ಎಲ್ಲರಿಕ್ಕೂ ನಲ್ಲಮೆ, ಕೊಡವ ಭಾಷೆಯಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್; ಅರ್ಥವಾಗದೆ ಪಿಳಿಪಿಳಿ ಕಣ್ಬಿಟ್ಟ ಪರವೂರ ಫ್ಯಾನ್ಸ್
Jul 02, 2024 09:18 AM IST
ಎಲ್ಲರಿಕ್ಕೂ ನಲ್ಲಮೆ, ಕೊಡವ ಭಾಷೆಯಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್
- Rashmika Mandanna Talk in Karnataka Kodava Language: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕೊಡವ ಭಾಷೆಯಲ್ಲಿ ಮುದ್ದಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಗೆಳತಿ ದೇಚಮ್ಮಳ ಮದುವೆಗೆ ಬಂದ ಸಮಯದ ಇವರ ಕೂರ್ಗ್ ಟಾಕ್‌ಗೆ ಕೊಡವರು ಮಾತ್ರವಲ್ಲದೆ ದೇಶಾದ್ಯಂತ ಇರುವ ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಬೆಂಗಳೂರು: ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಊರು, ಸ್ಥಳದ ಕುರಿತು ವಿಶೇಷ ಪ್ರೀತಿ ಹೊಂದಿರುತ್ತಾರೆ ಎಂದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಾಬೀತುಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತನ್ನ ಹುಟ್ಟೂರು ಕೊಡಗಿಗೆ ಇತ್ತೀಚೆಗೆ ಆಗಮಿಸಿದ ವಿಷಯ ನಿಮಗೆಲ್ಲರಿಗೂ ಗೊತ್ತಿರಬಹುದು. ಗೆಳತಿಯ ಮದುವೆಗೆ ಬಂದ ಇವರು ಕೊಡವ ಶೈಲಿಯಲ್ಲಿ ಸೀರೆಯುಟ್ಟು ಅಭಿಮಾನಿಗಳಿಗೆ ಅಚ್ಚರಿ ತಂದಿದ್ದರು. ಇದೀಗ ಅದೇ ಸಂದರ್ಭದಲ್ಲಿ ಅದೇ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಮಾಡಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ, ವಿಶೇಷವಾಗಿ ಕೊಡಗಿನ ಜನರ ಹೃದಯ ಗೆದ್ದಿದೆ.
ಕೊಡವ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ
"ಎಲ್ಲರಿಕ್ಕೂ ನಲ್ಲಮೆ (ಎಲ್ಲರಿಗೂ ನಲ್ಮೆಯ ನಮಸ್ಕಾರ), ನಾನು ಕೊಡಗಿನಲ್ಲಿದ್ದೇನೆ. ಗೆಳತಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಡಗಿಗೆ ಬಂದಿದ್ದೇನೆ. ಇಲ್ಲಿಯವರೆಗೆ ನನಗೆ ನಿಮ್ಮ ಆಶೀರ್ವಾದ ದೊರಕಿದೆ. ಮುಂದೆಯೂ ನಿಮ್ಮ ಆಶೀರ್ವಾದ ದೊರಕಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಇಕ್ಕಂಜಸ... ಇಲ್ಲಿಯವರೆಗೆ ನನಗೆ ಕಾವೇರಮ್ಮ, ಇಗ್ಗುತ್ತಪ್ಪ ಸ್ವಾಮಿಯ ಆಶೀರ್ವಾದ ದೊರಕಿದೆ. ನೀವೆಲ್ಲರೂ ನನಗೆ ಯಾವಾಗಲೂ ಬೆಂಬಲ ನೀಡುತ್ತ ಇದ್ದೀರಿ. ಮುಂದೆಯೂ ಇದೇ ರೀತಿ ಬೆಂಬಲ ನೀಡುತ್ತ ಇರಿ" ಎಂದು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ಎಲ್ಲಿಂದ ಬಂದವಳು. ನನ್ನ ಮೂಲ ಎಲ್ಲಿ ಎಂದು ಎಲ್ಲರಿಗೂ ತಿಳಿಯಲಿ ಎನ್ನುವ ಸಲುವಾಗಿ ಉದ್ದೇಶಪೂರ್ವಕವಾಗಿ ನಾನು ನನ್ನ ಕೊಡವ ಭಾಷೆಯಲ್ಲಿ ಮಾತನಾಡಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ತನಗೆ ಪ್ರತಿಕ್ರಿಯಿಸಿದವರಿಗೆ ಮಾರುತ್ತರವನ್ನೂ ನೀಡಿದ್ದಾರೆ.
ಕೊಡವರ ಮನಗೆದ್ದ ರಶ್ಮಿಕಾ
ರಶ್ಮಿಕಾ ಮಂದಣ್ಣ ಕೊಡವ ಭಾಷೆಯಲ್ಲಿ ಮಾತನಾಡಿರುವ ವಿಡಿಯೋ ಸಹಜವಾಗಿ ಕೊಡವರ ಮನಸ್ಸು ಗೆದ್ದಿದೆ. "ನಾವು ಯಾವತ್ತೂ ನಮ್ಮ ಮಾತೃಭಾಷೆಯನ್ನು ಮರೆಯಬಾರದು" "ನಾವು ಕೊಡವರು ಯಾವತ್ತಿಗೂ ನಿನಗಾಗಿ ಇರುವೆವು. ಈ ಸುಂದರ ನಗುವಿನೊಂದಿಗೆ ಭಾರತದ ಸಿನಿಮಾದಲ್ಲಿ ಇನ್ನಷ್ಟು ಸಾಧನೆ ಮಾಡು" "ಕಾವೇರಮ್ಮ, ಇಗ್ಗುತ್ತಪ್ಪ ದೇವರು ಒಳ್ಳೆಯದು ಮಾಡಲಿ" ಎಂದೆಲ್ಲ ಕೊಡವರು ಇನ್‌ಸ್ಟಾಗ್ರಾಂ ಕಾಮೆಂಟ್ ಮೂಲಕ ಹಾರೈಸಿದ್ದಾರೆ.
