Biffes 2024: ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಸಂವಾದ, ಚಲನಚಿತ್ರಗಳ ಪ್ರದರ್ಶನ, ಸಂಭ್ರಮಿಸಿದ ಸಿನಿಮಾ ಪ್ರೇಮಿಗಳು
Mar 04, 2024 09:47 AM IST
Biffes 2024: ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಸಂವಾದ, ಚಲನಚಿತ್ರಗಳ ಪ್ರದರ್ಶನ
- BIFFes 2024 Festival: ಬೆಂಗಳೂರಿನಲ್ಲಿ 15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಭಾನುವಾರ ಹಲವು ಸಂವಾದಗಳು ನಡೆದಿವೆ. ಜತೆಗೆ, ಸಿನಿಮಾ ಪ್ರೇಮಿಗಳು ಹಲವು ಸಿನಿಮಾಗಳನ್ನು ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೇ ದಿನ ಹಲವು ಗೋಷ್ಠಿಗಳು, ಚಲನಚಿತ್ರಪ್ರದರ್ಶನಗಳು ನಡೆದಿವೆ. ಸಿನಿಮೋತ್ಸವದ ಮೂರನೇ ದಿನ 7000ಕ್ಕೂ ಹೆಚ್ಚು ಸಿನಿಮಾ ಪ್ರೇಮಿಗಳು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡರು. ಹಲವು ವೈವಿಧ್ಯಮಯ ಸಿನಿಮಾಗಳ ಪ್ರದರ್ಶನಗಳು ನಡೆದಿವೆ.
90 ವರ್ಷಗಳ ಕನ್ನಡ ಚಿತ್ರರಂಗವನ್ನು ನೆನಪಿಸುವ ಉದ್ದೇಶದಿಂದ ಶ್ರೀ ಪಿ ಶೇಷಾದ್ರಿ ಅವರು'ಸುವರ್ಣ ಕರ್ನಾಟಕ ಸಂಭ್ರಮ ಮತ್ತು 90 ವರ್ಷಗಳ ಕನ್ನಡ ಟಾಕಿ' ಕುರಿತು ಸಂವಾದ ನಡೆಸಿಕೊಟ್ಟರು. ಕೆ.ಪುಟ್ಟಸ್ವಾಮಿ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ವಿ.ಎಚ್.ಸುರೇಶ್ ಚರ್ಚೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಇವರೆಲ್ಲ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಿನಿಮಾ ಮಾಧ್ಯಮದ ಮೂಲಕ ಪ್ರೇಕ್ಷಕರಲ್ಲಿ ಸಾಮಾಜಿಕ ಮೌಲ್ಯಗಳನ್ನು ತುಂಬುವ ಮಹತ್ವವನ್ನು ಗೋಷ್ಠಿಯಲ್ಲಿ ಒತ್ತಿ ಹೇಳಲಾಯಿತು.
ಸುಬ್ಬಯ್ಯ ನಾಯ್ಡು ಅವರ ರಂಗಭೂಮಿಯ ವೃತ್ತಿಜೀವನ ಮತ್ತು ಕನ್ನಡ ಚಲನಚಿತ್ರೋದ್ಯಮಕ್ಕೆ ಅವರ ಕೊಡುಗೆ ಮತ್ತು ಅವರ ಸಹವರ್ತಿ ವೈ ವಿ ರಾವ್ ಅವರ ಕೊಡುಗೆಯನ್ನು ಹಿರಿಯ ನಟಿ ಮತ್ತು ಸುಬ್ಬಯ್ಯ ನಾಯ್ಡು ಸೊಸೆ ಗಿರಿಜಾ ಲೋಕೇಶ್ ಸ್ಮರಿಸಿದರು. ಸಮಕಾಲೀನ ಚಲನಚಿತ್ರಗಳಲ್ಲಿನ ಸಾಮಾಜಿಕ ಅಂಶಗಳ ಗಮನಾರ್ಹ ಕೊರತೆಯ ಬಗ್ಗೆ ಟಿ ಎಸ್ ನಾಗಾಭರಣ ಮಾತನಾಡಿದರು.
