ನಗಿಸುತ್ತಲೇ ಕಾಲೇಜಿನ ನೆನಪಿನಂಗಳಕ್ಕೆ ಕರೆದೊಯ್ಯುವ ಹಿಂಬದಿ ಬೆಂಚಿನ ಹುಡುಗ್ರು; ಬ್ಯಾಕ್ ಬೆಂಚರ್ಸ್ ಸಿನಿಮಾ ವಿಮರ್ಶೆ
Jul 21, 2024 09:39 AM IST
ನಗಿಸುತ್ತಲೇ ಕಾಲೇಜಿನ ನೆನಪಿನಂಗಳಕ್ಕೆ ಕರೆದೊಯ್ಯುವ ಹಿಂಬದಿ ಬೆಂಚಿನ ಹುಡುಗ್ರು; ಬ್ಯಾಕ್ ಬೆಂಚರ್ಸ್ ಸಿನಿಮಾ ವಿಮರ್ಶೆ
- ಬ್ಯಾಕ್ ಬೆಂಚರ್ಸ್ ಚಿತ್ರದ ಕಥೆ ಹಳೆಯದಾದರೂ, ಅದನ್ನು ಹೊಸಬರ ಮೂಲಕ ತೆರೆಗೆ ತರಲಾಗಿದೆ. ಹಾಗಂತ ಇಲ್ಲಿ ಗಹನ, ಗಂಭೀರ ವಿಚಾರದ ಚರ್ಚೆಯೋ, ಮತ್ತೊಂದು ಮಗದೊಂದರ ಕಥೆಯಿಲ್ಲ. ನವಿರಾಗಿ ಸಾಗುವ ಕಥೆಯಷ್ಟೇ. ಅದನ್ನೇ ಹೊಸಮುಖಗಳ ಜತೆಗೆ ನಗಿಸುವ, ಹಳೇದನ್ನು ಮೆಲುಕು ಹಾಕುವ ಪ್ರಯತ್ನವಾಗಿದೆ. ಇಲ್ಲಿದೆ Back Bencherz Movie Review.
Back Bencherz Movie Review: ಚಿತ್ರಮಂದಿರಕ್ಕೆ ಹೆಚ್ಚು ಜನ ಬರ್ತಾರೆ ಅಂದರೆ ಅದರಲ್ಲಿ ಕಾಲೇಜು ಯುವಕರದ್ದು ಹೆಚ್ಚಿನ ಪಾಲು. ಆ ಯುವಕರನ್ನೇ ಚಿತ್ರಮಂದಿರದತ್ತ ಕರೆತರಲು ಬ್ಯಾಕ್ ಬೆಂಚರ್ಸ್ (Back Bencherz) ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಜಶೇಖರ್. ಈ ಹಿಂದೆ ಕನ್ನಡದಲ್ಲಿ ಯುವಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಕೆಲವೊಂದಿಷ್ಟು ನೋಡುಗರ ಗಮನ ಸೆಳೆದು, ಇಂದಿಗೂ ಎಲ್ಲರ ಮನಸ್ಸಿನಲ್ಲಿ ಹಸಿರಾಗಿವೆ. ಇದೀಗ ಅಂಥ ಸಿನಿಮಾಗಳ ಸಾಲಿಗೆ ಬ್ಯಾಕ್ ಬೆಂಚರ್ಸ್ ಸಿನಿಮಾ ಸೇರಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಅಂದರೆ, ನವಿರು ಹಾಸ್ಯ, ಕಾಲೇಜು ಪ್ರೀತಿ, ತುಂಟಾಟದ ಜತೆಗೆ ಒಂದಷ್ಟು ಮನಮುಟ್ಟುವ ವಿಚಾರಗಳ ಬಗ್ಗೆಯೂ ಬ್ಯಾಂಕ್ ಬೆಂಚರ್ಸ್ ಕಡೆಯಿಂದ ಮಾತನಾಡಿಸುವ ಪ್ರಯತ್ನ ನಿರ್ದೇಶಕ ರಾಜಶೇಖರ್ ಅವರಿಂದ ಆಗಿದೆ.
ಶೀರ್ಷಿಕೆಯೇ ಸೂಚಿಸುವಂತೆ 'ಬ್ಯಾಕ್ ಬೆಂಚರ್ಸ್' ಎಂಬುದು ಹೆಸರಾಂತ ಕಾಲೇಜಿನ ಅಂತಿಮ ವರ್ಷದ ಬ್ಯಾಚ್‌ನ ಸ್ನೇಹಿತರ ಗುಂಪು. ಆರ್ಯ, ಕುಶ್, ವಿಕ್ಕಿ ಮತ್ತು ನವೀನ್ ಈ ಗುಂಪಿನ ಸುತ್ತ ಇಡೀ ಕಥೆ ಸುತ್ತುತ್ತದೆ. ಈ ಮೇಲೆ ಸೂಚಿಸಿದ ಹೆಸರಿನವರೆಲ್ಲ ಓದಿನಲ್ಲಿ ತುಂಬ ಮುಂದು. ಅದನ್ನು ಹೊರತುಪಡಿಸಿದರೆ ಅವರಿಗೆ ಬೇರೆ ಏನೂ ಗೊತ್ತಿಲ್ಲ. ಬೇರೆ ಚಟುವಟಿಕೆಗಳಲ್ಲಿಯೂ ಅವರಿಗೆ ಆಸಕ್ತಿ ಇಲ್ಲ. ಹೀಗಿರುವಾಗ ಅದೇ ಕ್ಲಾಸ್‌ನ ಕೆಲವು ಬ್ಯಾಕ್ ಬೆಂಚರ್ಸ್‌ಗಳ ಹಾವಳಿ ಸಣ್ಣದೇನಲ್ಲ. ಎಲ್ಲರನ್ನು ಕಿಚಾಯಿಸುವುದೇ ಅವರ ಪರಮ ಗುರಿ. ಇಂಥ ತರಲೆ ಹುಡುಗರನ್ನ ಮೊದಲ ಬೆಂಚ್‌ಗೆ ಶಿಫ್ಟ್ ಮಾಡಿ, ಮೊದಲ ಬೆಂಚ್‌ನವರನ್ನ ಕೊನೆಯ ಸಾಲಿಗೆ ಹಾಕಿದ್ರೆ ಏನಾಗಬಹುದು? ಇದೇ ಈ ಬ್ಯಾಕ್ ಬೆಂಚರ್ಸ್ ಸಿನಿಮಾದ ಕಥೆ.
ಎಲ್ಲರ ಮನಸ್ಸಲ್ಲೂ ಕಾಲೇಜು ದಿನಗಳಿಗೆ ವಿಶೇಷ ಸ್ಥಾನಮಾನ ಇರುತ್ತೆ. ಆ ಅನುಭವವೇ ಬೇರೆ. ವರ್ಷ, ದಶಕಗಳು ಕಳೆದರೂ, ಆ ದಿನಗಳನ್ನು ನೆನೆದರೆ ಒಳಗೊಳಗೆ ಪುಳಕ ಭಾವ ಮೂಡುತ್ತದೆ. ನೆನಪುಗಳು ಕಣ್ಣ ಮುಂದೆ ತೇಲಿ ಬರುತ್ತವೆ. ಈ ಎಲ್ಲ ಅಂಶಗಳೂ ಬ್ಯಾಕ್ ಬೆಂಚರ್ಸ್ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ. ಕಾಲೇಜು ಹಿನ್ನೆಲೆಯ ಸಿನಿಮಾ ಎಂದ ತಕ್ಷಣ, ನಿರ್ದೇಶಕರು ಪ್ರೇಕ್ಷಕರಿಗೆ ಬೋಧನೆ ಮಾಡುವ ಗೋಜಿಗೆ ಹೋಗಿಲ್ಲ. ಅದೇ ಪ್ರೇಕ್ಷಕನಿಗೆ ತಮ್ಮ ಜೀವನದಲ್ಲಿ ಯಾವುದೆಲ್ಲ ಅತಿ ಮುಖ್ಯ ಎಂಬುದನ್ನು ಅರ್ಥ ಮಾಡಿಸುವ ಕೆಲಸ ಅವರಿಂದ ಸಂದಾಯವಾಗಿದೆ. ನೋಡುಗನನ್ನು ಒಂದು ಫ್ರೆಶ್ ಮೂಡ್‌ಗೆ ಕರೆದೊಯ್ಯುವ ಈ ಸಿನಿಮಾ, ಒಮ್ಮೊಮ್ಮೆ ಅತಿರೇಕ ಅನಿಸುವುದೂ ಉಂಟು.
