PB Sreenivas Birthday: ಪಿಬಿ ಶ್ರೀನಿವಾಸ್ ಸಿರಿಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಹಾಡುಗಳಿವು
Sep 22, 2023 04:12 PM IST
ಪಿಬಿ ಶ್ರೀನಿವಾಸ್ 93ನೇ ಹುಟ್ಟುಹಬ್ಬ
ಇಂದು ಖ್ಯಾತ ಗಾಯಕ ಪಿಬಿ ಶ್ರೀನಿವಾಸ್ ಅವರ 93ನೇ ಜನ್ಮದಿನ. (ಜನನ: 22 ಸೆಪ್ಟೆಂಬರ್ 1930 -ನಿಧನ: 14 ಏಪ್ರಿಲ್ 2013) ಪಿಬಿ ಶ್ರೀನಿವಾಸ್ ಮೂಲತ: ಆಂಧ್ರಪ್ರದೇಶದವರಾದರೂ ಕನ್ನಡ ಸಿನಿಮಾಗೆ ಅವರು ನೀಡಿದ ಕೊಡುಗೆ ಅಪಾರ. ಕನ್ನಡದಲ್ಲಿ ಅವರು ಹಾಡಿರುವ ಎಲ್ಲಾ ಹಾಡುಗಳು ಇಂದಿಗೂ ಸಂಗೀತಪ್ರಿಯರನ್ನು ತಲೆದೂಗುವಂತೆ ಮಾಡುತ್ತಿದೆ.
'ಸಂಪತ್ತಿಗೆ ಸವಾಲ್' ಚಿತ್ರದ ಮೂಲಕ ಡಾ ರಾಜ್‌ಕುಮಾರ್ ಗಾಯಕರಾದರು. ಆದರೆ ಅದಕ್ಕೂ ಮುನ್ನ ಅಣ್ಣಾವ್ರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಪಿಬಿ ಶ್ರೀನಿವಾಸ್ ಹಾಡಿದ್ದರು. ಅವರು ಹಾಡಿರುವ ಎಲ್ಲಾ ಹಾಡುಗಳು ಒಂದಕ್ಕಿಂದ ಒಂದು ಚೆಂದ. ಅದರಲ್ಲಿ ಈ ಹತ್ತು ಹಾಡುಗಳಂತೂ ಪ್ರತಿ ಕನ್ನಡಿಗರಿಗೂ ಮೋಸ್ಟ್ ಫೇವರೆಟ್ ಎನ್ನಬಹುದು. ಪಿಬಿ ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಓದುಗರಿಗಾಗಿ ಈ ವಿಶೇಷ ಬರಹ.
1. ಬಿಂಕದ ಸಿಂಗಾರಿ
ಡಾ ರಾಜ್‌ಕುಮಾರ್ ಹಾಗೂ ಲೀಲಾವತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಕನ್ಯಾರತ್ನ' ಚಿತ್ರದ ಬಿಂಕದ ಸಿಂಗಾರಿ, ಮೈ ಡೊಂಕಿನ ವಯ್ಯಾರಿ ಹಾಡಂತೂ ಇಂದಿನ ಯುವಜನತೆಗೂ ಇಷ್ಟವಾದ ಹಾಡು. 1963ರಲ್ಲಿ ತೆರೆ ಕಂಡಿದ್ದ ಈ ಚಿತ್ರದ ಹಾಡುಗಳಿಗೆ ಜಿಕೆ ವೆಂಕಟೇಶ್ ಸಂಗೀತ ನಿರ್ದೇಶಿಸಿದ್ದರು.
2. ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ಕಲ್ಪನಾ ಹಾಗೂ ಡಾ ರಾಜ್‌ಕುಮಾರ್ ನಟಿಸಿರುವ 'ಗಾಂಧಿನಗರ' ಚಿತ್ರದ ಹಾಡು ಇದು. ಈ ಹಾಡಿಗೆ ಚಿ ಉದಯಶಂಕರ್ ಸಾಹಿತ್ಯ ಬರೆದಿದ್ದರೆ ಸತ್ಯಂ ಸಂಗೀತ ನೀಡಿದ್ದಾರೆ. 1968ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.
3. ಹಳ್ಳಿಯಾದರೇನು ಶಿವ
'ಮೇಯರ್ ಮುತ್ತಣ್ಣ' ಚಿತ್ರದ ಹಾಡು ಇದು. ಸಿನಿಮಾ 1969ರಲ್ಲಿ ತೆರೆ ಕಂಡಿತ್ತು. ಹಾಡಿನ ಸಾಹಿತ್ಯ ಬಹಳ ಅರ್ಥಪೂರ್ಣವಾಗಿದೆ. ಚಿ ಉದಯ ಶಂಕರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ.
4. ಆಡಿಸಿ ನೋಡು ಬೀಳಿಸಿ ನೋಡು
1970 ರಲ್ಲಿ ತೆರೆ ಕಂಡ 'ಕಸ್ತೂರಿ ನಿವಾಸ' ಚಿತ್ರದ ಈ ಹಾಡನ್ನು ಕನ್ನಡ ಸಿನಿಪ್ರಿಯರು ಎಂದೆಂದಿಗೂ ಮರೆಯಲಾರರು. ಈ ಸಿನಿಮಾಗೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ಈ ಹಾಡಿನ ಒಂದು ಸಾಲನ್ನು ಪುನೀತ್ ರಾಜ್‌ಕುಮಾರ್ ಅವರ 'ರಾಜಕುಮಾರ' ಸಿನಿಮಾಗೂ ಬಳಸಿಕೊಳ್ಳಲಾಗಿದೆ.
