35 ವರ್ಷಗಳ ಬಳಿಕ ಕ್ಯಾಮರಾ ಮುಂದೆ ಬಂದ ನಟಿ ಶೋಭಾ; ಅಣ್ಣಾವ್ರ ಹೊಸ ಬೆಳಕು ಚಿತ್ರದ ನಟಿ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?
Aug 08, 2024 07:45 AM IST
35 ವರ್ಷಗಳ ಬಳಿಕ ಕ್ಯಾಮರಾ ಮುಂದೆ ಬಂದ ನಟಿ ಶೋಭಾ; ಅಣ್ಣಾವ್ರ ಹೊಸ ಬೆಳಕು ಚಿತ್ರದ ನಟಿ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?
- 35 ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ಸೇರಿ ಹಲವು ನಟರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶೋಭಾ, ಮದುವೆ ಬಳಿಕ ಬಣ್ಣದ ಲೋಕದಿಂದಲೇ ದೂರ ಉಳಿದರು. ಇದೀಗ ಇದೇ ನಟಿ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಎಲ್ಲಿದ್ದಾರೆ, ಹೇಗಿದ್ದಾರೆ, ಕುಟುಂಬ ಹೇಗಿದೆ ಎಂಬ ವಿವರ ಇಲ್ಲಿದೆ.
Hosabelaku Movie Fame Shobha: ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ 70, 80ರ ಕಾಲಘಟ್ಟದಲ್ಲಿ ಪೋಷಕ ನಟಿಯಾಗಿ, ತಂಗಿಯಾಗಿ, ಮಡದಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶೋಭಾ ಈಗ ಹೇಗಿದ್ದಾರೆ? ಕಳೆದ 35 ವರ್ಷಗಳಿಂದ ಸಿನಿಮಾರಂಗದಿಂದ ದೂರವೇ ಉಳಿದಿರುವ ಶೋಭಾ, ಸದ್ಯ ಕುಟುಂಬದ ಜತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಮೂಲ ಬೆಂಗಳೂರಿನವರೇ ಆದ ಶೋಭಾ, ಸದ್ಯ ಮಲ್ಲೇಶ್ವರಂನಲ್ಲಿ ಪತಿ ಹಾಗು ಮಗನ ಜತೆಗೆ ವಾಸವಿದ್ದಾರೆ. ಮದುವೆ ಬಳಿಕ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ ಈ ನಟಿ, ಇದೀಗ ಸುದೀರ್ಘ 35 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ.
ದೇವನಾಥ್ ಮತ್ತು ರಾಜಲಕ್ಷ್ಮೀ ದಂಪತಿಯ ಐದನೇ ಹಾಗೂ ಕೊನೇ ಮಗಳು ಈ ಶೋಭಾ. ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ 10ನೇ ತರಗತಿ ವರೆಗೂ ಓದಿದ್ದಾರೆ ಈ ನಟಿ. ಇವರ ತಂದೆ ಪೊಲೀಸ್ ಇನ್‌ಸ್ಪೆಕ್ಟರ್, ತಾಯಿ ಗೃಹಿಣಿ. ಶೋಭಾ ಅವರ ಅಕ್ಕ ಜ್ಯೋತಿ, ಋತುಗಾನ ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ, ಆ ಚಿತ್ರಕ್ಕೆ ಭರತನಾಟ್ಯ ಕಲಿತ ಹುಡುಗಿ ಬೇಕಿತ್ತು. ಆಗ ಆ ಪಾತ್ರಕ್ಕೆ ಆಯ್ಕೆಯಾದವರು ಶೋಭಾ. ಅದಾದ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದವು. ಇದೀಗ ಇದೇ ನಟಿ ನಿರ್ದೇಶಕ ರಘುರಾಮ್ ಅವರ ನೂರೊಂದು ನೆನಪು ಯೂಟ್ಯೂಬ್ ಪ್ರೋಗ್ರಾಂಗೆ ಸಂದರ್ಶನದಲ್ಲಿ ನೀಡಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ನಟನೆ..
