ಅಕ್ರಮ ವಲಸೆ, ಆಂತರಿಕ ಭದ್ರತೆ ಕುರಿತು ನಿರ್ಮಾಣವಾಯ್ತು ಹೈನ ಸಿನಿಮಾ; ಚಿತ್ರಕ್ಕೆ ಸಂಸದ ತೇಜಸ್ವಿ ಸೂರ್ಯ ಬೆಂಬಲ
Jan 21, 2025 06:34 AM IST
ಅಕ್ರಮ ವಲಸೆ, ಆಂತರಿಕ ಭದ್ರತೆ ಕುರಿತು ನಿರ್ಮಾಣವಾಯ್ತು ಹೈನ ಸಿನಿಮಾ
- ರಾಷ್ಟ್ರ ಭಕ್ತಿಯ ಕಥೆಯುಳ್ಳ ಹೈನ ಹೆಸರಿನ ಸಿನಿಮಾ ಇದೇ ಮಾಸಾಂತ್ಯಕ್ಕೆ ಚಿತ್ರಮಂದಿರಗಳಿಗೆ ಎಂಟ್ರಿಯಾಗುತ್ತಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಟ್ರೇಲರ್‌ಅನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

Hyena Movie Trailer: ಅಕ್ರಮ ವಲಸಿಗರು ದೇಶಕ್ಕೆ ನುಸುಳಿ, ಹೇಗೆ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ದೇಶದ ಆಂತರಿಕ ಭದ್ರತೆ ಜತೆಗೆ ಭಯೋತ್ಪಾದಕರಿಗೆ ಹಣ ಎಲ್ಲೆಲ್ಲಿಂದ ಹರಿದುಬರುತ್ತದೆ ಎಂಬಿತ್ಯಾದಿ ವಿಚಾರಗಳ ಹೈನ ಸಿನಿಮಾ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ವಿಭಿನ್ನ ಕಥಾಹಂದರ ಹೊಂದಿರುವ ದೇಶಪ್ರೇಮ ಕುರಿತ ಸಿನಿಮಾ, ಇದೇ ತಿಂಗಳ 31 ರಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಹೈನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡಲು "ಹೈನ" ಚಿತ್ರ ಮಾಡಿದ್ದಾರೆ. ಪ್ರಚಲಿತ ವಿಷಯ ಮುಂದಿಟ್ಟುಕೊಂಡು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಕೂಡ ಈ ಚಿತ್ರದ ಮೂಲಕ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಸಮಾಜದಲ್ಲಿ ಜಾಗೃತಿ ಉಂಟಾಗಲಿ, ವೆಂಕಟ್ ಭಾರಧ್ವಜ್ ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ, ಇನ್ನಷ್ಟು ಸಿನಿಮಾ ಅವರಿಂದ ಬರಲಿ ಎಂದು ಸಂಸದ ತೇಜಸ್ವಿ ಸೂರ್ಯ ಹಾರೈಸಿದರು.
ಇದೊಂದು ರಾಷ್ಟ್ರಭಕ್ತಿಯ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತನಾಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇಂತಹ ಚಿತ್ರ ನಿರ್ದೇಶನ ಮಾಡಲು ಬಹಳ ಖುಷಿಯಾಗಿದೆ. ಗುಪ್ತಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ನಮ್ಮ ಚಿತ್ರದಲ್ಲಿ ಬೇರೆ ಕೆಲವು ದೇಶಗಳ ಹೆಸರನ್ನು ಬಳಸಿದ್ದೆವು. ಆ ಹೆಸರನ್ನು ಬಳಸದಂತೆ ಸೆನ್ಸಾರ್ ಮಂಡಳಿ ಹೇಳಿದೆ. ಅದು ಸ್ವಲ್ಪ ಬೇಸರವಾಗಿದೆ. ಉಳಿದಂತೆ ಚಿತ್ರತಂಡದ ಸಹಕಾರದಿಂದ "ಹೈನ" ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನವರಿ 31ರಂದು ಬಿಡುಗಡೆಯಾಗುತ್ತಿದೆ ಎಂದರು.
ಅಕ್ರಮ ವಲಸಿಗರು ದೇಶಕ್ಕೆ ನುಸುಳಿ, ಹೇಗೆ ಉಪಯೋಗಿಸುತ್ತಿದ್ದಾರೆ . ದೇಶದ ಆಂತರಿಕ ಭದ್ರತೆ , ಭಯೋತ್ಪಾದಕರಿಗೆ ಹಣ ಹೇಗೆ ಬರುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕಥೆ ಬರೆದಿರುವ ಲಕ್ಷ್ಮಣ್ ಶಿವಶಂಕರ್ ಹೇಳಿದರು. ಛಾಯಾಗ್ರಾಹಕ ನಿಶಾಂತ್ ನಾಣಿ , ಸಂಕಲನಕಾರ ಶಮೀಕ್ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರಿದ್ದಾರೆ.