Leelavathi: ಕಲ್ಪನಾ, ಜಯಂತಿ, ಲೀಲಮ್ಮ ನಾಯಕ ನಟರಂತೆಯೇ ಸಾಂಸ್ಕೃತಿಕ ಕೊಂಡಿಗಳಲ್ಲವೇ, ಯಾಕೀ ತಾರತಮ್ಯ- ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ಅಭಿಮತ
Dec 09, 2023 07:37 PM IST
ಕಲ್ಪನಾ, ಜಯಂತಿ, ಈಗ ಲೀಲಾವತಿ, ಇವರೆಲ್ಲ ಯಾವ ನಟರಿಗೆ ಕಡಿಮೆ ಇದ್ದರು.?.
ನಾಯಕ ನಟರು ನಿಧನರಾದಾಗ ಅವರನ್ನು ಸಾಂಸ್ಕೃತಿಕ ಕೊಂಡಿಗಳಂತೆ ಬಿಂಬಿಸುವುದು ಸರ್ವೇಸಾಮಾನ್ಯ. ಕಲ್ಪನಾ, ಜಯಂತಿ, ಲೀಲಮ್ಮ ಯಾವ ನಟರಿಗೆ ಕಡಿಮೆ ಇದ್ದರು ಹೇಳಿ.. ಇವರು ಸಾಂಸ್ಕೃತಿಕ ಕೊಂಡಿಗಳಲ್ಲವೇ ಎಂಬ ಪ್ರಶ್ನೆಯೊಂದಿಗೆ ಸಕಾಲಿಕ ಚಿಂತನೆಯೊಂದಕ್ಕೆ ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ಮುನ್ನುಡಿ ಬರೆದಿದ್ದಾರೆ.
ಕನ್ನಡ ಚಿತ್ರರಂಗದ ಮೇರುಕಲಾವಿದೆ ಲೀಲಮ್ಮ ಇಂದು (ಡಿ.9) ಪಂಚಭೂತಗಳಲ್ಲಿ ಲೀನವಾದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು ಎಂಬುದೂ ನಿಜವೇ. ಆದರೆ ಸಾಧನೆ ಮಾಡಿದ ನಾಯಕ ನಟರಿಗೆಹೋಲಿಸಿದರೆ ಸಾಧನೆ ಮಾಡಿದ ನಾಯಕಿಯರಿಗೆ ಸಿಗುವ ಗೌರವವೇ ಬೇರೆ. ಅಂದರೆ ಬಹಳಷ್ಟು ಲಿಂಗ ತಾರತಮ್ಯ ಇದೆ ಎಂಬುದು ಕಣ್ಣಿಗೆ ರಾಚುವ ಸತ್ಯ. ಸರ್ಕಾರದ ನಡವಳಿಕೆಯೂ ಅದಕ್ಕೆ ಪುಷ್ಟಿ ನೀಡುವಂಥದ್ದು ಎಂಬುದರ ಕಡೆಗೆ ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ಗಮನಸೆಳೆದಿದ್ದಾರೆ.
ಅವರು ಈ ಕುರಿತು ಬಹಳ ವಿಷಾದದಿಂದ ಫೇಸ್‌ಬುಕ್ ಪೋಸ್ಟ್ ಒಂದನ್ನು ಮಾಡಿದ್ದು, ಲೀಲಮ್ಮ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಲೀಲಮ್ಮ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ವೇಳೆ ಈ ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ನಲ್ಲಿದ್ದ ಬರೆಹದ ಯಥಾವತ್ ಉಲ್ಲೇಖ ಇಲ್ಲಿದೆ.
ಒಂದು ಸಾಂಸ್ಕೃತಿಕ ಕೊಂಡಿಯಾಗಿ ನಟರನ್ನಷ್ಟೇ ಯಾಕೆ ಪ್ರೊಜೆಕ್ಟ್ ಮಾಡಲಾಗುತ್ತಿದೆ…
ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುತ್ತಿದೆ.