5. ನೀ ಬಂದು ನಿಂತಾಗ
'ಕಸ್ತೂರಿ ನಿವಾಸ' ಚಿತ್ರದ ಈ ಹಾಡು ಕೂಡಾ ಕನ್ನಡ ಸಿನಿಪ್ರಿಯರಿಗೆ ಅಚ್ಚು ಮೆಚ್ಚು. ಡಾ. ರಾಜ್‌ಕುಮಾರ್ ಹಾಗೂ ಆರತಿ ಹಾಡುವ ಡ್ಯೂಯೆಟ್ ಸಾಂಗ್ ಇದು.
6. ನಗು ನಗುತಾ ನಲಿ
1972 ರಲ್ಲಿ ರಿಲೀಸ್ ಆದ 'ಬಂಗಾರದ ಮನುಷ್ಯ' ಚಿತ್ರದ ಈ ಹಾಡು ಕೂಡಾ ಕನ್ನಡ ಸಿನಿಪ್ರಿಯರ ಮನಸ್ಸಿಗೆ ಬಹಳ ಹತ್ತಿರವಾದ ಹಾಡು. ನಾಯಕ ತಾನು ಹುಟ್ಟಿ ಬೆಳೆದ ಊರಿಗೆ ಹೋಗುವಾಗ ಹಾಡುವ ಹಾಡು ಇದು. ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ಬರೆದಿರುವ ಈ ಹಾಡಿಗೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದಾರೆ.
7. ಬಾರೇ ಬಾರೇ ಚೆಂದದ ಚೆಲುವಿನ ತಾರೆ
ಡಾ. ವಿಷ್ಣುವರ್ಧನ್ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ 'ನಾಗರಹಾವು' ಸಿನಿಮಾದ ಈ ಹಾಡು ಸಿನಿಮಾಭಿಮಾನಿಗಳ ಅಚ್ಚು ಮೆಚ್ಚಿನ ಹಾಡು. ಸಿನಿಮಾ 1972ರಲ್ಲಿ ತೆರೆ ಕಂಡಿತ್ತು. ವಿಜಯ ಭಾಸ್ಕರ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ವಿಜಯನಾರಸಿಂಹ ಹಾಡಿನ ಸಾಹಿತ್ಯ ಬರೆದಿದ್ದಾರೆ.
8. ಎಂದೆಂದೂ ನಿನ್ನನು ಮರೆತು
1974ರಲ್ಲಿ ತೆರೆ ಕಂಡ 'ಎರಡು ಕನಸು' ಸಿನಿಮಾದ ಈ ಹಾಡಿನಲ್ಲಿ ಅಣ್ಣಾವ್ರ ಜೊತೆ ಮಂಜುಳಾ ಡ್ಯೂಯೆಟ್ ಹಾಡಿದ್ದರು. ಪಿಬಿ ಶ್ರೀನಿವಾಸ್ ಜೊತೆಗೆ ವಾಣಿ ಜಯರಾಂ ದನಿಗೂಡಿಸಿದ್ದರು. ಚಿ ಉದಯ್ ಶಂಕರ್ ಸಾಹಿತ್ಯಕ್ಕೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ.
9. ಮಲೆನಾಡ ಹೆಣ್ಣ ಮೈ ಬಣ್ಣ
ಡಾ ವಿಷ್ಣುವರ್ಧನ್ ನಟಿಸಿರುವ 'ಬೂತಯ್ಯನ ಮಗ ಅಯ್ಯು' ಚಿತ್ರದ ಈ ಹಾಡು ಕೂಡಾ ಪಿಬಿ ಶ್ರೀನಿವಾಸ್ ಹಾಡಿರುವ ಎವರ್‌ಗ್ರೀನ್ ಹಾಡುಗಳಲ್ಲಿ ಒಂದು. ಎಸ್ ಜಾನಕಿ ಪಿಬಿಎಸ್ ಜೊತೆ ದನಿಗೂಡಿಸಿದ್ದಾರೆ. 1974ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಚಿತ್ರದ ಹಾಡುಗಳಿಗೆ ಜಿಕೆ ವೆಂಕಟೇಶ್ ಸಂಗೀತಿ ನೀಡಿದ್ದರು. ಚಿ ಉದಯಶಂಕರ್, ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
10. ಶುಭ ಮಂಗಳ
ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಶುಭ ಮಂಗಳ' ಚಿತ್ರದ ಹಾಡು ಇದು. ಚಿತ್ರದಲ್ಲಿ ಶ್ರೀನಾಥ್, ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡಿಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಾಹಿತ್ಯ ಬರೆದಿದ್ದು ವಿಜಯ ಭಾಸ್ಕರ್ ಸಂಗೀತ ನೀಡಿದ್ದಾರೆ. ಸಿನಿಮಾ 1975ರಲ್ಲಿ ತೆರೆ ಕಂಡಿತ್ತು.
ಪಿಬಿ ಶ್ರೀನಿವಾಸ್ 14 ಏಪ್ರಿಲ್ 2013 ರಂದು ನಿಧನನಾದರು. ಪಿಬಿಎಸ್ ಕಣ್ಮರೆಯಾದರೂ ಅವರ ಹಾಡುಗಳು ಎಂದಿಗೂ ಚಿರಾಯು.