ಅದಾದ ಬಳಿಕ ಭಾರತಿ ವಿಷ್ಣುವರ್ಧನ್ ಜತೆಗೆ ಹೊಸ ಮೇಡಂ, ಆರತಿ ಅವರ ಜತೆಗೆ ತಾಯಿಯ ಮಡಿಲು ಸಿನಿಮಾದಲ್ಲಿ ಅವರ ತಂಗಿಯಾಗಿ ನಟಿಸಿ ಖ್ಯಾತಿ ಗಳಿಸಿದರು. ಡಾ. ರಾಜ್‌ಕುಮಾರ್ ಜತೆಗೆ ಹೊಸಬೆಳಕು ಚಿತ್ರದಲ್ಲಿ ಅಕ್ಕನ ಮಗಳಾಗಿ, ಚಲಿಸುವ ಮೋಡಗಳು, ಒಂದು ಮುತ್ತಿನ ಕಥೆ, ಅನಂತ್ ನಾಗ್ ಅವರ ಜತೆಗೆ ಮುದುಡಿದ ತಾವರೆ ಅರಳಿತು, ಶ್ರೀನಾಥ್ ಅವರ ಜತೆ ಬೆಟ್ಟದ ತಾಯಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಬರೀ ನಟಿಯಷ್ಟೇ ಅಲ್ಲದೇ ಭರತನಾಟ್ಯ ಕಲಾವಿದೆಯಾಗಿಯೂ ಶೋಭಾ ಗುರುತಿಸಿಕೊಂಡವರು. ವಿಜಯ್ ಅವರನ್ನು ವಿವಾಹವಾದ ಶೋಭಾ ಅವರಿಗೆ ಮುರುಳಿ ಎಂಬ ಓರ್ವ ಮಗನಿದ್ದಾನೆ. ಕಳೆದ 35 ವರ್ಷಗಳಿಂದ ಸಿನಿಮಾಗಳಿಂದ, ಮಾಧ್ಯಮಗಳಿಂದ ದೂರವೇ ಉಳಿದಿದ್ದ ಈ ನಟಿ, ಸದ್ಯ ಬೆಂಗಳೂರಿನಲ್ಲಿಯೇ ಮಲ್ಲೇಶ್ವರಂನಲ್ಲಿ ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ.
ಐವರು ಮಕ್ಕಳಲ್ಲಿ ನಾನೇ ಕೊನೆಯವಳು..
"ಮದುವೆ ಬಳಿಕ ನಾನು ಕ್ಯಾಮರಾ ಫೇಸ್ ಮಾಡಿಲ್ಲ. ಒಟ್ಟು ಐವರು ಮಕ್ಕಳು, ಒಬ್ಬ ಅಣ್ಣ, ನಾಲ್ವರು ಹೆಣ್ಣು ಮಕ್ಕಳು, ನಾನು ಕೊನೆಯವಳು. ವಿದ್ಯಾವರ್ಧಕ ಶಾಲೆಯಲ್ಲಿ 10ನೇ ತರಗತಿಯ ವರೆಗೆ ಓದಿದ್ದೇನೆ. ಬಾಲ್ಯದ ನೆನಪುಗಳು ತುಂಬ ಹಸಿರಾಗಿವೆ. ಕೂಡು ಕುಟುಂಬದಲ್ಲಿ ಬೆಳೆದ ನಾನು, ಇಡೀ ಕುಟುಂಬದಲ್ಲಿ ಎಲ್ಲರ ಪ್ರೀತಿ ಪಾತ್ರಳು. ಅಮ್ಮನ ಕೈ ತುತ್ತನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತೇನೆ. ಅಪ್ಪ ಅಂದರೆ ತುಂಬ ಇಷ್ಟ. ಆಗೆಲ್ಲ ಅಪ್ಪನನ್ನು ಪೊಲೀಸ್ ಡ್ರೆಸ್‌ನಲ್ಲಿ ನೋಡುವುದೇ ಚೆಂದ. ಇದೀಗ ನನ್ನ ಮಗನಿಗೂ ಅದನ್ನೇ ಹೇಳ್ತಿರ್ತಿನಿ. ಏನಾದ್ರೂ ಆಗಲಿ ನೀನು ಪೊಲೀಸ್ ಆಗು ಅಂದಿದಿನಿ" ಎಂದಿದ್ದಾರೆ.
