅಲೆಯನ್ನು ನೋಡಿದ್ದೆವು. 2019ರಿಂದ ಮೋದಿ ಅವರ ಪರವಾಗಿ ಒಂದು ಸುನಾಮಿಯೇ ಎದ್ದಿದೆ. ಎಲ್ಲಾ ಕಡೆ ಜನರು ಮೋದಿಯನ್ನು ಬೆಂಬಲಿಸುತ್ತಿದ್ದಾರೆ.''
''ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಾಗ ಮೋದಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಕುರಿತು, ಇನ್ಮುಂದೆ ನೀವು ಜನರ ಬಳಿ ಓಟು ಕೇಳುವಾಗ ನೀವು ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ಕೂಡಾ ನಾನು ಮಾಡುವುದಿಲ್ಲ ಎಂದು ಹೇಳಿದ್ದರು. ಅವರ ಹಲವಾರು ಯೋಜನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅದರಲ್ಲಿ ಮಹಿಳೆಯರಿಗೆ ಸಿಂಹಪಾಲು ಇದೆ. ರಕ್ಷಣಾ ಸಚಿವರು ಹಾಗೂ ವಿದೇಶಾಂಗ ಸಚಿವರು ಇಬ್ಬರೂ ಮಹಿಳೆಯರು ಇರುವಂತೆ ಏಕೈಕ ದೇಶ ನಮ್ಮದೇ. ಒಂದನ್ನು ಮಾತ್ರ ಮನಸ್ಸಲ್ಲಿ ಇರಿಸಿಕೊಳ್ಳಿ. ನಮ್ಮ ರಾಜ್ಯದಲ್ಲಿ ನಿಮ್ಮ ವಂಶ ಬಿಟ್ಟು, ಬೇರೆಯವರ ವಂಶ ಉದ್ಧಾರ ಆಗಬೇಕು ಎಂದುಕೊಂಡಿದ್ದರೆ ನೀವು ಜೆಡಿಎಸ್‌ಗೆ ಓಟು ಹಾಕಿ. ದೇಶದಲ್ಲಿ ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಉದ್ಧಾರ ಆಗಬೇಕು ಎಂದುಕೊಂಡಿದ್ದರೆ ಕಾಂಗ್ರೆಸ್‌ಗೆ ಓಟು ಹಾಕಿ. ಭಾರತದಲ್ಲಿ ಭಾರತೀಯರ ವಂಶ ಉದ್ಧಾರ ಆಗಬೇಕು ಎಂದುಕೊಂಡಿದ್ದರೆ ಭಾರತೀಯ ಜನತಾ ಪಕ್ಷಕ್ಕೆ ಓಟು ಹಾಕಿ'' ಎಂದು ಶ್ರುತಿ ಹೇಳುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಶಿಳ್ಳೆ ಚಪ್ಪಾಳೆ ಮೂಲಕ ಶ್ರುತಿ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.