ನಾವು ಚಲಾವಣೆಯಲ್ಲಿದ್ದಾಗ ಮಾತ್ರ ನಮ್ಮನ್ನು ಮಾತನಾಡಿಸುತ್ತಾರೆ.ನಂತರ ನಟಿಯರನ್ನು ಕೇಳುವವರೇ ಇರುವುದಿಲ್ಲ ಎಂದು ಬೇಸರದಿಂದ ಒಮ್ಮೆ ಲೀಲಮ್ಮ ಹೇಳಿದ್ದರು. ನಾನವರನ್ನು ಸಾಕಷ್ಟು ಸಲ ಸಂದರ್ಶನ ಮಾಡಿರುವೆ. ಅವರ ಈ ಮಾತು ನನ್ನ ಯಾವಾಗಲೂ ಕಾಡುತ್ತಿರುತ್ತದೆ. ನಾಯಕ ನಟನೊಬ್ಬ ತೀರಿಕೊಂಡ ನಂತರ ಅವರ ಸ್ಮಾರಕಗಳನ್ನು ಸ್ವತಃ ಸರ್ಕಾರವೇ ನೆರವೇರಿಸುತ್ತದೆ. ಅದು ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪುನೀತ್ ರಾಜಕುಮಾರ್..ಹೀಗೆ...
ಆದರೆ ನಟಿಯರು ತೀರಿಕೊಂಡ ನಂತರ ಅವರ ಬಗ್ಗೆ ನಾಲ್ಕು ಮಾತು ಬರೆದು, ನಾಲ್ಕು ಮಾತುಗಳನ್ನು ಹೇಳಿ ನಮ್ಮ ಮಾಧ್ಯಮಗಳು ಸುಮ್ಮನಾಗಿ ಬಿಡುತ್ತವೆ. ಕಲ್ಪನಾ, ಜಯಂತಿ, ಈಗ ಲೀಲಾವತಿ, ಇವರೆಲ್ಲ ಯಾವ ನಟರಿಗೆ ಕಡಿಮೆ ಇದ್ದರು.?. ಒಂದು ಕಾಲದಲ್ಲಿ ನಾಯಕ ನಟರಷ್ಟೇ ಬೇಡಿಕೆಯಲ್ಲಿದ್ದರು ಇವರೆಲ್ಲ. ಆದರೆ ಅವರನ್ನು ನಂತರ ಕೇಳುವವರೇ ಇಲ್ಲವಾಗುತ್ತಾರೆ.
ಸ್ಮಾರಕಗಳನ್ನು ನಿರ್ಮಿಸುವುದು, ಅವರ ಕುರಿತು ಅಧ್ಯಯನ ನಡೆಸುವುದೆಲ್ಲ ಮುಂದಿನ ಪೀಳಿಗೆ ಇಂಥ ಕಲಾವಿದರ ಪರಿಚಯ ಮಾಡಿಸುವ ಸಲುವಾಗಿ. ಒಂದು ಸಾಂಸ್ಕೃತಿಕ ಕೊಂಡಿಯಾಗಿ ನಟರನ್ನು ಪ್ರೊಜೆಕ್ಟ್ ಮಾಡಲಾಗುತ್ತದೆ. ನಟಿಯರು ಕೂಡ ಹಾಗೆಯೇ ಅಲ್ಲವೇ?. ಅವರ ಕುರಿತೂ ಸ್ಮಾರಕಗಳು, ಅಧ್ಯಯನಗಳು ನಡೆಯಬೇಕಿದೆಯಲ್ಲವೇ?. ನಟಿಯರ ಕುರಿತು ಮಾತ್ರ ಯಾಕೆ ಈ ತಾರತಮ್ಯ…
-ಭಾರತಿ ಹೆಗಡೆ, ಬೆಂಗಳೂರು
ಸೋಷಿಯಲ್ ಮೀಡಿಯಾದಲ್ಲಿ ಜನಸ್ಪಂದನೆ… ಆಯ್ದ 5 ಪ್ರತಿಕ್ರಿಯೆಗಳು ಹೀಗಿವೆ..
1. ನೀವು ಎತ್ತಿರುವ ಪ್ರಶ್ನೆಗಳು ಒಟ್ಟಾರೆ ಮಹಿಳೆಯರ ಪ್ರಶ್ನೆಗಳಾಗಿವೆ.ಇದರ ಬಗ್ಗೆ ಪಿತೃಪ್ರಧಾನ ವ್ಯವಸ್ಥೆ ಮತ್ತು ರಾಜಕೀಯ ವಲಯ ಚಿಂತಿಸಬೇಕಿದೆ ಎಂದು ಶರೀಫಾ ಕುಂಸಿ ಪ್ರತಿಕ್ರಿಯಿಸಿದ್ದಾರೆ.
