Nivedita Jain Birthday: ಹುಟ್ಟಿದ್ದು ಜೂನ್ 9, ನಿಧನ ಜೂನ್ 10; ಇಂದಿಗೂ ಪ್ರಶ್ನೆಯಾಗೇ ಉಳಿದಿದೆ ದುರಂತ ನಟಿ ನಿವೇದಿತಾ ಜೈನ್ ಸಾವು
Jun 09, 2023 06:49 AM IST
ನಿವೇದಿತಾ ಜೈನ್ ಸವಿನೆನಪು
- ನಿವೇದಿತಾ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡುವಾಗ ಜಾರಿ ಬಿದ್ದರು ಎಂದು ಮನೆಯವರು ಹೇಳಿದರೆ, ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ಕೆಲವರು ಮಾತನಾಡಿಕೊಂಡರು. ಆ ಸಾವಿನ ಹಿಂದೆ ಮುಖ್ಯಮಂತ್ರಿಯೊಬ್ಬರ ಕೈವಾಡ ಇದೆ ಎಂದೂ ಹೇಳಲಾಗಿತ್ತು. ಜೊತೆಗೆ ಖ್ಯಾತ ನಟರೊಬ್ಬರ ಹೆಸರು ಕೂಡಾ ತಳುಕು ಹಾಕಿಕೊಂಡಿತ್ತು.
ಆ ಮುದ್ದು ಮುಖ ನೋಡ್ತಿದ್ರೆ ಮತ್ತೆ ಮತ್ತೆ ನೋಡಬೇಕು ಎನಿಸದೆ ಇರದು. 'ಅಮೃತವರ್ಷಿಣಿ' (Amrutha Varshini)ಚಿತ್ರದಲ್ಲಿ ನಟ ರಮೇಶ್ ಅರವಿಂದ್ (Ramesh Aravind)ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು.. ಎಂದು ಹಾಡಿ ಹೊಗಳುವಾಗ, ಸಾಹಿತಿ ಕೆ. ಕಲ್ಯಾಣ್ ಆ ಹಾಡನ್ನು ನಿವೇದಿತಾ ಜೈನ್ (Nivedita Jain) ನೋಡಿಯೇ ಬರೆದಿದ್ದೇನೋ ಎನಿಸುತ್ತದೆ. ಆ ನಗು, ಸುಂದರ ಮುಖ, ನೀಳಕಾಯ, ನೋಡಿದ ಕೂಡಲೇ ಮನಸ್ಸು ಸೆಳೆಯುವ ರೂಪ, ವ್ಯಕ್ತಿತ್ವ ಆಕೆಯದ್ದು.
16ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಚೆಲುವೆ
ಕೇವಲ 19 ವರ್ಷ ವಯಸ್ಸಿಗೆ ಸಾಕಷ್ಟು ಸಾಧನೆ ಮಾಡಿದ ನಿವೇದಿತಾ, ಇನ್ನು ಸಾಕು ಎಂದು ಎಲ್ಲರಿಗೂ ಗುಡ್ ಬೈ ಹೇಳಿ ಹೊರಟುಬಿಟ್ಟರು. ಇಂದು (ಜೂನ್ 9) ನಿವೇದಿತಾ ಜೈನ್ ಹುಟ್ಟಿದ ದಿನ. ವಿಪರ್ಯಾಸ ಎಂದರೆ ಅವರು ನಿಧನರಾಗಿದ್ದು ಜೂನ್ 10. ನಿವೇದಿತಾ ಅವರನ್ನು ನೆನಪಿಸಿಕೊಂಡರೆ ಈಗ ಅವರು ಇರಬಾರದಿತ್ತಾ ಅನ್ನಿಸುತ್ತದೆ. ಹೌದು ಆ ಹುಡುಗಿ ಈಗ ಬದುಕಿದ್ದರೆ ಮಾಡೆಲಿಂಗ್ ಕ್ಷೇತ್ರದಲ್ಲಿ , ಸಿನಿಮಾ ರಂಗದಲ್ಲಿ ಇನ್ನೂ ಹೆಸರು ಮಾಡುತ್ತಿದ್ದರು.
ನಿವೇದಿತಾ ಜೈನ್ ಹುಟ್ಟಿದ್ದು 9 ಜೂನ್ 1979 ರಲ್ಲಿ. ಇವರ ತಂದೆ ರಾಜೇಂದ್ರ ಜೈನ್, ತಾಯಿ ರೂಪಾ ಜೈನ್. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಕುಟುಂಬ ವಾಸವಿದ್ದರು. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ್ದ ನಿವೇದಿತಾ ಜೈನ್, 15ನೇ ವಯಸ್ಸಿಗೆ ಮಿಸ್ ಬೆಂಗಳೂರು ಪಟ್ಟ ಪಡೆದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಡಾ. ರಾಜ್‌ಕುಮಾರ್ ಕುಟುಂಬ ತಾವು ನಿರ್ಮಿಸುತ್ತಿದ್ದ 'ಶಿವರಂಜನಿ' ಚಿತ್ರಕ್ಕಾಗಿ ಈ ಚೆಲುವೆಯನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದರು. ರಾಘವೇಂದ್ರ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಿವೇದಿತಾ ನಟಿಸಿದರು.
