ಅಪರ್ಣಾಗೆ ಮಕ್ಕಳೆಷ್ಟು, ಹುಟ್ಟೂರು ಯಾವುದು, ಕೊನೇ ಆಸೆ ಏನಾಗಿತ್ತು? ವರಲಕ್ಷ್ಮೀಯ ವೈಯಕ್ತಿಕ ಬದುಕಿನ ಪುಟ ತಿರುವಿದಾಗ ಕಂಡಿದ್ದಿಷ್ಟು
Jul 12, 2024 10:52 AM IST
ಅಪರ್ಣಾಗೆ ಮಕ್ಕಳೆಷ್ಟು, ಹುಟ್ಟೂರು ಯಾವುದು, ಕೊನೇ ಆಸೆ ಏನಾಗಿತ್ತು? ವರಲಕ್ಷ್ಮೀಯ ವೈಯಕ್ತಿಕ ಬದುಕಿನ ಪುಟ ತಿರುವಿದಾಗ ಕಂಡಿದ್ದಿಷ್ಟು
- ಬರುವ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣಾಗೆ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಅಪರ್ಣಾ, ಅದೇ ನಿರೂಪಣೆ ಕಲೆಯನ್ನು ಇತರರಿಗೂ ಹಂಚಲು ಪ್ಲಾನ್ ಮಾಡಿದ್ದರು. ಆದರೆ, ಅದು ಕೊನೆಗೂ ಕೈಗೂಡಲಿಲ್ಲ.
Aparna Vastarey Death: ನಟಿಯಾಗಿ, ನಿರೂಪಕಿಯಾಗಿ, ಕಿರುತೆರೆಯಲ್ಲಿಯೂ ಗುರುತಿಸಿಕೊಂಡು, ಅದರಲ್ಲೂ ಅಚ್ಚ ಕನ್ನಡದ ನಿರೂಪಣೆಯಲ್ಲಿ ತಮ್ಮದೇ ಆದ ಛಾಪೊತ್ತಿ ನಿರ್ಗಮಿಸಿದ್ದಾರೆ ಅಪರ್ಣಾ ವಸ್ತಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅಪರ್ಣಾ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಂಡಿದ್ದಿಲ್ಲ, ಈ ಕಾಯಿಲೆ ಬಗ್ಗೆಯೂ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಇತ್ತೀಚಿನ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರ್ಣಾ, ಆರೋಗ್ಯ ಸ್ಥಿತಿಯೂ ತೀರಾ ಹದಗೆಟ್ಟಿತ್ತು. ಅದರಂತೆ ಜುಲೈ 11ರ ರಾತ್ರಿ 9;30ರ ಸುಮಾರಿಗೆ ಅಪರ್ಣಾ ಇಹಲೋಕ ತ್ಯಜಿಸಿದರು.
ನಟಿ, ನಿರೂಪಕಿ ಅಪರ್ಣಾ ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನಾರಂಗಕ್ಕೆ ಆಗಮಿಸಿದ್ದರು. 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಚಂದನವನಕ್ಕೆ ಆಗಮಿಸಿದ್ದರು ಅಪರ್ಣಾ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು.
ಮಕ್ಕಳಿಲ್ಲದ ಕೊರಗೂ ಕಾಡಿತ್ತು ಅಪರ್ಣಾಗೆ
ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದು. ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿದ್ದರು. ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಂದಿನ ಆ ರೂಢಿಯೇ ಅವರ ಅನ್ನಕ್ಕೆ ದಾರಿ ಮಾಡಿಕೊಟ್ಟಿತ್ತು. ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆನಿಂತರು. ಅದಾದ ಮೇಲೆ ನಾಗರಾಜ್ ವಸ್ತಾರೆ ಜತೆಗೆ ವಿವಾಹವೂ ಆಯ್ತು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.
ಆಕಾಶವಾಣಿಯಲ್ಲಿ ಎರಡು ದಶಕ ಕೆಲಸ
ಆಕಾಶವಾಣಿಯಲ್ಲಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದರು. 1993ರಿಂದ 2010ರ ವರೆಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದ ಅಪರ್ಣಾ, ಟಿ.ಎನ್ ಸೀತಾರಾಮ್ ಅವರ ಮಾಯಾಮೃಗ, ಮುಕ್ತ ಸೀರಿಯಲ್‌ಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ನಟನೆಯ ಜತೆಗೆ ನಿರೂಪಣೆ, ಆರೋಗ್ಯ ಕಾರ್ಯಕ್ರಮಗಳು, ನೇರಪ್ರಸಾರದ ಕಾರ್ಯಕ್ರಮಗಳು, ಸಂದರ್ಶನಗಳನ್ನೂ ನಡೆಸಿಕೊಟ್ಟರು. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು. ಮಜಾಟಾಕೀಸ್ ಮೂಲಕ ಬೇರೆಯ ಎತ್ತರಕ್ಕೆ ಜಿಗಿದ ಅಪರ್ಣಾ, ನಾನು ನಗಿಸುವುದಕ್ಕೂ ಸೈ ಎಂದು ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಗಮನ ಸೆಳೆದರು.
ಈಡೇರದ ಕೊನೇ ಆಸೆ..
ಬರುವ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣಾಗೆ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಅಪರ್ಣಾ, ಅದೇ ನಿರೂಪಣೆ ಕಲೆಯನ್ನು ಇತರರಿಗೂ ಹಂಚಲು ಪ್ಲಾನ್ ಮಾಡಿದ್ದರು. ನಿರೂಪಣೆ ಕುರಿತು ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ, ಆ ಕನಸು ಕೊನೆಗೂ ಈಡೇರಲಿಲ್ಲ. ಈ ವಿಚಾರವನ್ನು ಅವರ ಪತಿ ನಾಗರಾಜ್ ಹೇಳಿಕೊಂಡಿದ್ದಾರೆ.