Darshan: 'ಅಮ್ಮ ನೋಡಿಲ್ಲಿ, ಯಾರ್ ಬಂದಿದಾರೆ.. ದರ್ಶನ್ ಬಂದಿದಾನಮ್ಮ'; ಲೀಲಾವತಿ ಆರೋಗ್ಯ ವಿಚಾರಿಸಿದ ದಚ್ಚು
Nov 26, 2023 05:08 PM IST
Darshan: 'ಅಮ್ಮ ನೋಡಿಲ್ಲಿ, ಯಾರ್ ಬಂದಿದಾರೆ.. ದರ್ಶನ್ ಬಂದಿದಾನಮ್ಮ ಎದ್ದೇಳಮ್ಮ'; ಲೀಲಾವತಿ ಆರೋಗ್ಯ ವಿಚಾರಿಸಿದ ದಚ್ಚು
- ಚಂದನವನದ ಸ್ಟಾರ್ ನಟ ದರ್ಶನ್, ಹಿರಿಯ ನಟಿ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ.
Darshan: ಚಂದನವನ ಕಂಡ ಹಿರಿಯ ನಟಿ ಲೀಲಾವತಿ, ಒಂದಲ್ಲ ಎರಡಲ್ಲ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಯ ಸಿನಿಮಾಗಳಲ್ಲೂ ತಮ್ಮ ನಟನೆ ಪ್ರದರ್ಶಿಸಿದ್ದಾರೆ. ಕನ್ನಡದಲ್ಲಂತೂ ಬಹುತೇಕ ಎಲ್ಲ ಸ್ಟಾರ್ ನಟರ ಜತೆಗೆ ಸಿನಿಮಾ ಮಾಡಿದ್ದಾರೆ. ಹೀಗಿರುವ ಲೀಲಾವತಿಗೀಗ ಬರೋಬ್ಬರಿ 87 ವರ್ಷ ವಯಸ್ಸು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಒಂದು ಕಾಲದ ಸ್ಟಾರ್ ನಟಿ ಲೀಲಾವತಿ ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಹಾಸಿಗೆ ಹಿಡಿದಿರುವ ಲೀಲಾವತಿ, ಆಹಾರವನ್ನೂ ಸೇವಿಸುತ್ತಿಲ್ಲ. ಇತ್ತ ಅಮ್ಮನನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ ಪುತ್ರ ವಿನೋದ್ ರಾಜ್. ಹೀಗಿರುವಾಗಲೇ ಇದೇ ಹಿರಿಯ ನಟಿಯನ್ನು ನಟ ದರ್ಶನ್ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಗೆ ಆಗಮಿಸಿದ ದರ್ಶನ್ ಮತ್ತು ಅವರ ಸಂಗಡಿಗರು, ವಿನೋದ್ ರಾಜ್ ಅವರನ್ನು ಭೇಟಿಯಾಗಿದ್ದಾರೆ. ಅದಾದ ಬಳಿಕ ಒಂದಷ್ಟು ಹೊತ್ತು ಅವರ ಜತೆಗೆ ಮಾತನಾಡಿದ್ದಾರೆ. ಇದೇ ವೇಳೆ ಮನೆಯಲ್ಲಿಯೇ ವಿಶೇಷ ಪೂಜೆ ಸಹ ಆಯೋಜಿಸಲಾಗಿತ್ತು. ಆ ಪೂಜೆಯಲ್ಲೂ ಭಾಗವಹಿಸಿ, ಬಳಿಕ ಲೀಲಾವತಿ ಅವರನ್ನು ಭೇಟಿ ಮಾಡಿ ಮಾತನಾಡಿಸಿದರು.
ದರ್ಶನ್ ಬರುತ್ತಿದ್ದಂತೆ, ವಿನೋದ್ ರಾಜ್ ಅಮ್ಮನನ್ನು ಎಬ್ಬಿಸಿ, "ಅಮ್ಮ ನೋಡಿಲ್ಲಿ ನಿನ್ನನ್ನು ನೋಡಲು ಯಾರು ಬಂದಿದ್ದಾರೆ.. ದರ್ಶನ್ ಬಂದಿದಾನಮ್ಮ ದರ್ಶನು. ಎದ್ದೇಳು.. ಇಲ್ನೋಡಮ್ಮ ಎಂದಿದ್ದಾರೆ ವಿನೋದ್. ಇಲ್ಲ ನಿಮ್ಮನ್ನು ಅಮ್ಮ ಗುರುತಿಸುತ್ತಾರೆ ಎಂದೂ ದರ್ಶನ್ ನೋಡಿ ಹೇಳಿದ್ದಾರೆ ವಿನೋದ್. ಕೆಲ ಹೊತ್ತು ಲೀಲಾವತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ದರ್ಶನ್, ತೋಟದ ಮನೆಯನ್ನು ವೀಕ್ಷಿಸಿ ಅಲ್ಲಿಂದ ತೆರಳಿದ್ದಾರೆ.
ಇತ್ತ ಎದ್ದು ಓಡಾಡದ ಸ್ಥಿತಿಗೆ ತಲುಪಿರುವ ಲೀಲಾವತಿ ಅವರನ್ನು ಸೋಲದೇವನಹಳ್ಳಿಯ ತೋಟದ ಮನೆಯಲ್ಲಿಯೇ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದಾರೆ ಪುತ್ರ ವಿನೋದ್ ರಾಜ್. ವೀಲ್ ಚೇರ್ ಮೇಲೆ ಕೂರಿಸಿಕೊಂಡು ಮನೆಯಲ್ಲಿಯೇ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ. ತಾಯಿಯ ತಲೆಗೆ ತಲೆಕೊಟ್ಟು ದೇವರ ಹಾಡುಗಳನ್ನು ಹಾಡುವ ಮೂಲಕ ಅವರ ಕಾಳಜಿ ವಹಿಸುತ್ತಿದ್ದಾರೆ ವಿನೋದ್.
ಸೋಲದೇವನಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಆಸೆ ಲೀಲಾವತಿ ಅವರಿಗಿತ್ತು. ಅದರಂತೆ ಆ ಆಸೆಯನ್ನು ಪುತ್ರ ವಿನೋದ್ ರಾಜ್ ನೆರವೇರಿಸಿದ್ದಾರೆ. 45 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಪಶು ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಆ ಆಸ್ಪತ್ರೆಗೆ ಡಾ. ಎಂ. ಲೀಲಾವತಿ ಪಶು ಆಸ್ಪತ್ರೆ ಎಂದು ಹೆಸರನ್ನೂ ಇಡಲಾಗಿದೆ. ಇಂದು (ನ. 26) ಈ ಆಸ್ಪತ್ರೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದ್ದಾರೆ.