Sandalwood News:ಸ್ವಾತಂತ್ರ್ಯೋತ್ಸವದಂದೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಐವರು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು;ಶುಭ ಹಾರೈಸಿದ ಫ್ಯಾನ್ಸ್
Aug 15, 2023 04:56 PM IST
ಭಾರತಿ ವಿಷ್ಣುವರ್ಧನ್, ನಾಗತಿಹಳ್ಳಿ ಚಂದ್ರಶೇಖರ್, ಅರ್ಜುನ್ ಸರ್ಜಾ, ರಾಘವೇಂದ್ರ ರಾಜ್‌ಕುಮಾರ್, ಸುಹಾಸಿನಿ ಮಣಿರತ್ನಂ ಜನ್ಮದಿನ
ದೇಶಾದ್ಯಂತ ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಆಗಸ್ಟ್ 15 ಒಂದೆಡೆ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಆದರೆ ಸಿನಿಮಾ ಸೆಲೆಬ್ರಿಟಿಗಳಾದ ಭಾರತಿ ವಿಷ್ಣುವರ್ಧನ್, ನಾಗತಿಹಳ್ಳಿ ಚಂದ್ರಶೇಖರ್, ಅರ್ಜುನ್ ಸರ್ಜಾ, ರಾಘವೇಂದ್ರ ರಾಜ್‌ಕುಮಾರ್, ಸುಹಾಸಿನಿ ಮಣಿರತ್ನಂ ಜನ್ಮ ದಿನ ಕೂಡಾ ಹೌದು.
ಮೆಚ್ಚಿನ ನಟ, ನಟಿ, ನಿರ್ದೇಶಕನಿಗೆ ಸಿನಿಪ್ರಿಯರು ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸುತ್ತಿದ್ದಾರೆ. ಶಿವಣ್ಣ, ತಮ್ಮ ಪ್ರೀತಿಯ ತಮ್ಮನಿಗೆ ಬರ್ತ್‌ಡೇ ಶುಭ ಕೋರಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಮೇಷ್ಟ್ರು, ಭಾರತಿ ವಿಷ್ಣುವರ್ಧನ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಸುಹಾಸಿನಿ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಭಾರತಿ ವಿಷ್ಣುವರ್ಧನ್
ಭದ್ರಾವತಿ ಮೂಲದ ಭಾರತಿದೇವಿ ರಾವ್ ಹುಟ್ಟಿದ್ದು 15 ಆಗಸ್ಟ್ 1950 ರಲ್ಲಿ. ಈಗ ಅವರಿಗೆ 73 ವರ್ಷ ವಯಸ್ಸು. 1966ರಲ್ಲಿ ಲವ್ ಇನ್ ಬೆಂಗಳೂರು ಚಿತ್ರದ ಮೂಲಕ ಭಾರತಿ ಚಿತ್ರರಂಗಕ್ಕೆ ಬಂದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಪ್ರಭಾಕರ್ ಸೇರಿದಂತೆ ಅನೇಕ ನಟರೊಂದಿಗೆ ಭಾರತಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ. 1975ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕೈ ಹಿಡಿದಿದ್ದ ಭಾರತಿ ಅವರಿಗೆ ಕೀರ್ತಿ ಹಾಗೂ ಚಂದನ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಳಿಯ ಅನಿರುದ್ಧ್ ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ಎಂದು ಶುಭ ಕೋರಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್
ಅಧ್ಯಾಪಕ, ಕತೆಗಾರ, ಕಾದಂಬರಿಗಾರ,ಅಂಕಣಕಾರ, ಸಂಘಟಕ, ಪ್ರಕಾಶಕ... ಹೀಗೆ ಬಹುಮುಖ ಪ್ರತಿಭೆ ಆಗಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಇಂದು 65ನೇ ಹುಟ್ಟುಹಬ್ಬದ ಸಂಭ್ರಮ. 1986ರಲ್ಲಿ ತೆರೆ ಕಂಡ ಕಾಡಿನ ಬೆಂಕಿ ಚಿತ್ರದ ಮೂಲಕ ಚಂದ್ರಶೇಖರ್ ಬರಹಗಾರರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆಯಿತು. 1991ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಉಂಡೂ ಹೋದ ಕೊಂಡೂ ಹೋದ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು. ಇದುವರೆಗೂ ಅನೇಕ ಹಿಟ್ ಸಿನಿಮಾಗಳನ್ನು ಮೇಷ್ಟ್ರು, ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.
