ಕನ್ನಡ ನಟಿ ತಾರಾ ಅವರ ಫೇಸ್‌ಬುಕ್ ಖಾತೆ ಹ್ಯಾಕ್; ನಿಮ್ಮ ಫೇಸ್‌ಬುಕ್ ಸುರಕ್ಷತೆಗೆ ಈ 1 ಕ್ರಮ ತಪ್ಪದೆ ಅನುಸರಿಸಿ
Dec 21, 2023 12:45 PM IST
ಕನ್ನಡ ನಟಿ ತಾರಾ ಅವರ ಫೇಸ್‌ಬುಕ್ ಖಾತೆ ಹ್ಯಾಕ್; ಫೇಸ್‌ಬುಕ್ ಸುರಕ್ಷತೆಗೆ ಸಲಹೆಗಳು
- How to protect your Online Account: ಕನ್ನಡದ ಹಿರಿಯ ನಟಿ ತಾರಾ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ. ಇತ್ತೀಚೆಗೆ ಇಂತಹ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿದೆ. ಫೇಸ್‌ಬುಕ್ ಸೇರಿದಂತೆ ಆನ್‌ಲೈನ್ ಖಾತೆಗೆ ಎಲ್ಲರೂ ಪಾಲಿಸಬೇಕಾದ ಒಂದು ಪ್ರಮುಖ ಸಲಹೆಯನ್ನು ಇಲ್ಲಿ ನೀಡಲಾಗಿದೆ.
ಸ್ಯಾಂಡಲ್‌ವುಡ್ ನಟಿ ತಾರಾ ಅನುರಾಧ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ. ನನ್ನ ಖಾತೆಯಿಂದ ಯಾವುದೋ ಪೋಸ್ಟ್‌ವೊಂದನ್ನು ಇತರೆ ಸ್ನೇಹಿತರಿಗೆ ಅನವಶ್ಯಕವಾಗಿ ಟ್ಯಾಗ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ದಕ್ಷಿಣ ವಿಭಾಗದ ಸೆನ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡ ನಟಿ ತಾರಾ ಅವರು ಎರಡು ಫೇಸ್‌ಬುಕ್ ಖಾತೆಗಳನ್ನು ಹೊಂದಿದ್ದಾರೆ. ಈ ಹಿಂದೆ ತಾರಾನುರಾಧ ಎಂಬ ಖಾತೆ ಬಳಸುತ್ತಿದ್ದರು. ಇತ್ತೀಚೆಗೆ ತಾರಾನುರಾಧ ವೇಣು ಖಾತೆಯಿಂದ ಹೆಚ್ಚು ಅಪ್‌ಡೇಟ್ ಮಾಡುತ್ತಿದ್ದಾರೆ.
ನಟಿ ತಾರಾ ಅವರ ತಾರಾನುರಾಧ ಖಾತೆಯಿಂದ ಯಾವುದೋ ಪೋಸ್ಟ್‌ವೊಂದನ್ನು ಮಾಡಲಾಗಿತ್ತು. ಇದು ನಾನು ಮಾಡಿರುವ ಪೋಸ್ಟ್ ಅಲ್ಲ ಎಂದು ತಾರಾ ಸ್ಪಷ್ಟಪಡಿಸಿದ್ದಾರೆ. ನನ್ನ ಅಕೌಂಟ್ ತೆರೆದಾಗ ಈ ಪೋಸ್ಟ್ ಕಾಣಿಸುತ್ತಿರಲಿಲ್ಲ. ನನ್ನ ಸ್ನೇಹಿತರು ಕಳುಹಿಸಿದ ಲಿಂಕ್ ಮೂಲಕ ನೋಡಿದಾಗ ನನಗೆ ಆ ಪೋಸ್ಟ್ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಖಾತೆಯೂ ಹ್ಯಾಕ್ ಆಗಬಹುದು
ಇತ್ತೀಚೆಗೆ ಫೇಸ್‌ಬುಕ್ ಬಳಸುವ ಬಹುತೇಕರು ಇಂತಹ ಹ್ಯಾಕಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ನಮಗೆ ಗೊತ್ತಿರುವವರ ಖಾತೆಯಿಂದ ಅಶ್ಲೀಲವಾದ ಪೋಸ್ಟ್ ಬರುವುದು, ಬೇರೆಯವರ ರೀಲ್ಸ್‌ಗಳಲ್ಲಿ ಅಶ್ಲೀಲ ಲಿಂಕ್‌ಗಳು ಕಾಣಿಸುವುದು, ಒಂದೇ ಬಾರಿ ನಮ್ಮ ಖಾತೆಯಲ್ಲಿರುವವರಿಗೆಲ್ಲ ಪೋಸ್ಟ್‌ಗಳು ಟ್ಯಾಗ್ ಆಗುವುದು ಇತ್ಯಾದಿಗಳು ನಡೆಯುತ್ತವೆ.
ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ನಾನು ಯಾರಿಂದಲೂ ಹಣ ಕೇಳಿಲ್ಲ ಎಂದು ಬಳಿಕ ಈ ರೀತಿ ಹ್ಯಾಕ್‌ಗೆ ಒಳಗಾದವರು ಪೋಸ್ಟ್ ಮಾಡುತ್ತಾರೆ. ಈ ರೀತಿ ಫೇಸ್‌ಬುಕ್, ಇನ್‌ಸ್ಟಾಂ ಹ್ಯಾಕ್ ಆಗಲು ನಿಮ್ಮ ದುರ್ಬಲ ಪಾಸ್‌ವರ್ಡ್ ಪ್ರಮುಖ ಕಾರಣವಾಗಿರುತ್ತದೆ.
ಫೇಸ್‌ಬುಕ್ ಹ್ಯಾಕ್ ಆಗದಂತೆ ನೋಡಿಕೊಳ್ಳಲು ಸದೃಢ ಪಾಸ್‌ವರ್ಡ್ ನೀಡುವುದು ಅವಶ್ಯ. ಕಠಿಣ ಅಕ್ಷರಗಳು, ಸಂಖ್ಯೆಗಳನ್ನು ಒಳಗೊಂಡ ಪಾಸ್‌ವರ್ಡ್ ನೀಡಬೇಕು. ಈ ಕ್ರಮ ಎಲ್ಲರಿಗೂ ಗೊತ್ತಿರಬಹುದು. ಆದರೆ, ಬಹುತೇಕರು ಒಮ್ಮೆ ಪಾಸ್‌ವರ್ಡ್ ಹಾಕಿದರೆ ಅದನ್ನು ಬದಲಾಯಿಸಲು ಹೋಗುವುದಿಲ್ಲ. ಸೋಷಿಯಲ್ ಮೀಡಿಯಾದ ಪಾಸ್‌ವರ್ಡ್‌ಗಳನ್ನು ತಿಂಗಳಿಗೊಮ್ಮೆಯಾದರೂ ಬದಲಾಯಿಸುವುದು ಒಳ್ಳೆಯದು.
ನೆನಪಿನಲ್ಲಿ ಉಳಿಯಲಿ ಎಂದು ಸುಲಭವಾಗಿ ಅಂದಾಜಿಸಬಹುದಾದ ಪಾಸ್‌ವರ್ಡ್ ನಮೋದಿಸಬೇಡಿ. ಕೆಲವರು ಪಾಸ್‌ವರ್ಡ್ ಬದಲಾಯಿಸಲು ಹಿಂಜರಿಯಲು ಹಲವು ಕಾರಣಗಳಿವೆ. ಒಮ್ಮೆ ಪಾಸ್‌ವರ್ಡ್ ಬದಲಾಯಿಸಿದರೆ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಎಲ್ಲಾ ಕಡೆ ಮತ್ತೆ ಲಾಗಿನ್ ಆಗಬೇಕು, ಯಾಕೆ ಈ ಕಿರಿಕಿರಿ ಎಂದು ಹಲವು ವರ್ಷದಿಂದ ಬಳಸುವ ಒಂದೇ ಪಾಸ್‌ವರ್ಡ್ ಬಳಸುತ್ತ ಇರುತ್ತಾರೆ. ಈ ರೀತಿ ಮಾಡಬೇಡಿ, ನಿಯಮಿತವಾಗಿ ಪಾಸ್‌ವರ್ಡ್ ಬದಲಾಯಿಸುತ್ತ ಇರಿ.
ಈ ಒಂದು ಕ್ರಮ ಅನುಸರಿಸಿ
ಹ್ಯಾಕರ್‌ಗಳು ಯಾವುದಾದರೂ ಸುಧಾರಿತ ವಿಧಾನಗಳ ಮೂಲಕ ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್ ಪಡೆದು ನಿಮ್ಮ ಖಾತೆಗೆ ಲಾಗಿನ್ ಆಗಬಹುದು. ಬಳಿಕ ಈ ರೀತಿಯ ಅನಪೇಕ್ಷಿತ ಲಿಂಕ್‌ಗಳು, ಟ್ಯಾಗ್‌ಗಳನ್ನು ಮಾಡಬಹುದು. ಹಣ ಮಾಡುವ ಉದ್ದೇಶದವರು ನಿಮ್ಮ ಸ್ನೇಹಿತರಲ್ಲಿ ನಿಮ್ಮ ಖಾತೆಯ ಮೂಲಕ ಹಣ ಕೇಳಬಹುದು. ತಮ್ಮ ಕೆಟ್ಟ ವೆಬ್‌ಸೈಟ್‌ಗಳನ್ನು ಪ್ರಮೋಷನ್ ಮಾಡಲು ಬಯಸುವವರು ಯಾವುದಾದರೂ ಕೆಟ್ಟ ಫೋಟೋ ಹಾಕಿ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೂಲಕ ಆ ಲಿಂಕ್ ಕ್ಲಿಕ್ ಮಾಡಲು ಪ್ರೇರೇಪಿಸಬಹುದು. ಈ ರೀತಿ ಲಿಂಕ್ ಕ್ಲಿಕ್ ಮಾಡಿಸುವ ಮೂಲಕ ನಿಮ್ಮ ಮೊಬೈಲ್, ಲ್ಯಾಪ್‌ಟಾಪ್‌ನೊಳಗೆ ಕೆಟ್ಟ ತಂತ್ರಾಂಶಗಳನ್ನು ಅಳವಡಿಸಬಹುದು. ಬಳಿಕ ನಿಮ್ಮ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ಹ್ಯಾಕ್ ಮಾಡಿ ಅಮೂಲ್ಯ ಮಾಹಿತಿ ಕದಿಯಬಹುದು.