ಪರಭಾಷೆ ಸಿನಿಮಾಗಳಲ್ಲೂ ನಟಿಸಿದ್ದ ಚೆಲುವೆ
ಈ ಸಿನಿಮಾ ನಂತರ ಶಿವರಾಜ್‌ಕುಮಾರ್ ಅಭಿನಯದ 'ಶಿವಸೈನ್ಯ' ಚಿತ್ರದಲ್ಲಿ ನಿವೇದಿತಾ ನಟಿಸಿದರು. ಈ ಚಿತ್ರದ ಚಿಕ್ಕಮಗಳೂರ ಚಿಕ್ಕಮಲ್ಲಿಗೆ.. ಹಾಡು ಇಂದಿಗೂ ಬಹಳ ಫೇಮಸ್. ಹೀಗೆ ಒಂದರ ಹಿಂದೊಂದರಂತೆ ಅವಕಾಶ ಪಡೆದ ನಿವೇದಿತಾ, 'ಅಮೃತವರ್ಷಿಣಿ' ಚಿತ್ರದ ಮೂಲಕವೂ ಸದ್ದು ಮಾಡಿದರು. ಒಂದು ತಮಿಳು, ಒಂದು ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದರು. ಕೇವಲ 2 ವರ್ಷಗಳ ಅಂತರದಲ್ಲಿ ನಿವೇದಿತಾ ಸುಮಾರು 10 ಸಿನಿಮಾಗಳಲ್ಲಿ ನಟಿಸಿದರು.
27 ಮೇ 1998 ನಿವೇದಿತಾ ಪಾಲಿಗೆ ಕರಾಳ ದಿನವಾಗಿತ್ತು. ಆ ದಿನ ರಾತ್ರಿ ಮಹಡಿ ಮೇಲಿದ್ದ ನಿವೇದಿತಾ 35 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆಯ ಭಾಗಕ್ಕೆ ಬಹಳ ಪೆಟ್ಟಾಗಿತ್ತು, ಕೈ ಕಾಲು ಕೂಡಾ ಮುರಿದಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದರು. ಕೇವಲ 19 ವರ್ಷಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಜೈನ್ ಬದುಕಿ ಬರಲೆಂದು ಎಲ್ಲರೂ ಪ್ರಾರ್ಥಿಸಿದ್ದರು. ಮಲ್ಯ ಆಸ್ಪತ್ರೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.
24 ದಿನಗಳ ಕಾಲ ಜೀವನ್ಮರಣ ಹೋರಾಟ
ಸುಮಾರು 24 ದಿನಗಳ ಕಾಲ ನಿವೇದಿತಾ ಜೈನ್ ಸಾವು-ಬದುಕಿನ ನಡುವೆ ಹೋರಾಡಿದರು. ಆದರೆ ವಿಧಿ ಆಕೆಗೆ ಮತ್ತೊಂದು ಅವಕಾಶ ನೀಡಲಿಲ್ಲ. ಜೂನ್ 10 ರಂದು ಬೆಳಗ್ಗೆ 11 ಗಂಟೆಗೆ ವೈದ್ಯರು ನಿವೇದಿತಾ ಜೈನ್ ಸಾವನ್ನು ದೃಢಪಡಿಸಿದರು. ಚಿಕಿತ್ಸೆ ಫಲಕಾರಿ ಆಗದೆ ನಿವೇದಿತಾ ಜೈನ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. 'ಸೂತ್ರಧಾರ' ಅವರು ನಟಿಸಿದ ಕೊನೆಯ ಸಿನಿಮಾ.
ನಿವೇದಿತಾ ಅಗಲಿ ಹೋದ ಹಿಂದೆಯೇ ಅವರ ಸಾವಿನ ಬಗ್ಗೆ ಇಲ್ಲಸಲ್ಲದ ಪುಕಾರು ಹಬ್ಬಿದವು. ನಿವೇದಿತಾ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡುವಾಗ ಜಾರಿ ಬಿದ್ದರು ಎಂದು ಮನೆಯವರು ಹೇಳಿದರೆ, ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ಕೆಲವರು ಮಾತನಾಡಿಕೊಂಡರು. ಆ ಸಾವಿನ ಹಿಂದೆ ಮುಖ್ಯಮಂತ್ರಿಯೊಬ್ಬರ ಕೈವಾಡ ಇದೆ ಎಂದೂ ಹೇಳಲಾಗಿತ್ತು. ಜೊತೆಗೆ ಖ್ಯಾತ ನಟರೊಬ್ಬರ ಹೆಸರು ಕೂಡಾ ತಳುಕು ಹಾಕಿಕೊಂಡಿತ್ತು. ಆದರೆ ನಿವೇದಿತಾ ಜೈನ್ ಕ್ಯಾಟ್ ವಾಕ್ ಮಾಡುತ್ತಿದ್ದದ್ದು ಮಿಸ್ ಬೆಂಗಳೂರು ಸ್ಪರ್ಧೆಗೆ ಭಾಗವಹಿಸುವ ಕಾರಣದಿಂದ. ಅಂತದ್ದರಲ್ಲಿ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಉದ್ದೇಶ ಇರಲಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.
ಅದೇನೇ ಇರಲಿ, ಎಷ್ಟು ಮಾತನಾಡಿದರೂ, ಎಷ್ಟೇ ಊಹಾಪೋಹ ಇದ್ದರೂ ಆಕೆ ವಾಪಸ್ ಬರುವುದಿಲ್ಲ. ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದ ನಿವೇದಿತಾ ಜೈನ್, ಅಷ್ಟು ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಬೇಸರದ ವಿಚಾರ. ಇಂದು ನಿವೇದಿತಾ ಇದ್ದಿದ್ದರೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೇನೋ......