ಹೆತ್ತವರು, ಮಕ್ಕಳು ನೋಡಲೇಬೇಕಾದ ಸಿನಿಮಾವಿದು; ಬಾಲ್ಯ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ
Sep 23, 2024 06:13 PM IST
ಹೆತ್ತವರು, ಮಕ್ಕಳು ನೋಡಲೇಬೇಕಾದ ಸಿನಿಮಾವಿದು; ಬಾಲ್ಯ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ
ಹೊಸಬರು ನಿರ್ಮಿಸಿ, ನಿರ್ದೇಶನ ಮಾಡಿರುವ ಬಾಲ್ಯ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು ತೆರೆಗೆ ಬರಲು ಸಿದ್ಧವಿದೆ. ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಿನಿಮಾವನ್ನು ಪ್ರತಿ ಪೋಷಕರು ಹಾಗೂ ಮಕ್ಕಳು ನೋಡಬೇಕು ಎಂದು ಚಿತ್ರತಂಡ ಹೇಳಿದೆ.
ಈಗಿನ ಜಂಜಾಟಗಳು, ಒತ್ತಡ, ಕಷ್ಟಗಳನ್ನು ನೆನಪಿಸಿಕೊಂಡರೆ ಬಾಲ್ಯ ಮತ್ತೆ ಬರಬಾರದೇ ಅಂತ ಎಲ್ಲರಿಗೂ ಫೀಲ್ ಆಗುವುದು ಸಹಜ. ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅನ್ನೋದು ಬಹಳ ಅಮೂಲ್ಯ. ಆದರೆ ಬಾಲ್ಯ ಚೆನ್ನಾಗಿದ್ದರೆ, ಬಾಲ್ಯದಲ್ಲಿ ಉತ್ತಮ ಅಂಶಗಳನ್ನು ಕಲಿತರೆ ಅದು ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ.
ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನು ತಿಳಿಸುವ ಬಾಲ್ಯ ಹೆಸರಿನ ಕನ್ನಡ ಸಿನಿಮಾ ಕನ್ನಡದಲ್ಲಿ ತಯಾರಾಗಿದ್ದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸತ್ಯನಾರಾಯಣಾಚಾರ್ ನಿರ್ಮಾಣದ ಈ ಚಿತ್ರವನ್ನು ವಿ.ಎಂ.ರಾಜು ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರತಂಡ ಟೀಸರ್ ಬಿಡುಗಡೆಗೊಳಿಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.
ಎಲ್ಲಾ ಪೋಷಕರು, ಮಕ್ಕಳು ನೋಡಬೇಕಾದ ಸಿನಿಮಾ
ನಿರ್ದೇಶಕ ವಿ.ಎಂ.ರಾಜು ಮಾತನಾಡಿ, ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಚಿತ್ರದ ಕಥೆ ಸಿದ್ದವಾಗಿತ್ತು. ಬಿ. ಪಟೇಲಪ್ಪ ಅವರು ಸೇರಿದಂತೆ ಅನೇಕ ಸ್ನೇಹಿತರು ಬಾಲ್ಯ ಸಿನಿಮಾ ಕಥೆಗೆ ಸಾಥ್ ನೀಡಿದ್ದಾರೆ. ಈ ಕಥೆಯನ್ನು ಮೆಚ್ಚಿಕೊಂಡ ಸತ್ಯ ನಾರಾಯಣಾಚಾರ್, ನಿರ್ಮಾಣ ಮಾಡಲು ಮುಂದಾದರು. ಮಕ್ಕಳಿಗೆ 6 ರಿಂದ16 ವರ್ಷ ಅಮೂಲ್ಯವಾದದ್ದು. ಆ ಸಮಯದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಇಂತಹ ಯೂನಿವರ್ಸಲ್ ಸಬ್ಜೆಕ್ಟ್ ಇಟ್ಟುಕೊಂಡು ಈ ಚಿತ್ರ ಬರುತ್ತಿದೆ.
ಪ್ರತಿಯೊಬ್ಬ ಪೋಷಕರು ಹಾಗೂ ಮಕ್ಕಳು ನೋಡಲೇಬೇಕಾದ ಸಿನಿಮಾ ಇದು. ನಾರಾಯಣಸ್ವಾಮಿ, ನಿಶ್ಚಿತ, ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದಕ್ಷಿತ್, ಕುಮಾರಿ ದೀಕ್ಷ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಇಂದು ವಿಶ್ವನಾಥ್ ಸಂಗೀತ ನೀಡಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು. ಕನ್ನಡ ಚಿತ್ರರಂಗದ ಮೊದಲ ಪಿಆರ್‌ಓ ಸುಧೀಂದ್ರ ನನ್ನ ಗುರು ಸಮಾನರು. ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ನಿರ್ದೇಶಕ ವಿ.ಎಂ.ರಾಜು ತಿಳಿಸಿದರು.
ನಿರ್ಮಾಪಕ ಸತ್ಯನಾರಾಯಣಾಚಾರ್, ಮಾತನಾಡಿ ನಾನು ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿದ್ದೇನೆ. ಇದು 3ನೇ ಚಿತ್ರ. ರಾಜು ಅವರ ಕಥೆ ಚೆನ್ನಾಗಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು . ಚಿತ್ರದಲ್ಲಿ ನಟಿಸಿರುವ ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದೀಕ್ಷಿತ್, ಕುಮಾರಿ ದೀಕ್ಷ ಹಾಗೂ ಇನ್ನಿತರ ಕಲಾವಿದರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ಇಂದು ವಿಶ್ವನಾಥ್ ಮಾಹಿತಿ ನೀಡಿದರು. ರಮೇಶ್ ಕೊಯಿರಾ ಛಾಯಾಗ್ರಹಣವಿರುವ ಬಾಲ್ಯ ಚಿತ್ರಕ್ಕೆ ಎಟಿ ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನೀಲ್ ಕೆಂಗಾಪುರ್, ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.