ಸುಹಾಸಿನಿ
ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಕೂಡಾ ಇಂದು ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ತಮಿಳುನಾಡಿಗೆ ಸೇರಿದ ಸುಹಾಸಿನಿ 15 ಆಗಸ್ಟ್ 1961ರಲ್ಲಿ ಜನಿಸಿದರು. ಸುಹಾಸಿನಿಗೆ ಇಂದು 63ನೇ ಬರ್ತ್‌ಡೇ ಸಂಭ್ರಮ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಸುಹಾಸಿನಿ ನಟಿಸಿದ್ದಾರೆ. ಸುಹಾಸಿನಿ ಮೊದಲು ನಟಿಸಿದ ಕನ್ನಡ ಸಿನಿಮಾ 1983ರಲ್ಲಿ ತೆರೆ ಕಂಡ ಬೆಂಕಿಯಲ್ಲಿ ಅರಳಿದ ಹೂವು. ಈ ಚಿತ್ರದ ನಟನೆಗಾಗಿ ಸುಹಾಸಿನಿಗೆ ಉತ್ತಮ ನಟಿ ವಿಭಾಗದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿತ್ತು. ಅಲ್ಲಿಂದ ಆಚೆಗೆ ಸುಹಾಸಿನಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆ ಕಂಡ ಮಾನ್ಸೂನ್ ರಾಗ ಚಿತ್ರದಲ್ಲಿ ಕೂಡಾ ನಟಿಸಿದ್ದಾರೆ.
ಅರ್ಜುನ್ ಸರ್ಜಾ
ಅರ್ಜುನ ಸರ್ಜಾ ಕನ್ನಡಿಗರಾದರೂ ಸ್ಟಾರ್ ನಟನಾಗಿ ಹೆಸರು ಮಾಡಿದ್ದ ತಮಿಳು ಚಿತ್ರರಂಗದಲ್ಲಿ. 15 ಆಗಸ್ಟ್ 1962ರಲ್ಲಿ ತುಮಕೂರಿನಲ್ಲಿ ಹುಟ್ಟಿದ ಅರ್ಜುನ್ ಸರ್ಜಾ ತಂದೆ ಶಕ್ತಿ ಪ್ರಸಾದ್ ತಂದೆ ಸ್ಯಾಂಡಲ್‌ವುಡ್‌ನಲ್ಲಿ ಖಳನಟರಾಗಿ ಹೆಸರು ಮಾಡಿದ್ದವರು. 1981ರಲ್ಲಿ ತೆರೆ ಕಂಡ ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಅರ್ಜುನ್ ಸರ್ಜಾ ಬಾಲನಟನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು. ಮಳೆ ಬಂತು ಮಳೆ ಚಿತ್ರದ ಮೂಲಕ ನಾಯಕನಾಗಿ ಬಣ್ಣ ಹಚ್ಚಿದ ಇವರು ನಂದ್ರಿ ಚಿತ್ರದ ಮೂಲಕ ತಮಿಳಿಗೆ ಹೋದರು. ತೆಲುಗಿನಲ್ಲಿ ಕೂಡಾ ನಟಿಸಿರುವ ಅರ್ಜುನ್ ಸರ್ಜಾ ಅಭಿಮಾನಿಗಳ ಪಾಲಿನ ಆಕ್ಷನ್ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ, ನಿರ್ಮಾಪಕ, ವಿತರಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. 61ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಅರ್ಜುನ್ ಸರ್ಜಾಗೆ ಚಿತ್ರರಂಗ ಶುಭ ಹಾರೈಸುತ್ತಿದೆ.
ರಾಘವೇಂದ್ರ ರಾಜ್‌ಕುಮಾರ್
ಡಾ ರಾಜ್‌ಕುಮಾರ್ ಅವರ 2ನೇ ಮಗ ರಾಘವೇಂದ್ರ ರಾಜ್‌ಕುಮಾರ್ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಸಿನಿ ಗಣ್ಯರು ರಾಘಣ್ಣ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಿದ್ದಾರೆ. ಶಿವರಾಜ್‌ಕುಮಾರ್, ತಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ''ತಮ್ಮನಾಗಿ ನನಗೆ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ, ಕುಟುಂಬದ ಪ್ರತಿಯೊಬ್ಬರ ಜೊತೆಗೂ ಸ್ಫೂರ್ತಿಯಾಗಿ ನಿಂತಿದ್ದೀಯ. ಯಶಸ್ಸು, ಆಯಸ್ಸು, ಸುಖ, ಸಂತೋಷ ಎಲ್ಲವೂ ನಿನ್ನ ಪಾಲಿಗಿರಲಿ ಹುಟ್ಟುಹಬ್ಬದ ಶುಭಾಶಯಗಳು ರಾಘು'' ಎಂದು ಶಿವಣ್ಣ ಬರೆದುಕೊಂಡಿದ್ದಾರೆ.