ಕಥೆ ಹಳೆಯದಾದರೂ, ಅದನ್ನು ಹೊಸಬರ ಮೂಲಕ ತೆರೆಗೆ ತರಲಾಗಿದೆ. ಹಾಗಂತ ಇಲ್ಲಿ ಗಂಭೀರ ವಿಚಾರದ ಚರ್ಚೆಯೋ, ಮತ್ತೊಂದು ಮಗದೊಂದರ ಕಥೆಯಿಲ್ಲ. ನವಿರಾಗಿ ಸಾಗುವ ಕಥೆಯಷ್ಟೇ. ಅದನ್ನೇ ಹೊಸಮುಖಗಳ ಜತೆಗೆ ನಗಿಸುವ, ಹಳೇದನ್ನು ಮೆಲುಕು ಹಾಕುವ ಪ್ರಯತ್ನವಾಗಿದೆ. ಹೊಸ ಕಲಾವಿದರು ಸಿಕ್ಕ ಅವಕಾಶವನ್ನು ಸೂಕ್ತವಾಗಿಯೇ ಬಳಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಪರಿಚಯಗೊಳ್ಳುತ್ತಿದ್ದಾರೆ. ರಂಜನ್, ಶಶಾಂಕ್ ಸಿಂಹ, ಮಾನ್ಯ ಗೌಡ, ಆಕಾಶ್ ಎಂ.ಪಿ, ಜತಿನ್ ಆರ್ಯನ್, ಚತುರ್ಥಿ ರಾಜ್, ಕುಂಕುಮ್ ಸಿಕ್ಕ ಪಾತ್ರವನ್ನೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಿರಿಯ ನಟ ಸುಚೇಂದ್ರ ಪ್ರಸಾದ್ ಗಂಭೀರ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ಈ ಸಿನಿಮಾದಲ್ಲಿ ಅವರಿಗೆ ಹಾಸ್ಯದ ರಸದೌತಣ ಉಣಬಡಿಸುವ ಕೆಲಸ ಕೊಟ್ಟಿದ್ದಾರೆ ನಿರ್ದೇಶಕರು. ಅರವಿಂದ್ ಕುಪ್ಳಿಕರ್ ಅವರೂ ಸಹ ನಗಿಸುವ ಕೆಲಸಕ್ಕೆ ಸಾಥ್ ನೀಡಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಮತ್ತು ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್‌ಗಳಲ್ಲಿ ಒಂದು.
ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ರಂಜಿಸಬೇಕು ಎಂಬುದು ಚಿತ್ರತಂಡದ ಮುಖ್ಯ ಉದ್ದೇಶ. ಸಿನಿಮಾ ಅವಧಿ 2 ಗಂಟೆ 10 ನಿಮಿಷಗಳು ಆಗಿದ್ದರೂ, ಕೊಂಚ ಎಳೆದಂತಾಗುತ್ತದೆ. ಇನ್ನು ಕೆಲವು ಗಂಭೀರ ಚಿತ್ರಪ್ರೇಮಿಗಳಿಗೆ ಈ ಬ್ಯಾಕ್ ಬೆಂಚರ್ಸ್ ಸಿನಿಮಾ ಇಷ್ಟವಾಗದೇ ಇರಬಹುದು. ತರಲೆ ತಮಾಷೆಗಳಿಗೇ ಹೆಚ್ಚಿನ ಸ್ಥಾನ ಕಲ್ಪಿಸಿರುವುದರಿಂದ, ಹೆಚ್ಚಿನದೇನನ್ನೂ ಇಲ್ಲಿ ನಿರೀಕ್ಷಿಸಲಾಗದು. ಇದರಾಚೆಗೆ ಕಾಲೇಜಿನಲ್ಲಿನ ಹಳೇ ದಿನಗಳನ್ನು ನೆನಪಿಸಿಕೊಂಡು, ನಕ್ಕು ಹಗುರಾಗಲಿಕ್ಕಾದರೂ ಈ ಸಿನಿಮಾ ವೀಕ್ಷಿಸಬಹುದು. ಹಾಗಂತ ಈ ಸಿನಿಮಾ ನೋಡುಗನಿಗೆ ತೀವ್ರ ನಿರಾಸೆ ಮಾಡುವುದಿಲ್ಲ. ಆದರೆ ಪೂರ್ಣ ತೃಪ್ತ ಭಾವವೂ ಮೂಡುವುದಿಲ್ಲ.
ಸಿನಿಮಾ: ಬ್ಯಾಕ್ ಬೆಂಚರ್ಸ್
ನಿರ್ಮಾಣ: ಪಿ.ಪಿ. ಪ್ರೊಡಕ್ಷನ್ಸ್ (ರಮ್ಯಾ)
ನಿರ್ದೇಶನ: ಬಿ.ಆರ್. ರಾಜಶೇಖರ್
ಪಾತ್ರವರ್ಗ: ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ., ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಲಿಕರ್, ಮಾನ್ಯ ಗೌಡ, ಅನುಷಾ ಸುರೇಶ್ ಇತರರು.
ರೇಟಿಂಗ್: 3/5
ವಿಮರ್ಶೆ: ಮಂಜು ಕೊಟಗುಣಸಿ