ಋತುಗಾನ ನನ್ನ ಮೊದಲ ಸಿನಿಮಾ
"ಸಿನಿಮಾ ಅವಕಾಶಗಳು ಸಿಗ್ತಿದ್ದಂತೆ, ಹತ್ತನೇ ತರಗತಿ ಬಳಿಕ ಮುಂದೆ ಕಾಲೇಜಿಗೆ ಹೋಗಲೇ ಇಲ್ಲ. ಋತುಗಾನ ನನ್ನ ಮೊದಲ ಸಿನಿಮಾ. ಸುಂದರ್ ಕೃಷ್ಣ ಅರಸ್ ಆ ಸಿನಿಮಾದ ನಿರ್ದೇಶಕರು. ಆ ಸಿನಿಮಾದಲ್ಲಿ ನನ್ನ ಅಕ್ಕ ಜ್ಯೋತಿ ನಟಿಸುತ್ತಿದ್ದರು. ಅದೇ ಸಿನಿಮಾಕ್ಕೆ ಓರ್ವ ಭರತನಾಟ್ಯ ಕಲಾವಿದೆ ಬೇಕಿತ್ತು. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶೂಟಿಂಗ್ ಇತ್ತು. ಹೋಗುತ್ತಿದ್ದಂತೆ, ಮೇಕಪ್ ಮಾಡಿ, ಡಾನ್ಸ್ ಮಾಡುವಂತೆ ಹೇಳಿದರು. ಶೂಟಿಂಗ್ ಸಹ ನಡಿಯಿತು. ಡಾನ್ಸ್ ಮಾಡುವಾಗ ಮೇಲಿಂದ ರೋಲ್ ಬೀಳುತ್ತೆ. ನೀನು ಕೆಳಗೆ ಬಿದ್ದುಬಿಡು ಅಂದ್ರು. ಅದಷ್ಟನ್ನೇ ಮಾಡಿದ್ದೆ. ಅದಷ್ಟು ಬಿಟ್ಟು ನನಗೆ ಬೇರೆ ಏನೂ ನೆನಪಿಲ್ಲ" ಎಂದಿದ್ದಾರೆ.
"ಅದೇ ನನ್ನ ಮೊದಲ ಸಿನಿಮಾ ಆಗಿದ್ದರಿಂದ, ಕ್ಯಾಮರಾ ಎಲ್ಲಿಟ್ಟಿದ್ದಾರೆ, ಹೇಗೆ ಆಕ್ಟ್ ಮಾಡಬೇಕು ಅದ್ಯಾವುದೂ ಗೊತ್ತಿಲ್ಲ. ಸ್ಟೇಜ್ ಮೇಲೆ ಹೇಗೆ ಡಾನ್ಸ್ ಮಾಡಬೇಕೋ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಡಾನ್ಸ್ ಮಾಡಿದೆ. ನಟನೆಯ ನನಗೇ ಮೊದಲು ಆಸಕ್ತಿ ಇರಲಿಲ್ಲ. ಕುಟುಂಬದಿಂದಲೂ ನನಗೆ ಯಾವುದೇ ಸಮಸ್ಯೆ ಇರಲಿಲ್ಲ. ಅಪ್ಪ ಅಮ್ಮ ಸಹ ಸಪೋರ್ಟ್ ಮಾಡಿದರು" ಎಂದು ಬಾಲ್ಯ ಮತ್ತು ಚಿತ್ರರಂಗದ ಆಗಮನ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.