2. ನಟಿ ಕಲಾವಿದೆಯಾಗಿ ಈ ಸಮಾಜವನ್ನು ಎದುರಿಸಿ ಬದುಕುವಲ್ಲಿ ಪುರುಷರಿಗಿಂತ ಮಹಿಳೆ ಅದೆಷ್ಟೋ ನೋವು ಅವಮಾನಗಳ ಬೆಂಕಿಯನ್ನು ಮಡಿಲಲ್ಲಿ ಕಟ್ಟಿ ಸಾಧನೆ ಮಾಡಬೇಕಾಗಿದೆ.ಆದರೂ ಮಹಿಳೆಗೆ ಕೊಡುವ ಗೌರವದಲ್ಲಿ ಈ ತಾರತಮ್ಯ ಅದೇಕೋ?ತುಂಬಾ ಅನ್ಯಾಯವೆನಿಸುವುದು ಎಂದು ವಾಣಿ ಲೋಕಯ್ಯ ಹೇಳಿದ್ದಾರೆ.
3. ನಟಿಯರ ದೇಹಸೌಂದರ್ಯ, ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಜನರಿಗೆ ಆಸಕ್ತಿ . ನಟನ ಸಾಧನೆ ಜೀವನ ಎಲ್ಲ ಆದರ್ಶ ಅನಿಸಿಕೊಂಡು ಅದರ ಬಗ್ಗೆ ಆಸಕ್ತಿ . ಜನಕ್ಕೆ ಏನು ಬೇಕೋ ಅದೇ ಹೆಚ್ಚು ಮುನ್ನಲೆಗೆ ಬರುತ್ತದೆ. ಇವರ ವಿಷ್ಯದಲ್ಲೂ ಆ ಸಂಬಂಧದ ಬಗ್ಗೆ ಮಾತಾಡಿದ ಕಾಲು ಭಾಗದಷ್ಟೂ ನಟನೆ ಬಗ್ಗೆ ಇಲ್ಲ . ನಿಜಕ್ಕೂ ಖೇದಕರ ವಿಚಾರ ಎಂದು ವೇದಾ ಅಠವಳೆ ಖೇದಿಸಿದ್ದಾರೆ.
4. ಬಹುಶಃ ಈ ಹೊತ್ತಿಗೆ ಅತ್ಯಂತ ಸೂಕ್ತ ಪ್ರಶ್ನೆ ಇದು....ನಮ್ಮಲ್ಲಿ ಈಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಒಳ್ಳೆಯ ವಿಷಯಗಳಿದ್ದರೂ, ಇಂದಿಗೂ ಹೆಣ್ಣು ಅಂದ್ರೆ ಎರಡನೇ ದರ್ಜೆಯೇ..ಇದಕ್ಕೆ ಒಂದು ಸಣ್ಣ ಅಪವಾದ ನಮ್ಮ ನೆರೆ ರಾಜ್ಯದವರು ಒಬ್ಬ ನಟಿಗಾಗಿ ದೇವಸ್ಥಾನ ಕಟ್ಟಿಸಿದ್ದು... ಎರಡೂ ವೈರುಧ್ಯಗಳೇ..!! ಇನ್ನಾದರೂ ಇಂತಹ ವಿಷಗಳು ಬದಲಾಗಿ ಮೇರು ಕಲಾವಿದರಿಗೆ ತಾರತಮ್ಯ ರಹಿತವಾಗಿ ಗೌರವ ಸಿಗುವಂತಾಗಲಿ ಎಂಬುದೇ ಆಶಯ... ಎಂದು ನಾಗಚಂದ್ರಿಕಾ ಭಟ್ ಆಶಿಸಿದ್ದಾರೆ.
5. ಸತ್ಯವಾದ, ವಾಸ್ತವಿಕತೆಯನ್ನು ಬಿಂಬಿಸುವ ಮಾತು. ಇಂತಹ ಸಾಕಷ್ಟು ವಿಷಯಗಳಲ್ಲಿ ಬದಲಾವಣೆ ತಂದುಕೊಳ್ಳಬೇಕಾಗಿದೆ.... ಎಂದು ನಾಗೇಂದ್ರ ಮುತ್ತುಮುರ್ದು ಪ್ರತಿಕ್ರಿಯಿಸಿದ್ದಾರೆ.