logo
ಕನ್ನಡ ಸುದ್ದಿ  /  ಮನರಂಜನೆ  /  Sandalwood News: ಪುಷ್ಪಕ ವಿಮಾನ ಸಿನಿಮಾ ನಂತರ ಕನ್ನಡದಲ್ಲಿ ತಯಾರಾಗ್ತಿದೆ ಹೊಸ ಮೂಕಿ ಚಿತ್ರ; ಡೈಲಾಗ್‌ ಇಲ್ಲದ ಫ್ಯಾಂಟಸಿ ಸಿನಿಮಾ ಮಹಾಗುರು

Sandalwood News: ಪುಷ್ಪಕ ವಿಮಾನ ಸಿನಿಮಾ ನಂತರ ಕನ್ನಡದಲ್ಲಿ ತಯಾರಾಗ್ತಿದೆ ಹೊಸ ಮೂಕಿ ಚಿತ್ರ; ಡೈಲಾಗ್‌ ಇಲ್ಲದ ಫ್ಯಾಂಟಸಿ ಸಿನಿಮಾ ಮಹಾಗುರು

HT Kannada Desk HT Kannada

Jun 29, 2023 08:00 AM IST

google News

'ಮಹಾಗುರು' ಚಿತ್ರತಂಡ

  • ಮಹಾಗುರು ಬಹಳ ವರ್ಷಗಳ ನಂತರ ಬರುತ್ತಿರುವ ಮೂಕಿ ಚಿತ್ರ. ಸೌಂಡ್ ಎಫೆಕ್ಟ್‌ನಲ್ಲೇ ಕಥೆ ಹೇಳಲಾಗುತ್ತಿದೆ. ಈ ಚಿತ್ರವನ್ನು ಕೇರಳ‌ ಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

'ಮಹಾಗುರು' ಚಿತ್ರತಂಡ
'ಮಹಾಗುರು' ಚಿತ್ರತಂಡ

ಕನ್ನಡದಲ್ಲಿ 36 ವರ್ಷಗಳ ಹಿಂದೆ 'ಪುಷ್ಪಕ ವಿಮಾನ' ಎಂಬ ಡೈಲಾಗ್‌ ಇಲ್ಲದ ಮೂಕಿ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾ ನಂತರ ಇಂತಹ ಪ್ರಯೋಗ ಮತ್ತೆ ಆಗಿರಲಿಲ್ಲ. ಇದೀಗ ಬಹಳ ವರ್ಷಗಳ ಗ್ಯಾಪ್‌ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮೂಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ 'ಮಹಾಗುರು' ಎಂಬ ಟೈಟಲ್‌ ಇಡಲಾಗಿದೆ.

ಮಹಾಗುರು ಫ್ಯಾಂಟಸಿ ಕಥಾಹಂದರ ಇರುವ ಸಿನಿಮಾ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಮಂಗಳವಾರ ಬೆಂಗಳೂರಿನಲ್ಲಿ ನೆರವೇರಿದೆ. ಮೈಸೂರು ರಮಾನಂದ್, ಮಹಿಮಾ ಗುಪ್ತಾ, ಬ್ಯಾಂಕ್ ಜನಾರ್ಧನ್ ಹಾಗೂ ಇನ್ನಿತರರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸಿ ಮಹೇಂದ್ರನ್ ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಾಡಿನ‌ ಮಧ್ಯೆ ಇರುವ ಗುಪ್ತ ನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ ಹಾಗೂ ಅದನ್ನು ಕಾಯುತ್ತಿರುವ ಯಕ್ಷಕನ್ಯೆಯ ನಡುವೆ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ.

