‘ಮೋದಿ ಹೆಸರಿನ ಇದೂ ಒಂದು ಕ್ರಿಕೆಟ್ ಪಿಚ್ಚಾ? ಕ್ಷಮೆ ಇರಲಿ ಟೀಮ್ ಇಂಡಿಯಾ, ಇದು ನಿಮ್ಮ ತಪ್ಪಲ್ಲ’ ಎಂದ ನಟ ಕಿಶೋರ್
Nov 21, 2023 09:37 AM IST
‘ಮೋದಿ ಹೆಸರಿನ ಇದೂ ಒಂದು ಕ್ರಿಕೆಟ್ ಪಿಚ್ಚಾ? ಕ್ಷಮೆ ಇರಲಿ ಟೀಮ್ ಇಂಡಿಯಾ, ಇದು ನಿಮ್ಮ ತಪ್ಪಲ್ಲ’ ಎಂದ ಕಿಶೋರ್
- ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಪಿಚ್ ಕಾರಣ ಎಂಬ ಮಾತು ಚರ್ಚೆಯಲ್ಲಿದೆ. ಈ ನಡುವೆ ಇದೇ ಅಹಮದಾಬಾದ್‌ನ ಮೋದಿ ಸ್ಟೇಡಿಯಂನ ಪಿಚ್ ಬಗ್ಗೆ ಬಹುಭಾಷಾ ನಟ ಕಿಶೋರ್ ಮಾತನಾಡಿದ್ದಾರೆ.
Actor Kishore: ಬಹುಭಾಷಾ ನಟ ಕಿಶೋರ್ ಆಗಾಗಾ ಮೋದಿ ವಿರುದ್ಧ ಹರಿಹಾಯುತ್ತಿರುತ್ತಾರೆ. ಅನಿಸಿದ್ದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಇದೀಗ ಇದೇ ಕಿಶೋರ್ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದಕ್ಕೆ ಆಟಗಾರರು ಕಾರಣರಲ್ಲ, ಬದಲಿಗೆ ಅಹಮದಾಬಾದ್ ಕ್ರಿಕೆಟ್ ಪಿಚ್ ಮತ್ತು ರಾಜಕಾರಣ ಕಾರಣ ಎಂದು ಮೋದಿಯತ್ತ ಬೆರಳು ಮಾಡಿದ್ದಾರೆ.
ಸತತ 10 ಪಂದ್ಯಗಳನ್ನು ಗೆದ್ದು ಈ ಸಲದ ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ, ಟಾಸ್ ಸೋತು ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅದ್ಯಾವ ಮಟ್ಟಿಗೆ ಎಂದರೆ, ರನ್ ಬರ ಅನುಭವಿಸಿತು. ಅನುಭವಿಗಳು ಕ್ರೀಜ್‌ನಲ್ಲಿದ್ದರೂ ರನ್ ಹೊಳೆ ಹರಿಯಲಿಲ್ಲ. ಇದಕ್ಕೆ ಕಾರಣ ಅಲ್ಲಿನ ಕಪ್ಪು ಮಣ್ಣಿನಿಂದ ಮಾಡಿದ ಪಿಚ್. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಹೆಚ್ಚು ಚರ್ಚೆಗೆ ಕಾರಣವಾಯ್ತು. ಇದೀಗ ಇದರ ಬಗ್ಗೆ ಕಿಶೋರ್ ಮಾತನಾಡಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತ ಸೋತಿದ್ದಕ್ಕೆ ಆಟಗಾರರು ಕಾರಣರಲ್ಲ. ಅದರಾಚೆಗೆ ನಡೆದ ರಾಜಕಾರಣವೇ ಈ ಸೋಲಿಗೆ ಕಾರಣ ಎಂದು ತಮ್ಮ ಕೋಪತಾಪವನ್ನು ಸೋಷಿಯಲ್ ಮೀಡಿಯಾ ಪುಟಕ್ಕೆ ಇಳಿಸಿದ್ದಾರೆ ಕಿಶೋರ್. ಅಷ್ಟು ಒಳ್ಳೆಯ ಫಾರ್ಮಿನಲ್ಲಿರುವ ಇದುವರೆಗೂ ಅಜೇಯವಾಗಿದ್ದ , ಎಂಥಾ ಪಿಚ್ಚಿನ ಮೇಲೆ ಆಡಿದ್ದರೂ ಗೆಲ್ಲಬಹುದಿದ್ದ ಟೀಮಿಗೆ ಹೋಮ್ ಅಡ್ವಾಂಟೇಜಿನ ನೆಪದಲ್ಲಿ ಇಂತಹ ಪಿಚ್ ಯಾಕೆ ಬೇಕಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಕಿಶೋರ್ ಹೇಳಿದ್ದೇನು?
"ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. ಇಂದಿನ ಭಾರತದಲ್ಲಿ ಧರ್ಮ ರಾಜಕೀಯದ ದಾಳವಾಗಿದೆ. ಕ್ಷಮೆಯಿರಲಿ ಟೀಮ್ ಇಂಡಿಯಾ.. ನೀವು ಸೋತಿಲ್ಲ, ನಿಮ್ಮನ್ನು ಗೌರವಿಸುವಲ್ಲಿ ನಾವು ಸೋತಿದ್ದೇವೆ. ಬಿಸಿಸಿಐ ಐಪಿಎಲ್ ಎಲ್ಲವನ್ನೂ ಕಪಿಮುಷ್ಟಿಯಲ್ಲಿ ಹಿಡಿದ ಕೂತ ರಾಜಕಾರಿಣಿಗಳನ್ನು ಆಯ್ಕೆ ಮಾಡಿದವರು ನಾವೇ ಅಲ್ಲವೇ?
ನಮಗೆಲ್ಲರಿಗೂ ಗೊತ್ತು ಕೊನೆಗೆ ಇದು ಬರೀ ಟಾಸಿನಾಟವಾಗಿಹೋಯ್ತು ಎಂದು. ಟಾಸ್ ಸೋಲು ಅದೂ ಕೆಟ್ಟ ವಿಕೆಟ್ಟಿನ ಮೇಲೆ, ಪಂದ್ಯಕ್ಕೇ ಎರವಾಯ್ತು. ಬಾಲ್ ಹಳೆಯದಾಗುತ್ತಿದ್ದಂತೆ ತಡೆತಡೆದು ಬರುತ್ತಿದ್ದುದು, ಬೌನ್ಸ್ ಏರುಪೇರಾದದ್ದು ಕ್ರಿಕೆಟ್ ಗೊತ್ತಿಲ್ಲದವರಿಗೂ ಎದ್ದು ಕಾಣುತ್ತಿತ್ತು. ಅದೇ ಪಿಚ್ನಲ್ಲಿ, ಆಸ್ಟ್ರೇಲಿಯಾದ 3 ವಿಕೆಟ್ಟಿನ ನಂತರ ಸಂಜೆ ಇಬ್ಬನಿ ಬಂದೊಡನೆ ಬಾಲ್ ಬ್ಯಾಟಿಗೆ ಸಲೀಸಾಗಿ ಬರಲಾರಂಭಿಸಿದ್ದೂ ಸಹ..
ಅಷ್ಟು ಒಳ್ಳೆಯ ಫಾರ್ಮಿನಲ್ಲಿರುವ ಇದುವರೆಗೂ ಅಜೇಯವಾಗಿದ್ದ , ಎಂಥಾ ಪಿಚ್ಚಿನ ಮೇಲೆ ಆಡಿದ್ದರೂ ಗೆಲ್ಲಬಹುದಿದ್ದ ಟೀಮಿಗೆ ಹೋಮ್ ಅಡ್ವಾಂಟೇಜಿನ ನೆಪದಲ್ಲಿ ಇಂತಹ ಪಿಚ್ ಯಾಕೆ ಬೇಕಿತ್ತು? ಇಲ್ಲಿನ ರಾಜಕಾರಿಣಿಗಳ ಚಿಲ್ಲರೆ ಕೆಲಸಕ್ಕೆ ಶ್ರೀಲಂಕಾ ಕ್ರಿಕೆಟ್ ಬೋರ್ಡನ್ನು ಬಲಿ ಕೊಡಿಸುವಷ್ಟು ಐಸಿಸಿಯ ಮೇಲೆ ಪ್ರಭಾವವಿರುವ ಕೋಟ್ಯಾಧಿಪತಿ ಬಿಸಿಸಿಐ, 29 ಓವರಿನಲ್ಲಿ ಒಂದು ಫೋರ್ ಹೊಡೆಯಲಾಗದಂಥ ಪಿಚ್ಚು ಯಾಕೆ ಮಾಡಿಸಬೇಕಿತ್ತು.
ಕೆಲಸ ಮಾಡಿ ಓಟು ಕೇಳಲು ತಾಕತ್ತಿಲ್ಲದ ಅಯೋಗ್ಯ ಕ್ರೆಡಿಟ್ಟು ಕಳ್ಳರಿಗೆ ಈ ಗೆಲುವು ಹೆಚ್ಚು ಅನಿವಾರ್ಯವಾಗಿತ್ತೇನೊ? ಒಟ್ಟಿನಲ್ಲಿ ಈ ರಾಜಕೀಯ ಕ್ರೆಡಿಟ್ಟು ಕಳ್ಳರ ದುರಾಸೆ ಮತ್ತು ಎಲ್ಲವನ್ನೂ ತಿರುಚುವ ಹೊಲಸು ಅಭ್ಯಾಸ ಬಲದಿಂದ ಎಂತಹ ಅದ್ಭುತ ತಂಡ … ಸೋಲು ಅನುಭವಿಸಬೇಕಾಯಿತು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ತೆಗೆದು ಮೈದಾನಕ್ಕೆ ಬದುಕಿದ್ದಾಗಲೇ ತನ್ನ ಹೆಸರಿಟ್ಟುಕೊಂಡ ಆತ್ಮರತಿಲೋಲನ ಉಪಸ್ಥಿತಿಯಲ್ಲಿ.." ಎಂದು ಬರೆದುಕೊಂಡಿದ್ದಾರೆ.