ಪಿಳಿಪಿಳಿ ಕಣ್ಬಿಟ್ಟ ಪರವೂರ ಫ್ಯಾನ್ಸ್
ಆದರೆ, ಕರ್ನಾಟಕದ ಹೊರಗಿನ ಕೆಲವು ಅಭಿಮಾನಿಗಳಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಯಾವ ಭಾಷೆ ಮಾತನಾಡುತ್ತಿದ್ದಾರೆ ಎಂದು ಅರಿವಾಗದೆ ಗೊಂದಲಕ್ಕೆ ಈಡಾಗಿದ್ದಾರೆ. ಹೆಚ್ಚಿನವರು ಇದು ಕನ್ನಡ ಭಾಷೆ ಎಂದುಕೊಂಡಿದ್ದಾರೆ. "ಸೀರಿಯಸ್ ಆಗಿ ನನಗೆ ಈ ಕನ್ನಡ ಗೊಂದಲ ಉಂಟು ಮಾಡಿದೆ" ಎಂದು ಕೆಲವರು ಹೇಳಿದ್ದಾರೆ. "ಇದು ಕನ್ನಡ ಅಲ್ಲ. ಕೊಡವ ಭಾಷೆ" ಎಂದು ಇತರೆ ಅಭಿಮಾನಿಗಳು ಪರವೂರ ಫ್ಯಾನ್ಸ್‌ಗೆ ಮಾಹಿತಿ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ತನ್ನ ಗೆಳತಿ ಯಾತ್ರಾ ದೇಚಮ್ಮಳ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕೊಡವ ಭಾಷೆಯಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕೊಡಗಿನ ಶೈಲಿಯಲ್ಲಿ ಸೀರೆಯುಟ್ಟು ಎಲ್ಲರ ಮನ ಕದ್ದಿದ್ದಾರೆ. ಕೊಡವ ಭಾಷೆಯಲ್ಲಿ ಮಾತನಾಡುವ ವಿಡಿಯೋ ಹರಿಯಬಿಟ್ಟು ಕೊಡವರ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ.
"ನಾನು ಮತ್ತು ನನ್ನ ಗೆಳತಿಯರು ಯಾತ್ರಾ ದೇಚಮ್ಮಳ ಜತೆ ಬೆಳೆದೆವು. ನಿನ್ನ ಮದುವೆಯ ಈ ಕ್ಷಣ ನೀನು ಬಿಝಿ ಇದ್ದ ಕಾರಣ ನಿನ್ನ ಜತೆಗೆ ಫೋಟೋ ತೆಗೆದುಕೊಳ್ಳಲಾಗಲಿಲ್ಲ. ಈ ಮೂಲಕ ನಿನಗೆ ನಿನಗೆ ನಿನ್ನ ಸಂಗಾತಿ ಜತೆಗೆ ಅತ್ಯುತ್ತಮ ಆರೋಗ್ಯ, ಜೀವನ ಪೂರ್ತಿ ಸಂತೋಷ ದೊರಕಲಿ" ಎಂದು ರಶ್ಮಿಕಾ ಮಂದಣ್ಣ ಗೆಳತಿಗೆ ಇತ್ತೀಚೆಗೆ ವೈವಾಹಿಕ ಶುಭಾಶಯಗಳನ್ನು ಕೋರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಕೊಡವ ಭಾಷೆಯ ಕುರಿತು
ಭಾರತದ ದಕ್ಷಿಣ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮಾತನಾಡುವ ಭಾಷೆ. ಈ ಭಾಷೆಗೆ ಕೊಡವ, ಕೂರ್ಗಿ ಭಾಷೆ ಎಂದೂ ಕರೆಯಲಾಗುತ್ತದೆ. ಅಳಿವಿನಂಚಿನಲ್ಲಿರುವ ಭಾಷೆಗಳ ಸಾಲಿನಲ್ಲಿದೆ. ಕೊಡವ ಎನ್ನುವುದು ಕೊಡವ ಭಾಷೆ ಮತ್ತು ಸಂಸ್ಕೃತಿಯ ಹೆಸರು. ಕೊಡವ ಮಾತನಾಡುವ ಸಮುದಾಯಗಳು ಕೊಡಗು ಜಿಲ್ಲೆಯಲ್ಲಿವೆ. ಕೊಡಗಿನ ಅನೇಕ ಜಾತಿ ಮತ್ತು ಬುಡಕಟ್ಟುಗಳ ಪ್ರಾಥಮಿಕ ಭಾಷೆಯಾಗಿದೆ. ಕೊಡವ ಭಾಷೆಯನ್ನು ಕನ್ನಡ, ತಮಿಳು, ಮಲಯಾಳಂ, ತುಳು ನಡುವಿನ ಮಧ್ಯಂತರ ಭಾಷೆ ಎಂದು ಪರಿಗಣಿಸಲಾಗಿದೆ. ಕೊಡವ ಭಾಷೆಯನ್ನು ಅಬುಗಿಡಾ ಎಂಬ ತಿರ್ಕೆ ಲಿಪಿ ಬಳಸ ಬರೆಯಲಾಗಿದೆ ಎಂದು ವಿಕಿಪೀಡಿಯಾದಲ್ಲಿ ಮಾಹಿತಿಯಿದೆ.