ಮುಹೂರ್ತ ಕಾರ್ಯಕ್ರಮದ ನಂತರ ಮಾತನಾಡಿದ ಹಿರಿಯ ನಟ ಮೈಸೂರು ರಮಾನಂದ್, ''ನಾನು ಇದುವರೆಗೆ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಹಿಂದೆ ಸ್ಟಂಟ್ ಮಾಸ್ಟರ್ ಎಂಬ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದೆ. ಅದಾದ ಬಳಿಕ ಮತ್ತೆ ಈ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡುತ್ತಿದ್ದೇನೆ. ಒಬ್ಬ ಕುಳ್ಳನಾದರೆ, ಮತ್ತೊಬ್ಬ ನಾರ್ಮಲ್ ಮನುಷ್ಯ. ಕ್ಯಾರೆಕ್ಟರ್ ನಿರ್ವಹಿಸಲು ಸ್ವಲ್ಪ ಎಫರ್ಟ್ ಹಾಕಬೇಕಾಗಿದೆ. ನಿಧಿಯನ್ನು ಹುಡುಕಿ ಹೋಗುವ ಮಂತ್ರವಾದಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ಆವನಿಗೆ ನಿಧಿ ಸಿಗುವುದೋ ಇಲ್ಲವೋ ಎನ್ನುವುದೇ ಈ ಸಿನಿಮಾ ಕಥೆ. ಮಾತುಗಳೇ ಇಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರ. ಎರಡೂ ‌ಪಾತ್ರಗಳು ತುಂಬಾ ಚೆನ್ನಾಗಿವೆ'' ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ನಿರ್ದೇಶಕ ಕಸ್ತೂರಿ ಜಗನ್ನಾಥ್ ಮಾತನಾಡಿ ''ಒಂದು ವಿಶೇಷ ಪ್ರಯೋಗ ಅಂತ ಈ ಸಿನಿಮಾ ಪ್ಲಾನ್ ಮಾಡಿದೆವು. ತುಂಬಾ ವರ್ಷಗಳ ನಂತರ ಬರುತ್ತಿರುವ ಮೂಕಿ ಚಿತ್ರ ಇದು. ಸೌಂಡ್ ಎಫೆಕ್ಟ್‌ನಲ್ಲೇ ಕಥೆ ಹೇಳುತ್ತೇವೆ. ಈ ಚಿತ್ರವನ್ನು ಕೇರಳ‌ ಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕರು ನನಗೆ ಬಹಳ ವರ್ಷಗಳಿಂದ ಪರಿಚಯ. ಚಿತ್ರಕ್ಕೆ ಸಿಜಿ ವರ್ಕ್ ನಾನೇ ಮಾಡುತ್ತಿದ್ದೇನೆ. ಅದಕ್ಕಾಗಿ 6 ತಿಂಗಳ ಕಾಲ‌ ಕೆಲಸ ಮಾಡಿದ್ದೇನೆ. ನಾನು ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದು. ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ 8 ದಿನಗಳು ಸೆಟ್ ಹಾಕಿ ಶೂಟಿಂಗ್‌ ಮಾಡಿದ್ದೇವೆ. ಸಕಲೇಶಪುರ ಕಾಡಿನಲ್ಲಿ ಹೆಚ್ಚಿನ ಭಾಗವನ್ನು ಶೂಟ್‌ ಮಾಡುತ್ತಿದ್ದೇವೆ'' ಎಂದರು.

ಮುಂಬೈ ಮೂಲದ ನಾಯಕಿ‌ ಮಹಿಮಾ ಗುಪ್ತ ಮಾತನಾಡಿ, ''ನಾನು ಮೂಲತಃ ಮಾಡೆಲ್, ಕೆಲ ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದು ಮೊದಲ ಕನ್ನಡ ಚಿತ್ರವಾಗಿದ್ದು, ನಿಧಿ ಕಾಯುವ ಏಂಜಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ'' ಎಂದರು. ''ನಾನು ಇದುವರೆಗೂ 55 ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ಮಾಡಿದ್ದೇನೆ. ಈ ಸಿನಿಮಾ ಸಬ್ಜೆಕ್ಟ್ ಚೆನ್ನಾಗಿದೆ. ಚಿತ್ರಕ್ಕೆ 75 ಭಾಗದಷ್ಟು ಕಾಡಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗದ ಶೂಟಿಂಗ್ ಮನೆಯೊಂದರಲ್ಲಿ ಚಿತ್ರೀಕರಿಸುತ್ತಿದ್ದೇವೆ'' ಎಂದು ಹಿರಿಯ ಛಾಯಾಗ್ರಾಹಕ ಎಸಿ ಮಹೇಂದ್ರನ್ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