logo
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಸಾಂಗ್ ಬಿಡುಗಡೆ; ಸಿಎಂ ಸಿದ್ದರಾಮಯ್ಯರ ಪಂಚ ಗ್ಯಾರಂಟಿಗೆ ಹಾಡಿನ ಭಾಗ್ಯ

ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಸಾಂಗ್ ಬಿಡುಗಡೆ; ಸಿಎಂ ಸಿದ್ದರಾಮಯ್ಯರ ಪಂಚ ಗ್ಯಾರಂಟಿಗೆ ಹಾಡಿನ ಭಾಗ್ಯ

Praveen Chandra B HT Kannada

Mar 11, 2024 12:55 PM IST

google News

ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಸಾಂಗ್ ಬಿಡುಗಡೆ

    • Bhagyaraja Namma Mukhyamantri: ಮುಖ್ಯಮಂತ್ರಿ ಸಿದ್ದರಾಮಯ್ಯರ ವ್ಯಕ್ತಿತ್ವ ಮತ್ತು ಸಾಧನೆ ಗುಣಗಾನದ ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಆಲ್ಬಂ ಸಾಂಗ್‌ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್.‌ನಾರಾಯಣ್ ಈ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಸಾಂಗ್ ಬಿಡುಗಡೆ
ಭಾಗ್ಯರಾಜ ನಮ್ಮ ಮುಖ್ಯಮಂತ್ರಿ ವಿಡಿಯೋ ಸಾಂಗ್ ಬಿಡುಗಡೆ

ಬೆಂಗಳೂರು: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ಗುಣಗಾನವಿರುವ "ಭಾಗ್ಯರಾಜ ನಮ್ಮ ಮುಖ್ಯಮಂತ್ರಿ" ವಿಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಅಂದಹಾಗೆ, ಈ ಹಾಡುಗಳನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್.‌ನಾರಾಯಣ್ ಬರೆದಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಎಸ್.‌ನಾರಾಯಣ್ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳ ಬಗ್ಗೆ ಅಲ್ಲದೆ ಅವರು ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತಂತೆ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.

ಮುಖ್ಯಮಂತ್ರಿಗಳ ಆಪ್ತರೂ ಆದ ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರು ಈ ಆಲ್ಬಂಗೆ ಬಂಡವಾಳ ಹೂಡಿದ್ದಾರೆ. ನಾಲ್ಕು ಹಾಡುಗಳನ್ನೊಳಗೊಂಡ ವೀಡಿಯೋ ಆಲ್ಬಂ "ಭಾಗ್ಯರಾಜ ನಮ್ಮ ಮುಖ್ಯಮಂತ್ರಿ" ಬಿಡುಗಡೆ ಕಾರ್ಯಕ್ರಮ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗ್ಯಾರೆಂಟಿ‌ ಯೋಜನೆಗಳ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವೀಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ, ಒಳ್ಳೆದಾಗಲಿ ಎಂದು ನಿರ್ಮಾಪಕ ಸನತ್ ಕುಮಾರ್, ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಶುಭ ಹಾರೈಸಿದ್ದಾರೆ.

ಭಾಗ್ಯರಾಜ ಹಾಡುಗಳ ಸಾಹಿತ್ಯ ಬರೆದು, ಸಂಗೀತದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಎಸ್.ನಾರಾಯಣ್ ಮಾತನಾಡಿ ಈವರೆಗೆ ನಾನು ಸಿನಿಮಾ ಹಾಡುಗಳನ್ನು ಮಾತ್ರ ಬರೆಯುತ್ತಿದ್ದೆ‌. ಮೊದಲಬಾರಿಗೆ ಒಬ್ಬ ಜನಪ್ರಿಯ ಸಿಎಂ ಮಾಡಿದ ಸಾಧನೆಗಳ‌ನ್ನು ಕಂಡು ಅವರ ಬಗ್ಗೆ ಬರೆಯಬೇಕು ಅನ್ನಿಸಿತು, ಇದು ಹೊಗಳಿಕೆಯಲ್ಲ, ನನಗನಿಸಿದ್ದನ್ನು ಬರೆದಿದ್ದೇನೆ ಎಂದು ಹೇಳಿದ್ದಾರೆ.

ಕರ್ನಾಟಕ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಸರಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಕೊಟ್ಟ ಮಾತಿಗೆ ತಪ್ಪದೆ ಸರಕಾರವು ಈ ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ವಿದ್ಯುತ್‌, ಉಚಿತ ಬಸ್‌ ಪ್ರಯಾಣ, ಗೃಹಲಕ್ಷ್ಮಿ ಯೋಜನೆಗಳ ಮೂಲಕ ಜನರಿಗೆ ಹಲವು ಕೊಡುಗೆಗಳನ್ನು ನೀಡಿದೆ. ಇದೀಗ ಈ ಯೋಜನೆಗಳೇ ಹಾಡುಗಳಾಗಿವೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದೇ ಹಾಡುಗಳು ಇನ್ಮುಂದೆ ಎಲ್ಲೆಡೆ ಕೇಳಿಸಿದರೂ ಅಚ್ಚರಿಯಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