ಮಾಧ್ಯಮದ ಮೇಲಿರುವ ಆಳವಾದ ಸಾಮಾಜಿಕ ಜವಾಬ್ದಾರಿಗಳನ್ನು ಪುಟ್ಟಸ್ವಾಮಿ ವಿವರಿಸಿದರು. ನಿರ್ದೇಶಕರಾದ ಶಿಶಿರ್ ರಾಜಮೋಹನ್, ಉತ್ತಮ್ ಕಾಮತಿ, ಅರೂಪ್ ಮನ್ನಾ: ಮತ್ತು ಸಂತೋಷ್ ಮಾದ ಅವರು ತಮ್ಮ ಮೊದಲ ಸಿನಿಮಾಗಳ ಕುರಿತು ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಳ್ಳುವ ಸಮಯದಲ್ಲಿ ಈ ಸಿನಿಮೋತ್ಸವ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಹೆಸರು ಬದಲಾವಣೆಯಾಗಿ 50 ವರ್ಷ ಸಂದ ಸಂಭ್ರಮದ ಸಮಯದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಹಲವು ಕನ್ನಡ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅಮರಶಿಲ್ಪಿ ಜಕಣಾಚಾರಿ, ಬೆಳ್ಳಿಮೋಡ, ಒಂದಾನೊಂದು ಕಾಲದಲ್ಲಿ, ಅಂಥ, ಮಯೂರ, ತಾಯಿ ಸಾಹೇಬ, ಕಾಟೇರ, ಟಗರು ಪಲ್ಯ, ಕೌಶಲ್ಯ ಸುಪ್ರಜಾ ರಾಮಾ, ಸಪ್ತ ಸಾಗರದಾಚೆ ಎಲ್ಲೋ ಮುಂತಾದ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದೆ. ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಪಡೆದ ಬೆಂಗಾಲಿ ನಿರ್ದೇಶಕರ ಮೃಣಾಲ್ ಸೇನ್‌ರ ಸಿನಿಮಾ, ಇರಾನಿ ಸಿನಿಮಾ ನಿರ್ದೇಶಕ ಅಬ್ಬಾಸ್ ಕಿಯಾರೊಟಮಿ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದೆ.
ಬೆಂಗಳೂರು ಚಲನಚಿತ್ರೋತ್ಸವ: ಇಂದಿನ ಕಾರ್ಯಕ್ರಮ
ಇಂದು ಬೆಳಗ್ಗೆ 11.30 ಗಂಟೆಗೆ ಮೃಣಾಲ್ ಸೇನ್ ಟ್ರಿಬ್ಯೂಟ್ ಕಾರ್ಯಕ್ರಮ ನಡೆಯಲಿದೆ. ಶೇಖರ್ ದಾಸ್ ಮಾತನಾಡಲಿದ್ದಾರೆ. ಇಂದು ಸಂಜೆ 3.30 ಗಂಟೆಯ ಬಳಿಕ "ವಿಕೆ ಮೂರ್ತಿ ಆನ್ವಲ್ ಮೆಮೊರಿಯಲ್ ಇವೆಂಟ್ ಆನ್ ಸಿನಿಮಾಟ್ರೊಗ್ರಫಿ" ಕುರಿತು ಪ್ಯಾನೆಲ್ ಡಿಸ್ಕಷನ್ ನಡೆಯಲಿದೆ. ಗಿರೀಶ್ ಕಾಸರವಳ್ಳಿ. ಎಚ್‌ಎಂ ರಾಮಚಂದ್ರ, ಶಶಿಧರ್ ಅಡಪ, ಜಿಎಸ್ ಭಾಸ್ಕರ್, ಪಿ ಶೇಷಾದ್ರಿ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.