ಸದ್ಯಕ್ಕೆ ಇಂತಹ ಹ್ಯಾಕರ್‌ಗಳಿಂದ ಪಾರಾಗಲು ಇರುವ ಪ್ರಮುಖವಾದ ಒಂದು ದಾರಿಯೆಂದರೆ ಟು ಫ್ಯಾಕ್ಟರ್ ಅಥೆಂಟಿಕೇಶನ್ ಆಪ್ ಬಳಸುವುದು. ಸಾಕಷ್ಟು ಜನರು ಈ ವಿಧಾನ ಅನುಸರಿಸಬಹುದು. ಆದರೆ, ತಾಂತ್ರಿಕವಾಗಿ ಹೆಚ್ಚಿನ ಮಾಹಿತಿ, ತಿಳುವಳಿಕೆ ಇಲ್ಲದೆ ಇರುವವರು ಇಂತಹ ವಿಧಾನ ಅನುಸರಿಸುವುದಿಲ್ಲ.
ಟು ಫ್ಯಾಕ್ಟರ್ ಅಥೆಂಟಿಕೇಶನ್ ಬಳಸುವುದು ಹೇಗೆ?
- ಮೊದಲಿಗೆ ಫೇಸ್‌ಬುಕ್‌ನ ಸೆಕ್ಯುರಿಟಿ ಮತ್ತು ಲಾಗಿನ್ ಸೆಟ್ಟಿಂಗ್ಸ್‌ಗೆ ಹೋಗಿ.
- Use two-factor authentication ಎಂಬ ವಿಭಾಗಕ್ಕೆ ಹೋಗಿ ಎಡಿಟ್ ಮಾಡಿ.
- ಇಲ್ಲಿ ನಿಮಗೆ ಮೂರು ಆಯ್ಕೆಗಳು ದೊರಕುತ್ತವೆ. ಸೆಕ್ಯುರಿಟಿ ಕೀ, ಅಥೆಂಟಿಕೇಷನ್ ಆಪ್ ಮತ್ತು ಎಸ್‌ಎಂಎಸ್ ಮೂಲಕ ಲಾಗಿನ್ ಆಯ್ಕೆ ದೊರಕುತ್ತದೆ.
- ನಿಮ್ಮ ಮೊಬೈಲ್ ನೆಟ್‌ವರ್ಕ್ ತೊಂದರೆಗಳಿದ್ದರೆ ಎಸ್‌ಎಂಎಸ್ ಆಯ್ಕೆ ಬೇಡ. ನೆಟ್‌ವರ್ಕ್ ಪ್ರಾಬ್ಲಂ ಯಾವತ್ತೂ ಇರೋದಿಲ್ಲ ಎಂದಾದರೆ ಎಸ್‌ಎಂಎಸ್ ಆಯ್ಕೆ ಮಾಡಿ.
- ಥರ್ಡ್ ಪಾರ್ಟಿ ಅಥೆಂಟಿಕೇಷನ್ ಆಪ್ ಬಳಸಿ. ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಗೂಗಲ್ ಅಥೆಂಟಿಕೇಷನ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆಪ್‌ನಲ್ಲಿ ನಿಮ್ಮ ಫೇಸ್‌ಬುಕ್ ಖಾತೆಯನ್ನು ಸೇರಿಸಿ. ಇನ್ನು ಮಂದೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆಗಬೇಕಾದರೆ ಈ ಆಪ್‌ನಲ್ಲಿ ಕಾಣಿಸುವ ಕೋಡ್ ಸಂಖ್ಯೆಯನ್ನು ನಮೂದಿಸಬೇಕು. ಈ ಕೋಡ್ ಸಂಖ್ಯೆ ಕ್ಷಣಕ್ಷಣಕ್ಕೆ ಬದಲಾಗುತ್ತ ಇರುತ್ತದೆ. ಹೀಗಾಗಿ, ಸದ್ಯಕ್ಕೆ ಹ್ಯಾಕರ್‌ಗಳಿಂದ ಪಾರಾಗಲು ಇದು ಒಂದು ಅತ್ಯಂತ ಸುರಕ್ಷಿತ ವಿಧಾನವಾಗಿದೆ.
ಇದನ್ನು ಓದಿದ್ದೀರಾ?: ಮೊಬೈಲ್, ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್ ಸುರಕ್ಷತೆ ಹೇಗೆ? ಆನ್‌ಲೈನ್ ಕಳ್ಳರಿಂದ ಸುರಕ್ಷಿತವಾಗಿರಲು 12 ಟಿಪ್ಸ್